ತೆಂಗಿನಕಾಯಿ ಸಿಪ್ಪೆಗೂ ಬಂದಿದೆ ಡಿಮ್ಯಾಂಡ್ ; ಸಿಪ್ಪೆ ಎಸೆಯೋ ಮುಂಚೆ ಇದರಿಂದಾಗೋ ಪ್ರಯೋಜನವನ್ನು ನೀವೊಮ್ಮೆ ನೋಡಲೇಬೇಕು
ತೆಂಗಿನಮರವನ್ನು ಕಲ್ಪವೃಕ್ಷ ಎನ್ನುತಾರೆ. ಏಕೆಂದರೆ ತೆಂಗಿನಮರ ಕೊಡುವ ತೆಂಗಿನ ಕಾಯಿ, ಇದರ ಎಲೆ/ಗರಿ, ಕಾಂಡ, ಕಾಯಿ, ತೆಂಗಿನ ಸಿಪ್ಪೆ, ಮರ ಹೀಗೆ ಎಲ್ಲ ಉಪಯೋಗಕಾರಿಯಾಗಿವೆ. ಅದೆಷ್ಟೋ ಜನರಿಗೆ ಇದರಲ್ಲೂ ಇಷ್ಟು ಉಪಯೋಗ ಇದೆ ಎಂಬುದು ತಿಳಿದೇ ಇರುವುದಿಲ್ಲ. ಕರ್ನಾಟಕದ ರೈತರಿಗೆ (Farmers)
ಮತ್ತು ಉದ್ಯಮಿಗಳಿಗೆ ಹೊಸ ದಾರಿಗಳನ್ನು ತೆರೆದಿವೆ ಎಂದರೂ ತಪ್ಪಾಗಲಾರದು.
ತೆಂಗಿನ ಕಾಯಿ ಬಳಕೆಯನ್ನು ನಾವು ಆಹಾರದಿಂದ ಹಿಡಿದು ಸ್ಕಿನ್ ಕೇರ್ ಮತ್ತು ಹಲವು ಮನೆ ಕೆಲಸಗಳಿಗೆ ಉಪಯೋಗ ಮಾಡಬಹುದು. ಆದರೆ, ಸಾಮಾನ್ಯವಾಗಿ ತೆಂಗಿನ ಸಿಪ್ಪೆಯನ್ನು ಸುಲಿದು ನಾವು ಬಿಸಾಡುತ್ತೇವೆ. ತೆಂಗಿನ ಸಿಪ್ಪೆ ಅಥವಾ ನಾರು ಎಂದು ಕರೆಸಿಕೊಳ್ಳುವ ತೆಂಗಿನ ಕಾಯಿಯ ಹೊರ ಭಾಗ ಕೇವಲ ಒಲೆ ಹಚ್ಚಲು ಮಾತ್ರ ಉಪಯೋಗಕ್ಕೆ ಬರುತ್ತದೆ ಎಂದು ಹಲವರು ತಿಳಿದುಕೊಂಡಿದ್ದಾರೆ. ಆದರೆ ತೆಂಗಿನ ಜುಟ್ಟು ಎಷ್ಟೊಂದು ಕೆಲಸಕ್ಕೆ ಬರುವ ಸಂಗತಿಯಾಗಿವೆ ಎಂಬುದು ನಿಮಗೆ ತಿಳಿದಿದೆಯೇ? ಇದನ್ನು ಹೇಗೆ ಮನೆ ಕೆಲಸಕ್ಕಾಗಿ ಹಾಗೂ ಆರೋಗ್ಯಕ್ಕೆ ಬಳಸಬಹುದು ಎಂಬುದನ್ನು ತಿಳಿಯೋಣ
ಇಂದಿನ ಆಧುನಿಕ ವೈದ್ಯಕೀಯ ತಂತ್ರಜ್ಞಾನ ಬಗೆಹರಿಸಲಾರದ ಅದೆಷ್ಟೋ ಬಗೆಯ ಆರೋಗ್ಯ ಸಮಸ್ಯೆಗಳಿಗೆ ತೆಂಗಿನ ನಾರು ಪರಿಹಾರವನ್ನು ಒದಗಿಸುತ್ತದೆ.
ತೆಂಗಿನ ನಾರಿನಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಜನರು ಕಂಡುಕೊಳ್ಳಬಹುದು. ಪ್ರಮುಖವಾಗಿ ಮೂಲವ್ಯಾಧಿ ಸಮಸ್ಯೆಗೆ ಇದರಿಂದ ಸಾಕಷ್ಟು ಪರಿಣಾಮಕಾರಿಯಾದ ಪರಿಹಾರ ಸಿಗುತ್ತದೆ. ಸ್ವಲ್ಪ ಬುದ್ಧಿ ಖರ್ಚು ಮಾಡಿದರೆ ಇದರ ಒಂದೊಂದೇ ಉಪಯೋಗಗಳನ್ನು ನಿಮ್ಮದಾಗಿಸಿಕೊಳ್ಳಬಹುದು.
ಮೂಲವ್ಯಾಧಿ ಸಮಸ್ಯೆಯಿಂದ ಬಳಲುತ್ತಿರುವವರು, ಒಣಗಿದ ತೆಂಗಿನ ನಾರನ್ನು ಬೆಂಕಿಯಲ್ಲಿ ಚೆನ್ನಾಗಿ ಬೇಯಿಸಿ ಬೂದಿ ತಯಾರು ಮಾಡಿಕೊಳ್ಳಬೇಕು. ಇದನ್ನು ಒಂದು ಡಬ್ಬಿಯಲ್ಲಿ ಹಾಕಿ ಎತ್ತಿಟ್ಟುಕೊಂಡು ಬೇಕೆಂದ ಸಮಯದಲ್ಲಿ ಸ್ವಲ್ಪ ಪ್ರಮಾಣದಲ್ಲಿ ತೆಗೆದುಕೊಂಡು ಇದಕ್ಕೆ ಸ್ವಲ್ಪ ಮೊಸರು ಅಥವಾ ಮಜ್ಜಿಗೆಯನ್ನು ಬೆರೆಸಿ ಕುಡಿಯುವ ಅಭ್ಯಾಸ ಮಾಡಿಕೊಳ್ಳಬೇಕು. ಆದರೆ ಯಾವುದೇ ಕಾರಣಕ್ಕೂ ಅತಿ ಹೆಚ್ಚು ಹುಳಿ ಬಂದಿರುವ ಮೊಸರು ಅಥವಾ ಮಜ್ಜಿಗೆ ಬಳಕೆ ಮಾಡಬಾರದು. ಈ ರೀತಿ ಮಾಡುವುದರಿಂದ ಮೂಲವ್ಯಾಧಿ ಸಮಸ್ಯೆಗೆ ಅತ್ಯಂತ ಸುಲಭವಾದ ರೀತಿಯಲ್ಲಿ ಪರಿಹಾರ ಸಿಗುತ್ತದೆ.
ಗೊಬ್ಬರವಾಗಿ:
ನಾಟಿ ಮಾಡುವ ಮೊದಲು ಮಣ್ಣಿನಲ್ಲಿ ಕೋಕೋ ಪಿಟ್ ಅನ್ನು ಬಳಸಲಾಗುತ್ತದೆ. ಇದನ್ನು ತೆಂಗಿನ ಸಿಪ್ಪೆಯಿಂದ ತಯಾರಿಸಲಾಗುತ್ತದೆ. ಇದರಿಂದ ಸಸ್ಯಗಳು ಪೋಷಣೆ ಪಡೆಯುತ್ತವೆ ಮತ್ತು ಮಡಕೆಯಲ್ಲಿ ಕೋಕೋಪೀಟ್ ಅನ್ನು ಮಣ್ಣಿನೊಂದಿಗೆ ಬೆರೆಸುವ ಮೂಲಕ ಅವುಗಳ ಬೆಳವಣಿಗೆ ಸರಿಯಾಗಿ ಆಗುತ್ತದೆ. ಗಿಡಗಳು ಚೆನ್ನಾಗಿ ಬೆಳೆಯಲು ಇದು ಸಹಕಾರಿ.
ಕೊಕೊ ಪೀಟ್ ಮಾಡಲು, ತೆಂಗಿನ ಸಿಪ್ಪೆಯನ್ನು ನೀರಿನಲ್ಲಿ ದೊಡ್ಡ ಪಾತ್ರೆಯಲ್ಲಿ ಅದ್ದಿ ಮತ್ತು 15 ದಿನಗಳವರೆಗೆ ಬಿಡಿ. 15 ದಿನಗಳ ನಂತರ ಅದನ್ನು ನೀರಿನಿಂದ ತೆಗೆಯಿರಿ ಮತ್ತು ಕತ್ತರಿ ಸಹಾಯದಿಂದ ಅದನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. ಈಗ ಅದನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಇದರಿಂದ ಪುಡಿಯಾಗಿರುವ ಅಂಶವನ್ನು ಪಡೆಯಬಹುದು. ಇದನ್ನು ಕೋಕೋಪಿಟ್ ಎಂದು ಕರೆಯಲಾಗುತ್ತದೆ. ಇವು ಗಿಡಗಳಿಗೆ ಉತ್ತಮ ಫಲವತ್ತತೆ ನೀಡುತ್ತದೆ.
ಪಾತ್ರೆ ತೊಳೆಯಲು:
ತೆಂಗಿನ ಜುಟ್ಟು ಅಥವಾ ನಾರಿನ ಬಳಕೆಯನ್ನು ಅಡುಗೆ ಮನೆ ಪಾತ್ರೆ ತೊಳೆಯಲು ಸ್ಕ್ರಬರ್ ರೀತಿ ಮಾಡಬಹುದು. ಇದರಿಂದ ಸುಟ್ಟ ಹಾಗೂ ಜಿಡ್ಡಿನಿಂದ ಕೂಡಿದ ಪಾತ್ರೆಗಳು ಸ್ವಚ್ಛವಾಗಲಿವೆ. ಹಿಂದಿನ ಕಾಲದಲ್ಲಿ ಇದನ್ನು ಸ್ಕ್ರಬರ್ ಆಗಿ ಬಳಸುತ್ತಿದ್ದರು. ಕೇವಲ ಪಾತ್ರೆಗಳನ್ನು ಉಜ್ಜುವ ಸ್ಕ್ರಬರ್ ಮಾತ್ರವಲ್ಲ, ಮೈಯನ್ನು ಉಜ್ಜುವ ಸ್ಕ್ರಬರ್ ಆಗಿ ಸಹ ಇದನ್ನು ಬಳಕೆ ಮಾಡಬಹುದು.
ನೈಸರ್ಗಿಕ ಡೈ (Natural Die) ರೂಪದಲ್ಲಿ ಬಳಕೆ :
ತೆಂಗಿನ ಜುಟ್ಟನ್ನು ನೈಸರ್ಗಿಕ ಡೈ ತಯಾರಿಸಲು ಬಳಕೆ ಮಾಡಲಾಗುತ್ತದೆ. ಇದಕ್ಕಾಗಿ ಲೋಹದ ಬಾಣಲೆಯನ್ನು ತೆಗೆದುಕೊಳ್ಳಿ ಹಾಗೂ ಅದನ್ನು ಬಿಸಿ ಮಾಡಿ. ಈಗ ಅದರಲ್ಲಿ ತೆಂಗಿನ ಜುಟ್ಟನ್ನು ಇಡಿ ಹಾಗೂ ಅವುಗಳಲ್ಲಿನ ಒಂದು ಅಥವಾ ಎರಡು ಜುಟ್ಟನ್ನು ಬೆಂಕಿಯಿಂದ ಸುಟ್ಟುಹಾಕಿ. ಇದರಿಂದ ನಿಧಾನಕ್ಕೆ ಎಲ್ಲಾ ಜುಟ್ಟುಗಳು ಹೊತ್ತಿಕೊಳ್ಳಲಿವೆ.
ಬಾಣಲೆಯಲ್ಲಿರುವ ಎಲ್ಲಾ ತೆಂಗಿನ ಜುಟ್ಟನ್ನು ಸರಿಯಾಗಿ ಸುಟ್ಟುಕೊಳ್ಳಿ. ಇದರ ಪೌಡರ್ ತಯಾರಿಸಿಕೊಳ್ಳಿ. ಪೌಡರ್ ತಯಾರಿಸಿದ ಬಳಿಕ ಇದು ಚಾರ್ಕೋಲ್ ರೀತಿ ಕಪ್ಪಾಗಲಿದೆ. ಇದೀಗ 3 ಚಮಚೆ ತೆಂಗಿನ ಪೌಡರ್‌ನಲ್ಲಿ 2 ಚಮಚೆ ಸಾಸಿವೆ ಎಣ್ಣೆ ಬೆರೆಸಿ ಹಾಗೂ ಅದನ್ನು ಡೈ ರೀತಿಯಲ್ಲಿ ಬಳಸಬಹುದು. ಇದರಿಂದ ಕೂದಲಿಗೆ ಕಪ್ಪು ಬಣ್ಣ ಬರುತ್ತದೆ. ಆದರೆ ಇದು ಈ ಬಣ್ಣ ಹೆಚ್ಚು ದಿನವಿರೋಲ್ಲ.
ಹಲ್ಲುಗಳ ಶುಚಿತ್ವಕ್ಕೆ ಬಳಸಬಹುದು:
ಹಲ್ಲುಗಳ ಸ್ವಚ್ಚತೆಗಾಗಿಯೂ ಕೂಡ ಇದನ್ನು ಬಳಕೆ ಮಾಡಬಹುದು. ಇದು ಹಲ್ಲುಗಳ ಮೇಲೆ ಉಂಟಾಗಿರುವ ಹಳದಿ ಕಲೆಗಳನ್ನು ತೊಡೆದು ಹಾಕುತ್ತದೆ. ತೆಂಗಿನ ಜುಟ್ಟನ್ನು ಸುಟ್ಟ ಬಳಿಕ ಅದರ ಪೌಡರ್ ಅನ್ನು ಒಂದು ಬಾಟಲಿಯಲ್ಲಿ ಸಂಗ್ರಹಿಸಿ ಹಾಗೂ ನಿತ್ಯ ಅದನ್ನು ಹಲ್ಲುಗಳನ್ನು ಸ್ವಚ್ಛಗೊಳಿಸಲು ಬಳಸಿ. ಬಳಿಕ ಬೆರಳಿನ ಸಹಾಯದಿಂದ ಹಲ್ಲುಗಳ ಮೇಲೆ ಮೆಲ್ಲಗೆ ಮಸಾಜ್ ಮಾಡಿ. ಇಲ್ಲದಿದ್ದರೆ ವಸಡುಗಳಿಗೆ ಹಾನಿ ಉಂಟಾಗಲಿದೆ.
ಹೌದು. ಮಾರುಕಟ್ಟೆಯಲ್ಲಿ ತೆಂಗಿನ ಕಾಯಿ, ಎಳೆ ನೀರಿಗೆ ಬೆಲೆ ಇರುವಂತೆ ತೆಂಗಿನ ಸಿಪ್ಪೆಗೂ ಕೂಡ ಬೆಲೆ ಬಂದಿದೆ. ಐದು ವರ್ಷಗಳಲ್ಲಿ ಒಂದು ಟನ್ ತೆಂಗಿನ ಸಿಪ್ಪೆಯ ಬೆಲೆ ಬಹುತೇಕ ದುಪ್ಪಟ್ಟಾಗಿದೆ. ಈ ಬಗ್ಗೆ ಹಾಸನ ಜಿಲ್ಲೆಯ ತಿಮ್ಲಾಪುರ ಗ್ರಾಮದ ತೆಂಗು ರೈತ ಶ್ರೀಹರ್ಷ ಕೂಡ ಮಾತನಾಡಿ, “ಈ ಹಿಂದೆ 7,000 ರಿಂದ 8,000 ರೂ.ವರೆಗೆ ಇದ್ದ ಬೆಲೆ ಈಗ ಒಂದು ಟನ್‌ಗೆ ಸುಮಾರು 14,500 ರೂ.ಏರಿಕೆಯಾಗಿದೆ” ಎಂದು ಹೇಳಿದ್ದಾರೆ.
ಏಕೆಂದರೆ ಇವುಗಳ ಬಳಕೆ ಹೆಚ್ಚಾಗಿದೆ. ಈ ಚಿಪ್ಪುಗಳನ್ನು ಸಂಸ್ಕರಿಸುವ ಕೈಗಾರಿಕೆಗಳು ಅವುಗಳನ್ನು ಕರಕುಶಲ, ಅಗರಬತ್ತಿಗಳು ಮತ್ತು ಜೈವಿಕ ಗೊಬ್ಬರಗಳಲ್ಲಿ ಬಳಸುತ್ತವೆ. ಶೆಲ್ ಇದ್ದಿಲು ಮತ್ತು ಸಕ್ರಿಯ ಇಂಗಾಲವನ್ನು, ಲೋಹಗಳನ್ನು ಕರಗಿಸಲು ಮತ್ತು ಶುದ್ಧೀಕರಿಸಲು ಬಳಸಲಾಗುತ್ತದೆ, ಎಂಜಿನ್ ತೈಲ, ನೀರಿನ ಶುದ್ಧೀಕರಣ, ಬಣ್ಣಗಳು ಮತ್ತು ಔಷಧಿ. ತ್ವಚೆಯ ಟ್ರೆಂಡ್‌ಗಳಲ್ಲೂ ಇದನ್ನು ಬಳಸಲಾಗುತ್ತಿದ್ದು, ತೆಂಗಿನ ಸಿಪ್ಪೆಯ ಬೇಡಿಕೆಯನ್ನು ಮಾರುಕಟ್ಟೆಯಲ್ಲಿ ಹೆಚ್ಚಿಸಿವೆ.
ಇನ್ನೂ ಕೇರಳ ಮತ್ತು ತಮಿಳುನಾಡು ನಂತರ ದೇಶದಲ್ಲಿ ತೆಂಗಿನಕಾಯಿ ಉತ್ಪಾದನೆಯಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಭಾರತವು ವಿಶ್ವದ ತೆಂಗಿನಕಾಯಿ ಪೂರೈಕೆಯಲ್ಲಿ 34 ಪ್ರತಿಶತವನ್ನು ಉತ್ಪಾದಿಸುತ್ತದೆ. ಈ ವರ್ಷ, ತೆಂಗಿನಕಾಯಿ ಮತ್ತು ಸಂಬಂಧಿತ ಉತ್ಪನ್ನಗಳ ರಫ್ತು ಒಟ್ಟು 3,237 ಕೋಟಿ ರೂ.ಗಳಾಗಿದ್ದು, ಸಾಗಣೆಯು ಕಳೆದ ವರ್ಷ 2,294 ಕೋಟಿಗಳಿಂದ ಸುಮಾರು 40 ಪ್ರತಿಶತದಷ್ಟು ಹೆಚ್ಚಾಗಿದೆ.
ಇಷ್ಟೆಲ್ಲಾ ಪ್ರಯೋಜನದ ಕುರಿತು ತಿಳಿದ ಮೇಲಂತೂ ‘ನನ್ನನ್ನು ಏಳು ವರ್ಷ ಸಾಕು, ನಾನು ನಿನ್ನನ್ನು ಎಪ್ಪತ್ತು ವರ್ಷದವರೆಗೂ ನೆಮ್ಮದಿಯಿಂದ ಕಾಪಾಡುತ್ತೇನೆ’ ಎಂದು ತೆಂಗಿನಮರ ಹೇಳುತ್ತದೆ ಎಂದು ನಮ್ಮ ಹಿರಿಯರು ಹೇಳುತ್ತಿದ್ದ ಮಾತು ಖಂಡಿತ ಎಂದಿಗೂ ಸತ್ಯ ಅನಿಸುತ್ತೆ ಅಲ್ವಾ?..