ವಿದ್ಯಾರ್ಥಿನಿಯ ಮೈ ಟಚ್ ಮಾಡಿದ್ದಕ್ಕೆ , ವೃದ್ಧನನ್ನು ಅಟ್ಟಾಡಿಸಿ ಹೊಡೆದ ಕಾಲೇಜ್ ಬಾಯ್ಸ್
ಬೆಂಗಳೂರು ಸಮೀಪದಲ್ಲಿ ಇರುವ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳ ಪುಂಡಾಟಿಕೆ, ಆಟಾಟೋಪ ಮುಂದುವರಿದಿದೆ. ಏಕೆಂದರೆ ನಿನ್ನೆ ನಡೆದ ಘಟನೆಯೊಂದರಿಂದ ವೃದ್ಧನೋರ್ವನಿಗೆ ಈ ವಿದ್ಯಾರ್ಥಿಗಳು ಹಲ್ಲೆ ಮಾಡಿದ್ದಾರೆ. ಸಂಜೆ ಬಸ್ಸಿನಲ್ಲಿ ಓರ್ವ ವಿದ್ಯಾರ್ಥಿನಿಯ ಭುಜಕ್ಕೆ ವೃದ್ಧನೋರ್ವ ಟಚ್ ಮಾಡಿದ್ದಾನೆಂದು ಆರೋಪಿಸಿ ಅಲಯನ್ಸ್ ವಿದ್ಯಾರ್ಥಿಗಳು ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿದ್ದಾರೆ.
ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣ ಸಮೀಪದ ಅರವಂಟಿಗೆಪುರ ನಿವಾಸಿಯಾದ ಮುನಿಯಲ್ಲಪ್ಪ ಅಲಯನ್ಸ್ ಕಾಲೇಜಿನ ವಿದ್ಯಾರ್ಥಿಗಳಿಂದ ಹಲ್ಲೆಗೊಳಗಾದ ವೃದ್ಧ. ಕೂಲಿ ಕೆಲಸ ಮುಗಿಸಿಕೊಂಡು ಆನೇಕಲ್ ಸಂತೆಗೆ ತೆರಳಿದ್ದ ವೃದ್ಧ ಮುನಿಯಲ್ಲಪ್ಪ, ನಂತರ ದಿನಸಿ ಸೊಪ್ಪು ತರಕಾರಿ ಖರೀದಿಸಿ ಮನೆ ಕಡೆ ಬಸ್ಸಿನಲ್ಲಿ ವಾಪಸ್ ಹೊರಟಿದ್ದಾರೆ.
ಈ ವೇಳೆ ಅಲಯನ್ಸ್ ಕಾಲೇಜು ಬಳಿ ವಿದ್ಯಾರ್ಥಿಗಳು ಬಸ್ ಹತ್ತಿದ್ದಾರೆ. ಒಂದು ಕೈಯಲ್ಲಿ ದಿನಸಿ, ತರಕಾರಿ ತುಂಬಿದ್ದ ಬ್ಯಾಗು ಮತ್ತೊಂದು ಕೈಯಲ್ಲಿ ಬಸ್ ಮೇಲಿನ ಪೈಪ್ ಹಿಡಿದು ನಿಂತಿದ್ದಾರೆ. ಆಗ ವೃದ್ಧ ಮುನಿಯಲ್ಲಪ್ಪರವರ ಭುಜ ಓರ್ವ ವಿದ್ಯಾರ್ಥಿನಿಗೆ ಟಚ್ ಆಗಿದೆ. ಅಚಾನಕ್ ಆಗಿ ವಿದ್ಯಾರ್ಥಿನಿಗೆ ಟಚ್ ಆಗಿದ್ದು, ಯಾರೂ ಏನೂ ಕೂಡ ಪ್ರಶ್ನೆ ಮಾಡಲಿಲ್ಲ. ಅನಂತರ ಅನಕ್ಷರಸ್ಥ ಮುನಿಯಲ್ಲಪ್ಪ ತನ್ನ ಪಾಡಿಗೆ ಅರವಂಟಿಗೆಪುರ ಗೇಟ್ ನಲ್ಲಿ ಬಸ್ಸಿನಿಂದ ಇಳಿದು ಊರಿನತ್ತ ಹೊರಟಿದ್ದಾರೆ. ಆದರೆ ಈ ವಿದ್ಯಾರ್ಥಿಗಳು ಬಂದು ಹಲ್ಲೆ ನಡೆಸಿದ್ದಾರೆ.
ಈ ಬಗ್ಗೆ ಮಾತನಾಡಿದ ಮುನಿಯಲ್ಲಪ್ಪ, ದಾಳಿಯ ಅರಿವು ಇಲ್ಲದೇ ನಾನು ಊರಿನತ್ತ ತೆರಳುತ್ತಿದ್ದೆ. ಆಗ ಸುಮಾರು ಐದಾರು ಮಂದಿ ಅಲಯನ್ಸ್ ಕಾಲೇಜು ವಿದ್ಯಾರ್ಥಿಗಳು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದರು. ಕೈ, ಕಾಲು, ಎದೆ ಮತ್ತು ದವಡೆ ಸಿಕ್ಕ ಸಿಕ್ಕ ಕಡೆ ಹಲ್ಲೆ ನಡೆಸಿದರು ಅಂತಾ ದೂರಿದ್ದಾರೆ.
ಕೆಲ ಊರಿನ ಸ್ಥಳೀಯರು ಹಲ್ಲೆ ನಡೆಸೋವಾಗ ನೆರವಿಗೆ ಧಾವಿಸಿ ನನ್ನನ್ನು ಬಚಾವ್ ಮಾಡಿದರು. ನಾನು ಭಯದಿಂದ ಓಡಿ ಹೋಗಿ ಮನೆ ಸೇರಿಕೊಂಡೆ. ಆದರೂ ನನ್ನನ್ನು ಹಿಂಬಾಲಿಸಿ ಗ್ರಾಮಕ್ಕೆ ದೊಣ್ಣೆಗಳನ್ನು ಹಿಡಿದು ಬಂದ ಅಲಯನ್ಸ್ ವಿದ್ಯಾರ್ಥಿಗಳು ನನ್ನನ್ನು ಊರಿನಲ್ಲಿ ಹುಡುಕಾಡಿದ್ದಾರೆ.ಈ ವೇಳೆ ವಿದ್ಯಾರ್ಥಿಗಳನ್ನು ಪ್ರಶ್ನಿಸಿದ ಸ್ಥಳೀಯರ ಮೇಲೂ ಅವಾಜ್ ಹಾಕಿದ್ದಾರೆ ಎಂದು ಹಲ್ಲೆಗೊಳಗಾದ ಮುನಿಯಲ್ಲಪ್ಪ ತಿಳಿಸಿದ್ದಾರೆ.
ಅಲ್ಲಿನ ಮಕ್ಕಳು ಅಪಘಾತದಿಂದ ಸಾವನ್ನಪ್ಪೋದರ ಜೊತೆಗೆ ಅಮಾಯಕ ಪಾದಚಾರಿಗಳು ಮತ್ತು ವಾಹನ ಸವಾರರ ಸಾವಿಗೂ ಕಾರಣರಾಗುತ್ತಿದ್ದಾರೆ. ಜೊತೆಗೆ ಮೋಜು ಮಸ್ತಿ ರಸ್ತೆಗಳಲ್ಲಿ ಅಶ್ಲೀಲವಾಗಿ ವರ್ತಿಸುವುದು ಸೇರಿದಂತೆ ಸಾಕಷ್ಟು ದೂರುಗಳಿವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂದಹಾಗೆ ಅಲಯನ್ಸ್ ವಿದ್ಯಾರ್ಥಿಗಳ ಹಲ್ಲೆಯಿಂದ ಗಾಯಗೊಂಡ ವೃದ್ಧ ಮುನಿಯಲ್ಲಪ್ಪ ಆನೇಕಲ್ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಆನೇಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ