ತೆಂಗಿನಕಾಯಿ, ಕೊಬ್ಬರಿ ದರ ಭಾರೀ ಇಳಿಕೆ | ಕಂಗಾಲಾದ ರೈತರು
ಕೇರಳದಲ್ಲಿ ತೆಂಗಿನಕಾಯಿ ಹಾಗೂ ಕೊಬ್ಬರಿ ಬೆಲೆ ಭಾರೀ ಕುಸಿತ ಕಂಡಿರುವ ವರದಿಯಾಗಿದೆ. ಎಂದಿನಂತೆ ಈ ಬಾರಿಯೂ ತೆಂಗು ಇಳುವರಿ ಹೆಚ್ಚಾಗಿದೆ. ಹಾಗಾಗಿ ತೆಂಗಿನಕಾಯಿ ಉತ್ಪಾದನೆ ದುಪ್ಪಟ್ಟು ಆಗುವುದರೊಂದಿಗೆ ಕೊಬ್ಬರಿ ಬೆಲೆ ಇಳಿಮುಖವಾಗಿದೆ.
ನಾಫೆಡ್ ಕೊಬ್ಬರಿ ದಾಸ್ತಾನು ಹಾಗೂ ಕೃಷಿ ಇಲಾಖೆ ಹಸಿ ತೆಂಗಿನಕಾಯಿಗೆ ಬೆಂಬಲ ಬೆಲೆ ನೀಡಿ ಖರೀದಿ ಮಾಡುವ ಬಗ್ಗೆ ನೀಡಿದ ಹೇಳಿಕೆ ಘೋಷಣೆಯಲ್ಲಿಯೇ ಬಾಕಿಯಾಗಿರುವುದು ಕೃಷಿಕರಿಗೆ ಹಿನ್ನೆಡೆಯಾಗಿದೆ. ಕಳೆದ ನಾಲ್ಕು ತಿಂಗಳಿಂದ ಮಾರುಕಟ್ಟೆಯಲ್ಲಿ ತೆಂಗಿನಕಾಯಿ ದರದಲ್ಲಿ ಯಾವುದೇ ಚೇತರಿಕೆ ಕಂಡುಬಂದಿಲ್ಲ. ಈಗಾಗಲೇ ಹಲವು ಎಣ್ಣೆ ಗಿರಣಿಗಳು ಕೊಬ್ಬರಿ ಸಂಗ್ರಹ ನಿಲ್ಲಿಸಿದ್ದಾರೆ.
ಹಸಿ ತೆಂಗಿನಕಾಯಿ ಖರೀದಿಗೆ ಸರಕಾರವು ಕೆಜಿಗೆ 32 ರೂ. ಮತ್ತು ಕೊಬ್ಬರಿಗೆ ಖರೀದಿಗೆ ಕೆಜಿಗೆ 105.90 ರೂ.ಗೆ ನಿಗದಿ ಮಾಡಿತ್ತು. ಆದರೆ ಕೇಂದ್ರಗಳು ಇದರ ಬಗ್ಗೆ ಕಾರ್ಯಾಚರಿಸಲಿಲ್ಲ. ಕೇಂದ್ರ ಸರಕಾರದ ಮುಂದಿಟ್ಟಿರುವ ಸೂಚನೆಗಳನ್ನು ಪಾಲಿಸಲು ಸಾಧ್ಯವಾಗದ ಕಾರಣ ಕೆರಾಫೆಡ್ ಕೊಬ್ಬರಿ ಖರೀದಿಯಿಂದ ಹಿಂದೆ ಸರಿದಿರುವ ಮುಖ್ಯ ಕಾರಣದಿಂದ ಕೃಷಿಕರು ಕಂಗಲಾಗಿದ್ದಾರೆ ಎಂದೇ ಹೇಳಬಹುದು.
ಸಹಕಾರಿ ಸಂಘಗಳ ಮೂಲಕ ತೆಂಗಿನಕಾಯಿಗೆ ಬೆಂಬಲ ಬೆಲೆ ನೀಡಬೇಕು. ಆದರೆ ತೆಂಗಿನಕಾಯಿ ಸಂಗ್ರಹ ಯೋಜನೆ ವಿಫಲವಾಗಿದೆ. ಕೊಬ್ಬರಿ ಸಂಗ್ರಹಿಸುವವರು ಎಣ್ಣೆ, ತೆಂಗಿನಕಾಯಿ ವ್ಯಾಪಾರದಲ್ಲಿ ತೊಡಗಿಸಿಕೊಳ್ಳಬಾರದೆಂಬ ನಾಫೆಡ್ನ ನಿರ್ದೇಶನ ಕೇರಾಫೆಡ್ಗೆ ತಿರುಗೇಟು ಆಗಿದೆ ಎಂದು ಹೇಳಲಾಗಿದೆ.