ಚೀನಾ ಲೋನ್ ಆಪ್ ಅಪ್ಲಿಕೇಶನ್ ಕಚೇರಿ ಮೇಲೆ ED ದಾಳಿ ; 17 ಕೋಟಿ ರೂ. ವಶಕ್ಕೆ
ಚೈನೀಸ್ ಲೋನ್ ಆಪ್ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು (ED) ದಾಳಿ ನಡೆಸಿದ್ದು, ಸುಮಾರು 17 ಕೋಟಿ ರೂಪಾಯಿ ವಶಕ್ಕೆ ಪಡೆದಿರೋ ಮಾಹಿತಿ ಲಭ್ಯವಾಗಿದೆ.
ಚೀನಾದ ವ್ಯಕ್ತಿಗಳು ನಿಯಂತ್ರಿಸುವ ಸ್ಮಾರ್ಟ್ಫೋನ್ ಆಧಾರಿತ ಕಾನೂನುಬಾಹಿರ ತ್ವರಿತ ಸಾಲಗಳ ವಿರುದ್ಧ ನಡೆಯುತ್ತಿರುವ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ (ED) ಆನ್ಲೈನ್ ಪಾವತಿ ಗೇಟ್ವೇಗಳು, ರೇಜರ್ಪೇ, ಪೇಟಿಎಂ ಮತ್ತು ಕ್ಯಾಶ್ಫ್ರೀನಂತಹ ಕಂಪನಿಗಳ ಕಚೇರಿಗಳಲ್ಲಿ ಶೋಧ ನಡೆಸಿದೆ.
ಬೆಂಗಳೂರಿನ ನಿನ್ನೆ 6 ಸ್ಥಳಗಳಲ್ಲಿ ಇ.ಡಿ. ದಾಳಿ ನಡೆಸಿದ್ದರು. ನಕಲಿ ದಾಖಲೆ ಸೃಷ್ಟಿಸಿ ಆಪ್ ಮೂಲಕ ಸಾಲ ನೀಡುತ್ತಿದ್ದು, ವಂಚನೆ ಎಸಗುತ್ತಿದ್ದಾರೆ ಎಂದು ಸಾರ್ವಜನಿಕರಿಂದ ವ್ಯಾಪಕ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಇ.ಡಿ. ದಾಳಿ ನಡೆದಿದೆ. ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ 18 FIR ದಾಖಲಾಗಿತ್ತು. ಕಡಿಮೆ ಸಾಲ ನೀಡಿ ಜನರಿಂದ ಸುಲಿಗೆ, ಕಿರುಕುಳ ನೀಡುತ್ತಿದ್ದರು. ಚೀನಾದ ವ್ಯಕ್ತಿಗಳಿಂದ ನಿಯಂತ್ರಿಸಲ್ಪಡುವ ಘಟಕಗಳ ಮೇಲೆ ಈ ದಾಳಿಗಳು ನಡೆದಿವೆ.
“ಸೆಪ್ಟೆಂಬರ್ 2ರಂದು, ಚೀನಾದ ಸಾಲ ಅಪ್ಲಿಕೇಶನ್ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಗೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) 2002ರ ನಿಬಂಧನೆಗಳ ಅಡಿಯಲ್ಲಿ ಬೆಂಗಳೂರಿನ ಆರು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆಗಳನ್ನ ನಡೆಸಲಾಯಿತು” ಎಂದು ಜಾರಿ ನಿರ್ದೇಶನಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಭಾರತೀಯರ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಚೀನಾದ ಲೋನ್ ಆಪ್ಗಳು ಸಂಸ್ಥೆಗಳನ್ನು ಸ್ಥಾಪನೆ ಮಾಡಿವೆ ಎಂಬ ಆರೋಪ ಕೇಳಿ ಬಂದಿದ್ದು, ನಕಲಿ ನಿರ್ದೇಶಕರನ್ನ ಸೃಷ್ಟಿಸಿ ಲೋನ್ ಆಪ್ ನಡೆಸಲಾಗುತ್ತಿತ್ತಂತೆ. ದಾಳಿಯಲ್ಲಿ ಇ.ಡಿ ಅಧಿಕಾರಿಗಳು ಚೈನೀಸ್ ಲೋನ್ ಆಪ್ಗಳ ಬ್ಯಾಂಕ್ ದಾಖಲೆ, ಅಕೌಂಟ್ ಗಳನ್ನು ಸೀಜ್ ಮಾಡಿದ್ದು, ಪರಿಶೀಲನೆ ಮುಂದುವರಿಸಲಾಗಿದೆ. ಅಲ್ಲದೇ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿ ಚೈನೀಸ್ ಲೋನ್ ಆಪ್ ಗಳ ಏರುದ್ಧ ಪ್ರಕರಣ ದಾಖಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.