ವಿದ್ಯಾರ್ಥಿ ನಿಲಯ ಸಿಗದೆ ಸಂಕಷ್ಟ ಎದುರಿಸುತ್ತಿದ್ದ ರಾಜ್ಯದ ವಿದ್ಯಾರ್ಥಿನಿಯರಿಗೆ ಗುಡ್ ನ್ಯೂಸ್!
ಬೆಂಗಳೂರು : ವಿದ್ಯಾರ್ಥಿ ನಿಲಯ ಸಿಗದೆ ಸಂಕಷ್ಟ ಎದುರಿಸುತ್ತಿದ್ದ ರಾಜ್ಯದ ವಿದ್ಯಾರ್ಥಿನಿಯರಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಗುಡ್ ನ್ಯೂಸ್ ದೊರೆತಿದ್ದು, ವಿದ್ಯಾರ್ಥಿ ನಿಲಯಗಳಲ್ಲಿ ಪ್ರವೇಶಾತಿ ಹೆಚ್ಚಿಸಿ ಆದೇಶ ಹೊರಡಿಸಿದೆ.
ಈ ಕುರಿತು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳಲ್ಲಿ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರವೇಶ ಒದಗಿಸುವ ಉದ್ದೇಶದಿಂದ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ ಶೇ.25 ರಷ್ಟು ಪ್ರವೇಶಾವಕಾಶ ಹೆಚ್ಚಿಸಲಾಗುತ್ತಿದೆ. ಇದೊಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಇತಿಹಾಸದಲ್ಲೇ ಮಹತ್ವದ ಹೆಜ್ಜೆಯಾಗಿದೆ ಎಂದು ತಿಳಿಸಿದ್ದಾರೆ.
ಇದರಿಂದ ಈವರೆಗೆ ವಿದ್ಯಾರ್ಥಿ ನಿಲಯ ಸಿಗದೆ ಸಂಕಷ್ಟ ಎದುರಿಸುತ್ತಿದ್ದ ರಾಜ್ಯದ ಸುಮಾರು 25 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಇದೀಗ ಅನುಕೂಲವಾಗಲಿದೆ. ಅಷ್ಟೇ ಅಲ್ಲದೆ, ಸುಮಾರು 250 ಹೊಸ ವಿದ್ಯಾರ್ಥಿ ನಿಲಯಗಳನ್ನು ತೆರೆಯುವ ಆರ್ಥಿಕ ಹೊರೆಯನ್ನು ತಪ್ಪಿಸಲಾಗಿದೆ ಎಂದು ಅವರು ತಿಳಿಸಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯಗಳಿಗೆ ಶೇ.25ರಷ್ಟು ಪ್ರವೇಶಾವಕಾಶ ಹೆಚ್ಚಿಸುವುದರಿಂದ ಉಂಟಾಗುವ ವೆಚ್ಚವನ್ನು, ವಿದ್ಯಾಸಿರಿ ಯೋಜನೆಗೆ ಒದಗಿಸುವ ಅನುದಾನದಿಂದ ಬಳಸಿಕೊಳ್ಳುವ ಇಲಾಖೆಯ ಪ್ರಸ್ತಾವನೆಗೆ ಆರ್ಥಿಕ ಇಲಾಖೆ ಅನುಮೋದನೆ ನೀಡಿದೆ. ಹೀಗಾಗಿ, ಈ ಯೋಜನೆಯನ್ನು ಪ್ರಸಕ್ತ ಸಾಲಿನಲ್ಲಿಯೇ ಅನುಷ್ಠಾನಗೊಳಿಸಲಾಗುವುದು ಎಂದು ಅವರು ಹೇಳಿದರು. ಈ ಪ್ರಸ್ತಾವನೆಯನ್ನು ಅನುಮೋದಿಸಿದ ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಈ ಪ್ರಸ್ತಾವನೆಯ ಅನುಷ್ಠಾನಕ್ಕೆ 54.20 ಕೋಟಿ ರೂ. ಅನುದಾನ ಬೇಕಾಗಿದ್ದು, ತುರ್ತಾಗಿ 7.50 ಕೋಟಿ ರೂ ಅನುದಾನ ಒದಗಿಸುವಂತೆ ಹಾಗೂ ಸಂಖ್ಯಾಬಲ ಹೆಚ್ಚಳದ ಜೊತೆಯಲ್ಲಿಯೇ ಅಗತ್ಯವಿರುವ 190 ಅಡುಗೆಯವರು, 328 ಅಡುಗೆ ಸಹಾಯಕರು ಸೇರಿ ಒಟ್ಟು 518 ಹುದ್ದೆಗಳನ್ನು ಸೃಜಿಸಲು ಕೋರಲಾಗಿತ್ತು.