ಆನ್ಲೈನ್ ನಲ್ಲಿ ಪ್ಯಾಂಟಿ ಶಾಪಿಂಗ್ ಮಾಡ್ತೀರಾ? ಹಾಗಾದರೆ ಈ ವಿಷಯಗಳತ್ತ ಗಮನ ಕೊಡಿ
ಆಗ ಕಾಲ ಹೇಗಿತ್ತು ಎಂದರೆ ಏನೇ ಒಂದು ವಸ್ತು ಬೇಕಾದರೂ ಮಾರುಕಟ್ಟೆಗೆ ಹೋಗಿ ತರಬೇಕಾಗಿತ್ತು. ಆದರೆ ಈಗ ಕಾಲ ಬದಲಾಗಿದೆ. ತಂತ್ರಜ್ಞಾನ ಹೆಚ್ಚಿದೆ. ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಖರೀದಿ ಹೆಚ್ಚಾಗಿದೆ. ಜನರಿಗೆ ಆನ್ಲೈನ್ ಖರೀದಿಯಿಂದ ಅನೇಕ ಲಾಭವಿದೆ. ಒಂದು ಕಡೆಯಿಂದ ಇನ್ನೊಂದು ಕಡೆ ಓಡಾಡಬೇಕಾಗಿಲ್ಲ, ವಸ್ತುಗಳ ಖರೀದಿಗೆ ಸಮಯ ಹೊಂದಿಸಬೇಕಾಗಿಲ್ಲ ಹಾಗೆ ನೂಕುನುಗ್ಗಲಿನ ಸಮಸ್ಯೆಯಿಲ್ಲ. ಮನೆಯಲ್ಲಿಯೇ ಕುಳಿತು ಆನ್ಲೈನ್ ನಲ್ಲಿ ವಸ್ತುಗಳನ್ನು ಖರೀದಿ ಮಾಡಬಹುದು.
ಅಂದ ಹಾಗೇ ಈಗ ಇ – ವೆಬ್ಸೈಟ್ ಗಳಲ್ಲಿ ಅನೇಕ ಆಫರ್ ಇದೆ. ಈ ಆನ್ಲೈನ್ ಆಫರ್ ನಲ್ಲಿ ಈಗ ನಾವು ಮಾತಾಡೋಕೆ ಹೋಗ್ತಾ ಇರೋದು ಮಹಿಳೆಯ ಪ್ಯಾಂಟಿ ಖರೀದಿ ಬಗ್ಗೆ. ಕೆಲವೊಂದು ಮಹಿಳೆಯರು ಪ್ಯಾಂಟಿ ಖರೀದಿ ಮಾಡುವಾಗ ಮುಜುಗರಕ್ಕೊಳಗಾಗೋದು ಸಹಜ. ಅಂಗಡಿಗೆ ಹೋಗಿ ಪ್ಯಾಂಟಿ ತೋರಿಸಿ ಎನ್ನಲು ಅನೇಕ ಮಹಿಳೆಯರು ನಾಚಿಕೊಳ್ತಾರೆ. ಪ್ಯಾಂಟಿ ಖರೀದಿಯನ್ನು ಬೇರೆಯವರು ನೋಡಿದ್ರೆ ಎಂಬ ನಾಚಿಕೆ ಅವರಲ್ಲಿರುತ್ತದೆ. ಕದ್ದು ಮುಚ್ಚಿ ಪ್ಯಾಂಟಿ ಖರೀದಿ ಮಾಡ್ತಿದ್ದ ಮಹಿಳೆಯರು ಆನ್ಲೈನ್ ಖರೀದಿ ಸುಲಭ ಮಾಡಿದೆ. ಆದರೆ ಆನ್ಲೈನ್ ನಲ್ಲಿ ಪ್ಯಾಂಟಿ ಖರೀದಿ ಮಾಡೋ ಮಹಿಳೆಯರೇ ಈ ಕೆಲ ಸಂಗತಿ ನೆನಪಿಡಿ.
ಮಹಿಳೆಯರೇ ನೀವು ಆನ್ಲೈನ್ (Online) ನಲ್ಲಿ ಪ್ಯಾಂಟಿ (Panty) ಖರೀದಿ ಮಾಡುವ ಮೊದಲು ನೀವು ನಿಮ್ಮ ದೇಹದ ಆಕಾರದ ಬಗ್ಗೆ ಮೊದಲು ತಿಳಿದುಕೊಳ್ಳಬೇಕು. ನಿಮ್ಮ ದೇಹದ ಆಕಾರಕ್ಕೆ ತಕ್ಕ ಹಾಗೇ ಪ್ಯಾಂಟಿ ಖರೀದಿ ಮಾಡಿ. ನಿಮ್ಮ ಹೊಟ್ಟೆ ದೊಡ್ಡದಾಗಿದ್ದರೆ ನೀವು ಹೈ ವೆಸ್ಟ್ ಪ್ಯಾಂಟಿ ಖರೀದಿ ಮಾಡುವುದು ಉತ್ತಮ.
ಎರಡನೆಯದಾಗಿ, ನೀವು ಯಾವ ರೀತಿಯ ಡ್ರೆಸ್ (Dress) ಧರಿಸುತ್ತಿದ್ದೀರಿ ಎಂಬುದನ್ನು ಕೂಡ ಇಲ್ಲಿ ಗಮನಾರ್ಹ ವಿಷಯ. ಎಲ್ಲ ಡ್ರೆಸ್ ಗೆ ಒಂದೇ ರೀತಿಯ ಪ್ಯಾಂಟಿ ಸರಿ ಹೊಂದುವುದಿಲ್ಲ. ಪ್ಯಾಂಟಿಯ ದಪ್ಪ ಪಟ್ಟಿ, ಡ್ರೆಸ್ ನಲ್ಲಿ ಎದ್ದು ಕಾಣುವ ಸಾಧ್ಯತೆಯಿರುತ್ತದೆ. ಅದು ಮುಜಗರಕ್ಕೀಡುಮಾಡಬಹುದು. ಹಾಗಾಗಿ ಡ್ರೆಸ್ ಗೆ ತಕ್ಕ ಪ್ಯಾಂಟಿ ಖರೀದಿ ಮಾಡಿದರೆ ಮುಜುಗುರ ಪಡೋದು ತಪ್ಪುತ್ತೆ.
ಮೂರನೆಯದಾಗಿ, ಪ್ಯಾಂಟಿ ಖರೀದಿ ಮಾಡುವ ಮೊದಲು ಗಾತ್ರದ ಬಗ್ಗೆ ಗಮನವಿರಲಿ. ನಿಮ್ಮ ಸೊಂಟದ ಗಾತ್ರಕ್ಕೆ ತಕ್ಕಂತೆ ನೀವು ಪ್ಯಾಂಟಿ ಖರೀದಿಸಬೇಕು. ಅನೇಕ ವೆಬ್ಸೈಟ್ ನಲ್ಲಿ ಪ್ಯಾಂಟಿಯನ್ನು ವಾಪಸ್ ಪಡೆಯುವುದಿಲ್ಲ. ಹಾಗಾಗಿ ನೀವು ಖರೀದಿಸಿದ ಪ್ಯಾಂಟಿ ವೇಸ್ಟ್ ಆಗುತ್ತದೆ. ಹಾಗಾಗಿ ಖರೀದಿ ಮಾಡುವ ಮೊದಲು ಯೋಚನೆ ಮಾಡಿ ಖರೀದಿಸಿ.
ನಾಲ್ಕನೆಯದಾಗಿ ಆನ್ಲೈನ್ನಲ್ಲಿ ಪ್ಯಾಂಟಿಗಾಗಿ ಶಾಪಿಂಗ್ ಮಾಡುವವರೇ ಗಮನಿಸಿ, ಪ್ರತಿಯೊಂದು ಬ್ರ್ಯಾಂಡ್ ವಿಭಿನ್ನ ಗಾತ್ರ ಹೊಂದಿದೆ. ಒಂದು ಬ್ರ್ಯಾಂಡ್ ಗಾತ್ರದ ಪ್ರಕಾರ ನೀವು ಇನ್ನೊಂದು ಬ್ರ್ಯಾಂಡ್ ಪ್ಯಾಂಟಿ ಖರೀದಿಸಲು ಸಾಧ್ಯವಿಲ್ಲ. ಹಾಗಾಗಿ ಪ್ಯಾಂಟಿ ಕೆಳಗೆ ನೀಡುವ ಗಾತ್ರವನ್ನು ಪರೀಕ್ಷಿಸುವುದು ಉತ್ತಮ.
ಐದನೆಯದು ಪ್ಯಾಂಟಿಯ ಬಣ್ಣ. ಖರೀದಿ ಸಮಯದಲ್ಲಿ ಗಮನ ನೀಡಿ. ಬಿಳಿ ಬಣ್ಣದ ಲೆಗ್ಗಿನ್ಸ್ ಧರಿಸುವ ವೇಳೆ ನಿಮ್ಮ ಪ್ಯಾಂಟಿ ಬಣ್ಣ ಎದ್ದು ಕಾಣುವ ಸಾಧ್ಯತೆಯಿರುತ್ತದೆ. ಹಾಗಾಗಿ ಅದನ್ನು ಪರೀಕ್ಷಿಸಿ ನಂತರ ಖರೀ ದಿ ಮಾಡಿ.
ಆರನೆಯದು, ಪ್ಯಾಂಟಿ ಖರೀದಿ ಮಾಡುವ ಮೊದಲು ರಿವ್ಯೂ ನೋಡಿ. ಸರಿಯಾಗಿ ಪರಿಶೀಲನೆ ಮಾಡಿ. ಏಕೆಂದರೆ ಈಗಾಗಲೇ ಖರೀದಿ ಮಾಡಿದವರು ಬ್ರ್ಯಾಂಡ್ ಬಗ್ಗೆ ಮಾಹಿತಿ ನೀಡಿರುತ್ತಾರೆ.
ಏಳು, ಉತ್ತಮ ಬ್ರ್ಯಾಂಡ್ ಪ್ಯಾಂಟಿ ಖರೀದಿ ಮಾಡಿ. ಆನ್ಲೈನ್ ನಲ್ಲಿ ಈ ಬಗ್ಗೆ ವೈರೈಟಿ ವೈರೈಟಿ ಪ್ಯಾಂಟಿ ಇದೆ. ಅತಿ ಟೈಟ್ ಇರುವ ಪ್ಯಾಂಟಿ ಧರಿಸುವುದು ದೇಹಕ್ಕೆ ಉತ್ತಮ ಅಲ್ಲ. ಹಾಗೆನೇ ಪ್ಯಾಂಟಿಯ ಫ್ಯಾಬ್ರಿಕ್ ಕಡೆ ಗಮನ ಕೊಡಿ. ಏಕೆಂದರೆ ಕೆಟ್ಟ ಗುಣಮಟ್ಟದ ಬಟ್ಟೆ ಸೋಂಕಿಗೆ ದಾರಿ ಮಾಡಿಕೊಡಬಹುದು. ಕಡಿಮೆ ರೇಟ್ ಇದೆ ಎಂದು ಆಸೆಗೆ ಬಿದ್ದು ಪ್ಯಾಂಟಿ ಖರೀದಿ ಮಾಡಬೇಡಿ.