ಕರಾವಳಿಯಲ್ಲಿ ಯಕ್ಷಗಾನ ವೇಷಧಾರಿಯಿಂದ ಮೀನಿನ ಏಲಂ ಕೂಗು | ವೀಡಿಯೋ ವೈರಲ್
ಉಡುಪಿ: ಯಕ್ಷಗಾನ ವೇಷಧಾರಿಯೊಬ್ಬ ಮಲ್ಪೆ ಬಂದರಿನಲ್ಲಿ ಮೀನು ಏಲಂ ನಡೆಸುತ್ತಿರುವ ದೃಶ್ಯ ಕಂಡು ನಿಜಕ್ಕೂ ಆಶ್ವರ್ಯ ಪಡುವಂತದ್ದಾಗಿದೆ. ಜನ ನಿಜಕ್ಕೂ ಕುತೂಹಲದಿಂದ ಯಕ್ಷಗಾನ ವೇಷಧಾರಿಯನ್ನು ನೋಡುತ್ತಿದ್ದರು. ಈ ಏಲಂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಉಡುಪಿಯ ಜನ ಇನ್ನೂ ಕೂಡಾ ಗಣೇಶನ ಹಬ್ಬದ ಸಡಗರದಿಂದ ಹೊರ ಬಂದಿಲ್ಲ. ಹಾಗಾಗಿ ಹಬ್ಬದ ವೇಷಧಾರಿಗಳು ನಗರದ ನಾನಾ ಭಾಗದಲ್ಲಿ ಕಂಡು ಬರುತ್ತಿದ್ದಾರೆ.
ಅದರಂತೆ ಮಲ್ಪೆ ಬಂದರಿನಲ್ಲಿ ಈಗ ಭಾರೀ ಪ್ರಮಾಣದ ಮೀನು ಬರುತ್ತಿದೆ. ಜನ ಸಾಮಾನ್ಯರು ಖರೀದಿ ಮಾಡೋ ಬಂಗುಡೆ ಬೂತಾಯಿ ಡಿಸ್ಕೋ ಮೀನುಗಳು, ರಾಶಿ ರಾಶಿ ಪ್ರಮಾಣದಲ್ಲಿ ಸಿಗುತ್ತಿದೆ. ಮೀನು ಪ್ರೇಮಿಗಳಿಗೆ ಮೀನಿನ ರಸದೌತಣ ಎಂದೇ ಹೇಳಬಹುದು. ಹಾಗೆನೇ, ಇಲ್ಲಿ ಪ್ರತಿನಿತ್ಯ ಬೆಳಗ್ಗೆ ಹಾಗೂ ಸಂಜೆ ಏಲಂ ಕೂಗಲಾಗುತ್ತೆ. ಮೀನು ಏಲಂ ಕೂಗುವ ಸಂದರ್ಭದಲ್ಲಿ ಯಕ್ಷಗಾನ ವೇಷಧಾರಿಯೊಬ್ಬ ಬಂದರಿಗೆ ಬಂದಿದ್ದು, ಬಂಗುಡೆ ಮೀನುಗಳನ್ನು ತಾನೇ ಏಲಂ ಕೂಗಿ ನೆರೆದಿದ್ದವರನ್ನು ಸಖತ್ ರಂಜಿಸಿದ್ದಾನೆ.
ಈತ ಏಲಂ ಕೂಗುವ ವಿಡಿಯೋವನ್ನು ಅಲ್ಲಿದವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಸದ್ಯ ಕರಾವಳಿಯಲ್ಲಿ ವಿಡಿಯೋ ಭಾರೀ ವೈರಲ್ ಆಗಿದೆ.