ಸೀಟ್ ಬೆಲ್ಟ್ ನಿಯಮ ಬದಲಾಯಿಸಲು ಕೇಂದ್ರ ಸರ್ಕಾರ ಚಿಂತನೆ! |ಸೈರಸ್ ಮಿಸ್ತ್ರಿ ಸಾವಿನ ಬಳಿಕ ಎಚ್ಚೆತ್ತುಕೊಂಡಿತೇ ಸರ್ಕಾರ?
ರಸ್ತೆ ಅಪಘಾತಗಳ ಬಗ್ಗೆ ಅದೆಷ್ಟೇ ಎಚ್ಚರಿಕೆಯ ನಿಯಮ ಕೈ ಗೊಂಡರೂ, ಅಪಘಾತಗಳ ಸಂಖ್ಯೆ ಇಳಿಕೆಯಾಗುತ್ತಿಲ್ಲ. ಅದರ ನಡುವೆ ಟಾಟಾ ಮೋಟರ್ಸ್‌ನ ಮಾಜಿ ಚೇರ್ಮನ್ ಸೈರಸ್ ಮಿಸ್ತ್ರಿ ಪ್ರಯಾಣಿಸ್ತಾ ಇದ್ದ ಮರ್ಸಿಡಿಸ್ ಕಾರು ಅಪಘಾತಕ್ಕೀಡಾಗಿ ಮೃತಪಟ್ಟಿದ್ದಾರೆ. ಇದೀಗ ಈ ಘಟನೆಯಿಂದ ಸರ್ಕಾರ ಎಚ್ಚೆತ್ತುಕೊಂಡಿದ್ದು, ಕೇಂದ್ರ ಸರ್ಕಾರ ಸೀಟ್ ಬೆಲ್ಟ್ ನಿಯಮದ ಮರುಪರಿಶೀಲನೆಗೆ ಮುಂದಾಗಿದೆ.
ಹೌದು.ಸೀಟ್ ಬೆಲ್ಟ್ ಧರಿಸುವುದನ್ನು ಕಡ್ಡಾಯ ಮಾಡುವುದರ ಜೊತೆಗೆ ಸೀಟ್ ಬೆಲ್ಟ್ ವಾರ್ನಿಂಗ್ ಸಿಸ್ಟಮ್ ಅನ್ನು ಇನ್ನಷ್ಟು ಕಟ್ಟುನಿಟ್ಟಾಗಿ ಪ್ರಯಾಣಿಕರು ಪಾಲಿಸುವಂತೆ ಮಾಡಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮುಂದಾಗಿದೆ.
ಸೀಟ್ ಬೆಲ್ಟ್ ಧರಿಸದೇ ಇದ್ದಾಗ ಬರುವ ವಾರ್ನಿಂಗ್ ಅನ್ನು ಸ್ಟಾಪ್ ಮಾಡಲು ಇರುವ ಎಲ್ಲಾ ತೆರನಾದ ವ್ಯವಸ್ಥೆಗಳನ್ನು ಬಂದ್ ಮಾಡಲಿದೆ. ಕಾರಿನಲ್ಲಿ 6 ಏರ್‌ಬ್ಯಾಗ್‌ಗಳು ಹಾಗೂ ಮೂರು ಸೀಟ್ ಬೆಲ್ಟ್‌ಗಳನ್ನು ಕಡ್ಡಾಯವಾಗಿ ಅಳವಡಿಸಬೇಕೆಂದು ಕಾರು ತಯಾರಿಕಾ ಕಂಪನಿಗಳಿಗೆ ಖಡಕ್ ಸೂಚನೆ ಹೊರಡಿಸಲಿದೆ.
ಹಿಂದೆ ಕುಳಿತವರಿಗೂ ಸೀಟ್ ಬೆಲ್ಟ್ ಕಡ್ಡಾಯ ಮಾಡುವ ಸಾಧ್ಯತೆ ಇದೆ. ಈ ನಿಯಮಗಳನ್ನು ಉಲ್ಲಂಘಿಸಿದವರಿಗೆ ಭಾರೀ ದಂಡ ಹಾಕುವ ಬಗ್ಗೆ ಚಿಂತನೆ ನಡೆದಿದೆ. ವಾರ್ನಿಂಗ್ ಬಂದ್ ಮಾಡುವಂತಹ ಸೀಟ್ ಬೆಲ್ಟ್ ಕ್ಲಿಪ್‌ಗಳನ್ನು ನಿಷೇಧಿಸುವುದಾಗಿ ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸೀಟ್ ಬೆಲ್ಟ್ ಧರಿಸದೇ ಪ್ರಯಾಣಿಸುವವರನ್ನು ಪತ್ತೆ ಮಾಡಲು ಹೆದ್ದಾರಿಗಳಲ್ಲಿ ಕ್ಯಾಮರಾ ಸಹ ಅಳವಡಿಸಲಾಗುವುದು.
ಸದ್ಯ ಬಹುತೇಕ ಕಾರುಗಳಲ್ಲಿ ಮುಂದಿನ ಸೀಟ್‌ನಲ್ಲಿ ಕುಳಿತವರಿಗೆ ಮಾತ್ರ ಸೀಟ್ ಬೆಲ್ಟ್ ಅಳವಡಿಸಲಾಗಿದೆ. ಸೀಟ್ ಬೆಲ್ಟ್ ಅನ್ನು ಹಾಕದೆ ಹಾಗೆಯೇ ಬಕಲ್‌ಗೆ ಸಿಕ್ಕಿಸಿದ್ರೆ ವಾರ್ನಿಂಗ್ ನಿಂತು ಹೋಗುತ್ತದೆ. ಈ ಆಪ್ಷನ್ ಅನ್ನು ಬಂದ್ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ.
ಮಹಾರಾಷ್ಟ್ರದ ಪಾಲ್ಗಾರ್ ಬಳಿ ಭಾನುವಾರ ಸೈರಸ್ ಮಿಸ್ತ್ರಿ ಸೀಟ್ ಬೆಲ್ಟ್ ಧರಿಸಿರಲಿಲ್ಲ, ಜೊತೆಗೆ ಕಾರು ಓವರ್ ಸ್ಪೀಡ್‌ನಲ್ಲಿದ್ದಿದ್ದೇ ಅಪಘಾತಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.