ಟೇಕಾಫ್ ಆಗಿ ಕೆಲವೇ ದೂರ ಪ್ರಯಾಣಿಸುತ್ತಿದ್ದಂತೆ ವಿದ್ಯುತ್ ತಂತಿಗೆ ಡಿಕ್ಕಿ ಹೊಡೆದ ಹೆಲಿಕಾಪ್ಟರ್ – ವೀಡಿಯೋ ವೈರಲ್
ಟೇಕಾಫ್ ಆಗಿ ಕೆಲವೇ ದೂರ ಪ್ರಯಾಣಿಸುತ್ತಿದ್ದಂತೆ ವಿದ್ಯುತ್ ತಂತಿಗೆ ಹೆಲಿಕಾಪ್ಟರ್ ಡಿಕ್ಕಿ ಹೊಡೆದು ನೆಲಕ್ಕೆ ಅಪ್ಪಳಿಸಿ ಪತನಗೊಂಡಿರುವ ಘಟನೆ ವರದಿಯಾಗಿದೆ.
ಈ ಘಟನೆ ಬ್ರೆಜಿಲ್ ರಾಜ್ಯ ಮಿನಾಸ್ ಗೆರೈಸ್ನ ಎಂಜೆನ್ಹೈರೊ ಕ್ಯಾಲ್ಡಾಸ್ ಎಂಬಲ್ಲಿ ಬುಧವಾರ ಸಂಭವಿಸಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮರುಚುನಾವಣೆಗೆ ಸ್ಪರ್ಧಿಸುತ್ತಿರುವ ಬ್ರೆಜಿಲ್ ಸಂಸದ ಹರ್ಸಿಲಿಯೊ ಅರಾಜೊ ಡಿನಿಜ್ (59) ಮತ್ತು ಗವರ್ನಡಾರ್ ವಲಡಾರೆಸ್‌ನ ಉಪ ಮೇಯರ್ ಡೇವಿಡ್ ಬರೊಸೊ (45) ಮತ್ತು ಫ್ಯಾಬಿಯಾನೊ ರುಫಿನೊ ಎಂಬ ಪೈಲಟ್ ಮತ್ತು ಡಿನಿಜ್ ಅವರ ಪ್ರಚಾರ ತಂಡದ ಸದಸ್ಯ ಲುಸಿಯಾನೊ ಸಹ ಚಾಪರ್ನಲ್ಲಿದ್ದರು. ಆರಂಭದಲ್ಲಿ ಗಾಳಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ಚಾಪರ್, ಕೆಲವೇ ದೂರ ಕ್ರಮಿಸುತ್ತಿದ್ದಂತೆ ವಿದ್ಯುತ್ ತಂತಿಗೆ ಡಿಕ್ಕಿ ಹೊಡೆದು, ನೆಲಕ್ಕೆ ಅಪ್ಪಳಿಸಿದೆ.
ಚಾಪರ್ ನಿಯಂತ್ರಣ ಕಳೆದುಕೊಂಡು ಎಲೆಕ್ಟ್ರಿಕಲ್ ಗ್ರಿಡ್‌ಗೆ ಡಿಕ್ಕಿ ಹೊಡೆದು ಹೆದ್ದಾರಿಯ ಬದಿಯಲ್ಲಿ ಬಿದ್ದಿದ್ದು, ಪತನದ ಬಳಿಕ ಗಂಭೀರವಾಗಿ ಗಾಯಗೊಂಡಿದ್ದ ಅವರೆಲ್ಲರನ್ನೂ ತಕ್ಷಣವೇ ರಕ್ಷಣೆ ಮಾಡಿ ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ದಿ ಸನ್ ವರದಿ ಮಾಡಿದೆ.