ರಾಜ್ಯದ ಸರಕಾರಿ ಶಾಲಾ ಶಿಕ್ಷಕರಿಗೆ ಮಹತ್ವದ ಮಾಹಿತಿ!!!
ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಹಾಗೂ ಸಕಾಲ ಸಚಿವರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ.ನಾಗೇಶ್ ( Education Minister BC Nagesh ) ಅವರು, ಕರ್ನಾಟಕ ರಾಜ್ಯದ ಶಾಲಾ ಶಿಕ್ಷಣ ಇಲಾಖೆಯಡಿ ನೂತನವಾಗಿ ಶಾಲಾ ಶಿಕ್ಷಣ ಸಚಿವರ ಜಾಲತಾಣ (EM Web Portal) ಹಾಗೂ ಶಿಕ್ಷಕರ ಕಲ್ಯಾಣ ನಿಧಿಯ 8 ಸೇವೆಗಳನ್ನು ಆನ್ಲೈನ್ ಮೂಲಕ ಒದಗಿಸುವ ತಂತ್ರಾಂಶವನ್ನು ಸಮರ್ಪಿಸಿದರು.
ಆ ಬಳಿಕ ಮಾತನಾಡಿದ ಅವರು, ‘ಶಾಲಾ ಶಿಕ್ಷಣ ಇಲಾಖೆಯ ಕುರಿತು ಅಗತ್ಯ ಮಾಹಿತಿ ಒದಗಿಸುವ ನೂತನ ವೆಬ್ ಪೋರ್ಟಲ್ schooleducationminister.karnataka.gov.in ಅಭಿವೃದ್ಧಿಪಡಿಸಲಾಗಿದೆ. ಈ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಸಾರ್ವಜನಿಕರು, ಸಂಘ-ಸಂಸ್ಥೆಗಳು, ಶಿಕ್ಷಣ ಇಲಾಖೆಯ ನೌಕರರು ಇಲಾಖೆಗೆ ಸಂಬಂಧಿಸಿದ ಕುಂದು-ಕೊರತೆಗಳು, ದೂರುಗಳು, ಸಲಹೆಗಳು, ಅಭಿಪ್ರಾಯಗಳನ್ನು ನೀಡಬಹುದಾಗಿದೆ. ಪೋರ್ಟಲ್ ಮೂಲಕ ಸಲ್ಲಿಕೆಯಾಗುವ ದೂರುಗಳನ್ನು ಪರಿಹರಿಸುವುದು ಮತ್ತು ದೂರಿನ ಸ್ಥಿತಿ-ಗತಿಯನ್ನು ಆನ್ಲೈನ್ ಮೂಲಕವೇ ಟ್ರ್ಯಾಕ್ ಮಾಡುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ’ ಎಂಬ ಮಾಹಿತಿಯನ್ನು ನೀಡಿದರು.
ಶಿಕ್ಷಕರು ತಾವು ಕುಳಿತ ಸ್ಥಳದಿಂದಲೇ ಅರ್ಜಿ ಸಲ್ಲಿಸುವ ಮೂಲಕ ಸೇವೆ ಈ ಕೆಳಗಿನ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ. ಕಲ್ಯಾಣ ನಿಧಿ ಸೇವೆಗಳು ಆನ್ಲೈನ್ http://kstbfonline.karnataka.gov.in ನಲ್ಲಿ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ಸದಸ್ಯತ್ವ, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ವೈದ್ಯಕೀಯ ಪರಿಹಾರ ಧನಸಹಾಯ, ಶಿಕ್ಷಕರ ಮಕ್ಕಳಿಗೆ ಉನ್ನತ ವ್ಯಾಸಂಗ ಧನ ಸಹಾಯ ಸೇರಿದಂತೆ ಇನ್ನಿತರ ಸೇವೆಗಳನ್ನು ಶಿಕ್ಷಕರು ಪಡೆದುಕೊಳ್ಳ ಬಹುದು. ಅಷ್ಟು ಮಾತ್ರವಲ್ಲದೇ ಶಿಕ್ಷಕರು ಈ ಸೇವೆಗಳಿಗಾಗಿ ಬೆಂಗಳೂರಿಗೆ ಬರುವುದು ತಪ್ಪಲಿದೆ ಎಂದು ಸಚಿವರು ಮಾಹಿತಿ ನೀಡಿದರು.