ಮಂಗಳೂರಿನಲ್ಲಿ ದಸರಾ ಬದಲಿಗೆ ನವರಾತ್ರಿಗೆ ರಜೆ
ಪ್ರತಿವರ್ಷದಂತೆ ಈ ವರ್ಷವು ರಾಜ್ಯದ ಶಾಲೆಗಳ ಶೈಕ್ಷಣಿಕ ಚಟುವಟಿಕೆಗಳನ್ನು ನಿಗದಿಪಡಿಸಿ ಶೈಕ್ಷಣಿಕ ಕಾರ್ಯಸೂಚಿಯನ್ನು ಹೊರಡಿಸಲಾಗುತ್ತದೆ. ಅದರಂತೆ ಈ ಮಾರ್ಗಸೂಚಿ ಅನ್ವಯ ಶಾಲಾರಂಭ, ಶಾಲಾ ಮುಕ್ತಾಯದ ದಿನ, ರಜೆ ಬೇಸಿಗೆ ರಜೆ ಹಾಗೂ ಕಿರು ಪರೀಕ್ಷೆ / ಪರೀಕ್ಷೆ ನಡೆಸಬೇಕಾದ ಅವಧಿ ಇತ್ಯಾದಿ ವಿವರಗಳನ್ನು ಒಳಗೊಂಡಿರುತ್ತದೆ.
ಕೆಲವು ಸ್ಥಳೀಯ ಸನ್ನಿವೇಶಗಳಿಗೆ ತಕ್ಕಂತೆ ಶೈಕ್ಷಣಿಕ ಮಾರ್ಗಸೂಚಿ ಯಲ್ಲಿ ನಿಗದಿಪಡಿಸಿದ ವೇಳಾಪಟ್ಟಿಯಲ್ಲಿ ಮಾರ್ಪಾಡು ಅಗತ್ಯವಿದ್ದಲ್ಲಿ ಸಂಬಂಧಿಸಿದ ಜಿಲ್ಲಾಧಿಕಾರಿಗಳು / ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಬದಲಾವಣೆಗಳನ್ನು ಮಾಡಿಕೊಳ್ಳಲು ಈಗಾಗಲೇ ಅನುಮತಿ ನೀಡಲಾಗಿದೆ.ಈ ಹಿನ್ನೆಲೆಯಲ್ಲಿ ಮಂಗಳೂರು ಜಿಲ್ಲೆಯಲ್ಲಿ ದಸರೆ ರಜೆಯನ್ನು ನವರಾತ್ರಿ ಹಬ್ಬಕ್ಕೆ ಪೂರಕವಾಗುವಂತೆ ದಿನಾಂಕ : 26.09.2022 ರಿಂದ 10.10.2022 ರ ವರೆಗೆ ದಸರೆ ರಜೆ ನೀಡುವಂತೆ ಕೋರಿಕೆ ಬಂದಿದ್ದು, ಅದರಂತೆ ಪರಿಶೀಲಿಸಿ ಶೈಕ್ಷಣಿಕ ಚಟುವಟಿ ಕೆಗಳನ್ನು ಸರಿದೂಗಿಸುವ ಹಾಗೂ ದಿನಾಂಕ 02.10.2022 ರಂದು ಮಹಾತ್ಮ ಗಾಂಧಿ ಜಯಂತಿಯನ್ನು ಆಚರಿಸುವ ಷರತ್ತಿನ ಮೇರೆಗೆ ರಜೆಯನ್ನು ನೀಡಲು ಜಿಲ್ಲಾಧಿಕಾರಿ ಸೂಚಿಸಲು ತಿಳಿಸಿದೆ.
ಉಡುಪಿಯಲ್ಲಿ ಅ. 3ರಿಂದ 16ರ ವರೆಗೆ ರಜೆ ಉಡುಪಿ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ 2022-23ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿಯಂತೆ ಅಕ್ಟೋಬರ್ 3ರಿಂದ 16ರ ವರೆಗೆ ಶಾಲಾ ಮಕ್ಕಳಿಗೆ ದಸರಾ ರಜೆ ನೀಡಲಾಗುತ್ತದೆ. ಮಂಗಳೂರಿನಲ್ಲಿ ಸ್ಥಳೀಯ ಶಾಸಕರ ಮನವಿಯಂತೆ ರಜೆ ದಿನಾಂಕ ಬದಲಾವಣೆ ಮಾಡಲಾಗಿದೆ. ಉಡುಪಿ ಜಿಲ್ಲೆಯಿಂದ ಆ ರೀತಿಯ ಯಾವುದೇ ಪ್ರಸ್ತಾವನೆ ಹೋಗದೇ ಇರುವುದರಿಂದ ಇಲಾಖೆಯ ಪೂರ್ವ ನಿಗದಿತ ದಿನಾಂಕದಿಂದಲೇ ದಸರಾ ರಜೆ ಆರಭವಾಗಲಿದೆ. ಹಾಗೆಯೇ ನವರಾತ್ರಿ ಉತ್ಸವಕ್ಕೆ ಸರಿ ಹೊಂದುವ ರೀತಿಯಲ್ಲಿ ರಜೆ ಹೊಂದಾಣಿಕೆ ಮಾಡಲು ಜಿಲ್ಲಾಧಿಕಾರಿಯವರಿಗೆ ಅವಕಾಶ ನೀಡಲಾಗಿದೆ. ಆದರೆ ಇದರಿಂದ ಶೈಕ್ಷಣಿಕ ತರಗತಿಗಳಿಗೆ ಸಮಸ್ಯೆ ಆಗದಂತೆ ಎಚ್ಚರ ವಹಿಸಲು ನಿರ್ದೇಶನ ನೀಡಲಾಗಿದೆ.
ಈ ಬಾರಿ ಶಾಲಾ ಕಾಲೇಜುಗಳಿಗೆ ನಾಡಹಬ್ಬ ದಸರಾಗೆ
ರಜೆ ಇಲ್ಲದಿರುವುದು ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರಿಗೆ ಬೇಸರವಾಗಿರುವುದು ಖಂಡಿತ.
ಈ ಬಾರಿ ಸೆ.26ರಿಂದ ಅಕ್ಟೋಬರ್ 5ರವರೆಗೆ ನಾಡಹಬ್ಬ ದಸರಾ, ನವರಾತ್ರಿ ಉತ್ಸವದ ಸಂಭ್ರಮವಿದೆ. ಆದರೆ ಶಿಕ್ಷಣ ಇಲಾಖೆ ಶಾಲಾ ಕಾಲೇಜುಗಳಿಗೆ ಮಾತ್ರ ಈ ಬಾರಿ ರಜೆಯನ್ನು ದಸರಾ ಹಬ್ಬಕ್ಕೆ ನೀಡುವ ಬದಲಾಗಿ ದಸರಾ ಹಬ್ಬ ಮುಗಿದ ಬಳಿಕ ನೀಡಿದೆ. ಶಿಕ್ಷಣ ಇಲಾಖೆಯ ಈ ಕ್ರಮಕ್ಕೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆ ಈಗಾಗಲೇ ಹೊರಡಿಸಿರುವ ಪ್ರಸಕ್ತ ಸಾಲಿನ ಶೈಕ್ಷಣಿಕ ಕ್ಯಾಲೇಂಡರ್ ನಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಅಕ್ಟೋಬರ್ 3ರಿಂದ 16ವರೆಗೆ ಹಾಗೂ ಪದವಿ ಪೂರ್ವ ಇಲಾಖೆಯು ಅಕ್ಟೋಬರ್ 1ರಿಂದ 13ರವರೆಗೆ ದಸರಾ ರಜೆ ನಿಗದಿ ಪಡಿಸಿದೆ. ಅಂದರೆ ನವರಾತ್ರಿಯ ಕೊನೆ ಎರಡು ದಿನ ಮಕ್ಕಳು ಶಾಲೆಯಲ್ಲಿಯೇ ಕಾಲ ಕಳೆಯಬೇಕಾದ ಪರಿಸ್ಥಿತಿ.
ಶಿಕ್ಷಣ ಇಲಾಖೆಗೆ ವರ್ಷದ ರಜೆ, ಹಬ್ಬಗಳ ಆಚರಣೆ ಬಗ್ಗೆ ಮೊದಲೇ ಗೊತ್ತಿದ್ದರೂ ಇಂತಹ ಎಡವಟ್ಟು ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ. ಅಲ್ಲದೇ ಈಗಲಾದರೂ ಹಬ್ಬಕ್ಕೆ ಅನುಗುಣವಾಗಿ ರಜೆ ಸಮಯ ನಿರ್ದಿಷ್ಟ ಪಡಿಸುವಂತೆ ಪೋಷಕರ ಒತ್ತಾಯಿಸಿದ್ದಾರೆ.
ಈ ಹಿಂದೆ ಶಾಲೆಗಳಿಗೆ ದಸರಾ ರಜೆ ಸಾಮಾನ್ಯವಾಗಿ 28 ದಿನಗಳ ಕಾಲ ಇತ್ತು. ಆದರೆ ಆ ಬಳಿಕ 15 ದಿನಗಳಿಗೆ ಕಡಿತ ಮಾಡಲಾಯಿತು. ಅನಂತರ ಕಳೆದ ಎರಡು ವರ್ಷಗಳಿಂದ ಕೊರೊನಾ ಮಹಾಮಾರಿಯಿಂದಾಗಿ 13 ದಿನಗಳಿಗೆ ಸೀಮಿತಗೊಳಿಸಲಾಗಿತ್ತು. ಆದರೆ ಈ ಬಾರಿ ದಸರಾ ರಜೆ ಬಗ್ಗೆ ಇನ್ನೂ ಸ್ಪಷ್ಟತೆ ಸಿಗುತ್ತಿಲ್ಲ. ಸದ್ಯದ ಶಿಕ್ಷಣ ಇಲಾಖೆ ಕ್ಯಾಲೆಂಡರ್ ಪ್ರಕಾರ ದಸರಾ ಮುಗಿಯುವ ವೇಳೆಗೆ ರಜೆ ಆರಂಭವಾಗುತ್ತಿರುವುದು ಮಕ್ಕಳು, ಪೋಷಕರು, ಶಿಕ್ಷಕರ ಸಿಟ್ಟಿಗೆ ಕಾರಣವಾಗಿದೆ.