ಕೆಲವೇ ಹೊತ್ತಿನಲ್ಲಿ ‘ಕುಡ್ಲಗು ಮೋದಿ’ ; ಪ್ರಧಾನಿ ಮೋದಿಯವರ ಕಾರ್ಯಕ್ರಮದ ಸಂಪೂರ್ಣ ವಿವರ ಇಲ್ಲಿದೆ

ಮಂಗಳೂರು: ‘ಕುಡ್ಲಗು ಮೋದಿ ಬರೊಂದುಲ್ಲೆರು’ ಎಂದು ಬಿಜೆಪಿ ಕಾರ್ಯಕರ್ತರು, ಮೋದಿ ಅಭಿಮಾನಿಗಳು ಈಗಾಗಲೇ ಸುಸಜ್ಜಿತವಾಗಿ ನಿರ್ಮಾಣವಾಗಿರುವ ದೊಡ್ಡ ವೇದಿಕೆಯಲ್ಲಿ ಮೋದಿಯ ಬರುವಿಕೆಗಾಗಿ ಕಾಯುತ್ತಿದ್ದಾರೆ. ಎಲ್ಲೆಡೆ ಕೇಸರಿ ಮಯವಾಗಿದ್ದು, ಇನ್ನೇನು ಕೆಲವೇ ಹೊತ್ತಿನಲ್ಲಿ ‘ಕುಡ್ಲಗು ಮೋದಿ’ ಬರಲಿದ್ದಾರೆ.

 

ಅಭಿಮಾನಿ ಬಳಗವು ಹಲವು ತಯಾರಿಯೊಂದಿಗೆ ಕುಡ್ಲದ ಹೆಮ್ಮೆಯನ್ನು ಮೋದಿಯವರಿಗೆ ತೋರ್ಪಡಿಸಲು ಸಿದ್ಧವಾಗಿದ್ದಾರೆ. ಇದಕ್ಕಾಗಿ ಹಲವು ರೀತಿಯ ಪ್ಲಾನ್ ನೊಂದಿಗೆ ವೇದಿಕೆ ಬಳಿ ಬರಲಿದ್ದಾರೆ. ಅದರಂತೆ ಇಲ್ಲೊಬ್ಬ ಅಭಿಮಾನಿ ಮೋದಿಯ ಚಿತ್ರಣವನ್ನೇ ದೇಹದ ಮೇಲೆ ಬಿಡಿಸಿಕೊಂಡು ಅಭಿಮಾನವನ್ನು ಬಿತ್ತರಿಸುತ್ತಿದ್ದಾರೆ. ಕೇಸರಿ ಪೇಟ, ಲುಂಗಿ ಉಟ್ಟುಕೊಂಡು ಮೋದಿಯ ಚಿತ್ರ ಬಿಡಿಸಿಕೊಂಡು ದೇಹವೆಲ್ಲ ಮೋದಿ ಮೋದಿಯೆಂದು ಕಂಗೊಳಿಸುತ್ತಿದೆ.

ಕೊಚ್ಚಿನ್​ನಿಂದ ವಿಶೇಷ ವಿಮಾನದ ಮೂಲಕ ಪ್ರಧಾನಿ ಮಧ್ಯಾಹ್ನ 12.55ರ ಸುಮಾರಿಗೆ ಮಂಗಳೂರು ವಿಮಾನ ನಿಲ್ದಾಣ ತಲುಪಲಿದ್ದಾರೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜ್ಯ, ಕೇಂದ್ರ ಸಚಿವರು ಪ್ರಧಾನಿ ಮೋದಿಯವರನ್ನು ಸ್ವಾಗತಿಸಲಿದ್ದಾರೆ.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಧ್ಯಾಹ್ನ 1.20ಕ್ಕೆ ಸೇನಾ ಹೆಲಿಕಾಪ್ಟರ್ ಮೂಲಕ ಪ್ರಧಾನಿ ಮೋದಿ ಪಣಂಬೂರುನಲ್ಲಿರುವ ಎನ್​.ಎಂ.ಪಿ.ಎ ಹೆಲಿಪ್ಯಾಡ್​ಗೆ ಬರಲಿದ್ದಾರೆ. ಮಧ್ಯಾಹ್ನ 1.30 ಗಂಟೆಗೆ ಎನ್​.ಎಂ.ಪಿ.ಎ ಹೆಲಿಪ್ಯಾಡ್​ನಿಂದ ಒಂದೂವರೆ ಕಿ.ಮೀ ದೂರದಲ್ಲಿರುವ ಬಂಗ್ರಕುಳೂರಿನ ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ನಡೆಯುವ ಮಂಗಳೂರು ಬಂದರಿನ ವಿವಿಧ ಅಭಿವೃದ್ಧಿ ಯೋಜನೆಗಳ ಶಿಲಾನ್ಯಾಸ ಮತ್ತು ಕಾಮಗಾರಿಯ ಬೃಹತ್ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ. ನವಮಂಗಳೂರು ಬಂದರು ಪ್ರಾಧಿಕಾರ ಹಾಗೂ ಎಂಆರ್ ಪಿಎಲ್ ನ ಸುಮಾರು 3,800 ಕೋಟಿ ರೂ.ಗಳ 8 ವಿವಿಧ ಅಭಿವೃದ್ಧಿ ಯೋಜನೆಗಳ ಲೋಕಾರ್ಪಣೆ ಮಾಡಲಿದ್ದಾರೆ.

ಈ ಕಾರ್ಯಕ್ರಮ ಮಧ್ಯಾಹ್ನ 2.55 ರವರೆಗೆ ನಡೆಯಲಿದ್ದು ಮತ್ತೆ ಪ್ರಧಾನಿ ಮೋದಿ ರಸ್ತೆ ಮಾರ್ಗದ ಮೂಲಕ ಎನ್.ಎಂ.ಪಿ.ಎ ಹೆಲಿಪ್ಯಾಡ್​ನತ್ತ ತೆರಳಲಿದ್ದಾರೆ. ಒಂದು ಗಂಟೆಗೆ ಪಕ್ಷದ ಪ್ರಮುಖ ರೊಂದಿಗೆ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 4 ಗಂಟೆಗೆ ಎನ್​.ಎಂ.ಪಿ.ಎ ಹೆಲಿಪ್ಯಾಡ್​ನಿಂದ ಹೆಲಿಕಾಪ್ಟರ್ ಮೂಲಕ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ತೆರಳಲಿರುವ ಮೋದಿ ಬಳಿಕ ವಿಶೇಷ ವಿಮಾನದಲ್ಲಿ ದೆಹಲಿಯತ್ತ ಪ್ರಯಾಣ ಬೆಳೆಸಲಿದ್ದಾರೆ.

ಮಂಗಳೂರಿನ ಗೋಲ್ಡ್ ಪಿಂಚ್ ಮೈದಾನಕ್ಕೆ ಮೂರು ಸಾವಿರ ಪೊಲೀಸರ ಸರ್ಪಗಾವಲು ಹಾಕಲಾಗಿದೆ. ಡಿಜಿಪಿ, ಎಡಿಜಿಪಿ, ಕಮಿಷನರ್ ನೇತೃತ್ವದಲ್ಲಿ ಭಾರೀ ಭದ್ರತೆ ಒದಗಿಸಲಾಗಿದೆ. ಎರಡು ಸಾವಿರ ಬಸ್ಸುಗಳಲ್ಲಿ ಎರಡು ಲಕ್ಷಕ್ಕೂ ಮಿಕ್ಕಿದ ಫಲಾನುಭವಿಗಳು, ಕಾರ್ಯಕರ್ತರ ಆಗಮಿಸಿದ್ದಾರೆ.

ಇವತ್ತಿನ ಕಾರ್ಯಕ್ರಮಗಳ ವಿವರ ಇಂತಿದೆ:
*ಸಾವಿರ ಕೋಟಿ ಯೋಜನೆಗೆ ಕಡಲತಡಿಯಲ್ಲಿ ಪ್ರಧಾನಿ ಮೋದಿ ಚಾಲನೆ
*ಸರ್ಕಾರಿ ಕಾರ್ಯಕ್ರಮದ ಬಳಿಕ ಬಿಜೆಪಿ ಕೋರ್ ಕಮಿಟಿ ಸಭೆ
*ಸರ್ಕಾರದ ಅಧಿಕೃತ ಕಾರ್ಯಕ್ರಮ ‌ಮತ್ತು ಬಿಜೆಪಿ ನಾಯಕರ ಸಭೆಯಲ್ಲೂ ಮೋದಿ ಭಾಗಿ
*ಕೊಚ್ಚಿಯಿಂದ ಮಧ್ಯಾಹ್ನ 12:55 ಗಂಟೆಗೆ ಮಂಗಳೂರಿಗೆ ಆಗಮಿಸಲಿರೋ ನಮೋ
*ಮಂಗಳೂರಿನ ಗೋಲ್ಡ್ ಪಿಂಚ್ ಮೈದಾನದಲ್ಲಿ 1.30 ಗಂಟೆಗಳ ಕಾಲ ಮೋದಿ ಮೋಡಿ
*ನವಮಂಗಳೂರು ಬಂದರು ಮತ್ತು ಎಂಆರ್ ಪಿಎಲ್ ನ ಸಾವಿರ ಕೋಟಿ ಯೋಜನೆಗೆ ಮೋದಿ ಚಾಲನೆ
*ಸರ್ಕಾರಿ ಕಾರ್ಯಕ್ರಮ ‌ಮುಗಿಸಿ ಬಿಜೆಪಿ ಕೋರ್ ಕಮಿಟಿ ಸಭೆ
*281 ಕೋ. ರೂ. ವೆಚ್ಚದಲ್ಲಿ ನವ ಮಂಗಳೂರು ಬಂದರಿನ 14ನೇ ಬರ್ತ್ ಯಾಂತ್ರೀಕರಣ
*100 ಕೋಟಿ ರೂ. ವೆಚ್ಚದಲ್ಲಿ ಬಿಟುಮಿನ್(ಡಾಮರ್) ಸಂಗ್ರಹಗಾರ ನಿರ್ಮಾಣ
*100 ಕೋಟಿ ವೆಚ್ಚದಲ್ಲಿ ನವಮಂಗಳೂರು ಬಂದರಿನಲ್ಲಿ ಸಂತೋಷಿ ಮಾತಾ ಕಂಪೆನಿಯ ಖಾದ್ಯ ತೈಲ ಸಂಗ್ರಹಗಾರ
* 677 ಕೋಟಿ ರೂ. ವೆಚ್ಚದಲ್ಲಿ ರಾಜ್ಯದ ಮೊದಲ ಡಿಸಲೈನೇಶನ್ ಪ್ಲಾಂಟ್​ಗೆ ಚಾಲನೆ
*1829 ಕೋಟಿ ರೂ. ಮೊತ್ತದ ಬಿಎಸ್6 ಇಂಧನ ಸ್ಥಾವರ
*500 ಕೋಟಿ ರೂ. ವೆಚ್ಚದ ಎಲ್ ಪಿಜಿ ಸ್ಟೋರೇಜ್ ವ್ಯವಸ್ಥೆ ಘಟಕಕ್ಕೆ ಮೋದಿ ಚಾಲನೆ

ರಾಜ್ಯಪಾಲ ಥಾವತ್ ಚಂದ್ ಗೆಹ್ಲೋಟ್, ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಸೊರ್ಬಾನಂದ ಸೋನಾಪಾಲಾ, ಶಾಂತನು ಠಾಕೂರ್, ಸಚಿವ ಸುನೀಲ್ ಕುಮಾರ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲ್ ಸೇರಿದಂತೆ ಜಿಲ್ಲೆಯ ಶಾಸಕರು, ಪರಿಷತ್ ಸದಸ್ಯರು ಭಾಗವಹಿಸಲಿದ್ದಾರೆ.

ಮಂಗಳೂರಿನ ಬಂಗ್ರ ಕೂಳೂರಿನ ಗೋಲ್ಡ್ ಪಿಂಚ್ ಸಿಟಿ ಮೈದಾನದ ಸುಮಾರು 100 ಎಕರೆ ಪೈಕಿ 30 ಎಕರೆ ಜಾಗವನ್ನು ಸಮಾವೇಶಕ್ಕೆ ಬಳಸಿಕೊಳ್ಳಲಾಗಿದೆ. 25 ಎಕರೆ ಜಾಗಕ್ಕೆ ಪೆಂಡಲ್ ಹಾಕಲಾಗಿದ್ದು, 80 ಸಾವಿರ ಆಸನ ವ್ಯವಸ್ಥೆ ಮಾಡಲಾಗಿದೆ. ಸಮಾವೇಶಕ್ಕೆ ಆಗಮಿಸುವವರನ್ನು ಕರೆತರಲು ಸುಮಾರು 3 ಸಾವಿರ ಬಸ್, 1,400 ಕಾರು, 1 ಸಾವಿರ ಲಘು ವಾಹನ, 4,600 ದ್ವಿಚಕ್ರ ವಾಹನಗಳನ್ನು ಕಾಯ್ದಿರಿಸಲಾಗಿದೆ.

Leave A Reply

Your email address will not be published.