ಪುತ್ತೂರು : ಕೇರಳದ ನಿವೃತ್ತ ಐಪಿಎಸ್ ಅಧಿಕಾರಿಯಿಂದಲೇ ಭಯೋತ್ಪಾದನಾ ತರಬೇತಿ | ಮಿತ್ತೂರಿನ ಹಾಲ್‌ನಲ್ಲಿ ನಡೆಯುತ್ತಿತ್ತು ಉಗ್ರ ತರಬೇತಿ
ಪುತ್ತೂರು : ದೇಶವಿರೋಧಿ ಹಿನ್ನೆಲೆಯಲ್ಲಿ ದೇಶಾದ್ಯಂತ ಪಿಎಫ್‌ಐ ಮತ್ತು ಅದರ ಅಂಗಸಂಸ್ಥೆಗಳನ್ನು ಕೇಂದ್ರ ಸರಕಾರ ನಿಷೇಧಿಸಿದ ಬಳಿಕ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದು ಆತಂಕಕಾರಿ ಘಟನೆಗಳು ಬೆಳಕಿಗೆ ಬರುತ್ತಿದೆ.
ಭಯೋತ್ಪಾದಕ ಚಟುವಟಿಕೆ ಮೂಲಕ ದೇಶದ್ರೋಹಿ ಕೃತ್ಯಗಳನ್ನು ನಡೆಸುತ್ತಿರುವ ಸಂಘಟನೆಗಳ ನಾಯಕರ ಮೇಲೆ ತೀವ್ರ ನಿಗಾ ಇರಿಸಿರುವ ಎನ್.ಐ.ಎ. ಅಧಿಕಾರಿಗಳು ದೇಶಾದ್ಯಂತ ದಾಳಿ ನಡೆಸಿ ಹಲವರನ್ನು ಬಂಧಿಸಿ ತನಿಖೆಗೆ ಒಳಪಡಿಸುತ್ತಿದ್ದಾರೆ.
ಕರ್ನಾಟಕದ ಪಿಎಫ್‌ಐ ಮುಖಂಡನ್ನು ವಿಚಾರಣೆಗೊಳಪಡಿಸಿದಾಗ ಆಘಾತಕಾರಿ ಅಂಶಗಳು ಬಯಲಾಗಿದೆ.
ಪುತ್ತೂರು ತಾಲೂಕಿನ ಕಬಕ ಸಮೀಪದ ಮಿತ್ತೂರಿನಲ್ಲಿರುವ ಫ್ರೀಡಂ ಹಾಲ್ ನಲ್ಲಿ ಉಗ್ರಗಾಮಿ ಚಟುವಟಿಕೆಗಳು ನಡೆಯುತ್ತಿದ್ದವು ಎಂಬ ಅಂಶ ಬಯಲಾಗಿದ್ದು ಸ್ವತಃ ಪೊಲೀಸ್ ಅಧಿಕಾರಿಗಳೇ ಬೆಚ್ಚಿ ಬಿದ್ದಿದ್ದಾರೆ. ಮಿತ್ತೂರಿನ ಫ್ರೀಡಂ ಹಾಲ್ ಗೆ ಇತ್ತೀಚೆಗೆ ದಾಳಿ ನಡೆಸಿದ್ದ ಅಧಿಕಾರಿಗಳು ಹಲವು ಮಹತ್ವದ ಮಾಹಿತಿ ಕಲೆ ಹಾಕಿದ್ದರು.
ಹಲವು ದಾಖಲೆಗಳನ್ನು ವಶ ಪಡಿಸಿಕೊಂಡಿದ್ದರು. ಮಹಜರು ಪ್ರಕ್ರಿಯೆ ಪೂರ್ಣಗೊಳಿಸಿ ತನಿಖೆ ತೀವ್ರಗೊಳಿಸಿದ್ದರು. ಬಂಧಿತ ಪಿಎಫ್‌ಐ ಮುಖಂಡರು ಇದೀಗ ತನಿಖಾ ದಳದ ಅಧಿಕಾರಿಗಳ ಎದುರು ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.
ಮಿತ್ತೂರು ಫ್ರೀಡಂ ಸಭಾಂಗಣದಲ್ಲಿ ಭಯೋತ್ಪಾದನೆಯ ತರಬೇತಿ ನಡೆಯುತ್ತಿತ್ತು, ಕೇರಳದ ನಿವೃತ್ತ ಪೊಲೀಸ್ ಅಧಿಕಾರಿ ಓರ್ವರು ಬಂದು ತರಬೇತಿ ನೀಡುತ್ತಿದ್ದರು.
ಯಾವ ರೀತಿ ಚಟುವಟಿಕೆ ನಡೆಸಬೇಕು, ಪೊಲೀಸ್ ಇಲಾಖೆಯನ್ನು ಹೇಗೆ ಸುಧಾರಿಸಬೇಕು, ಯಾವ ರೀತಿ ಗುಪ್ತ ಚಟುವಟಿಕೆ ನಡೆಸಬೇಕು, ಪೊಲೀಸರಿಗೆ ಸಿಕ್ಕಿ ಬಿದ್ದರೆ ಏನೆಲ್ಲಾ ಮಾಡಬೇಕು, ಯಾವ ರೀತಿಯಲ್ಲಿ ಟಾರ್ಗೆಟ್ ರೀಚ್ ಆಗಬೇಕು, ಯಾರನ್ನು ಗುರಿಯಾಗಿಟ್ಟುಕೊಳ್ಳಬೇಕು ಎಂಬಿತ್ಯಾದಿ ಗಂಭೀರ ವಿಚಾರಗಳ ಕುರಿತು ನಿವೃತ್ತ ಐಪಿಎಸ್ ಅಧಿಕಾರಿ ತರಬೇತಿ ನೀಡಿರುವುದು ಇದೀಗ ಬಹಿರಂಗವಾಗಿದೆ.