Hijab Row : ನಾಳೆ ಸುಪ್ರೀಂ ಅಂಗಳದಲ್ಲಿ ಹಿಜಾಬ್ ಅರ್ಜಿ ವಿಚಾರಣೆ
ಶಾಲಾ-ಕಾಲೇಜುಗಳಲ್ಲಿ ಮಾರ್ಚ್ 15ರಂದು ಹಿಜಾಬ್ ಧರಿಸಲು ಅವಕಾಶ ಕೋರಿ ಸಲ್ಲಿಸಲಾಗಿದ್ದಂತ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಅಲ್ಲದೇ ಶಿಕ್ಷಣ ಇಲಾಖೆಯಿಂದ ಶಾಲಾ ಕಾಲೇಜು ಆವರಣದಲ್ಲಿ ಹಿಜಾಬ್ ಧರಿಸೋ ಸಂಬಂಧ ಹೊರಡಿಸಿದ್ದಂತ ಆದೇಶವನ್ನು ಎತ್ತಿ ಹಿಡಿದಿತ್ತು. ಈ ತೀರ್ಪು ಪ್ರಶ್ನಿಸಿ, ಸುಪ್ರೀಂ ಕೋರ್ಟ್ ಗೆ ವಿವಿಧ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಈ ಅರ್ಜಿಯ ವಿಚಾರಣೆಯನ್ನು ನಾಳೆ ಕೈಗೊಳ್ಳಲಿದೆ.
ಈ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವಂತ ಮೇಲ್ಮನವಿಯ ಅರ್ಜಿಯನ್ನು, ಸುಪ್ರೀಂ ಕೋರ್ಟ್ ನ್ಯಾಯಪೀಠವು, ನಾಳೆ ಕೈಗೆತ್ತಿಕೊಳ್ಳಲಿದೆ. ಹೀಗಾಗಿ ರಾಜ್ಯದಲ್ಲಿ ಮತ್ತೆ ಹಿಜಾಬ್ ವಿವಾದ ಭುಗಿಲೇಳೋ ಸಾಧ್ಯತೆ ಇದೆ ಎನ್ನಲಾಗಿದೆ.
2022ರ ಜನವರಿಯಲ್ಲಿ ಹಿಜಾಬ್ ವಿವಾದ ರಾಜ್ಯದಲ್ಲಿ ತಲೆ ಎತ್ತಿತ್ತು. ಉಡುಪಿಯ ಸರ್ಕಾರಿ ಪಿಯು ಕಾಲೇಜ್‌ನಲ್ಲಿ ಆರಂಭವಾದ ಈ ವಿವಾದ ರಾಜ್ಯಾದ್ಯಂತ ವ್ಯಾಪಿಸಿತು. ರಾಜ್ಯಾದ್ಯಂತ ಪರ – ವಿರೋಧ ಪ್ರತಿಭಟನೆಗಳು ನಡೆದಿದ್ದವು.
ಈ ವಿಚಾರವಾಗಿ ವಿಚಾರಣೆ ನಡೆಸಿ ಮಾರ್ಚ್‌ನಲ್ಲಿ ತೀರ್ಪು ನೀಡಿದ್ದ ಕರ್ನಾಟಕ ಹೈಕೋರ್ಟ್, ಹಿಜಾಬ್ ಧಾರಣೆಗೆ ಅವಕಾಶ ನೀಡುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿ ಆದೇಶ ನೀಡಿತ್ತು. ವಿದ್ಯಾರ್ಥಿಗಳು ಸಮವಸ್ತ್ರವನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಹೇಳಿದ್ದ ನ್ಯಾಯಾಲಯ, ಹಿಜಾಬ್ ಹಾಗೂ ಕೇಸರಿ ವಸ್ತ್ರ ಎರಡನ್ನೂ ನಿಷೇಧಿಸಿತ್ತು. ಇದೀಗ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಸರ್ವೋಚ್ಛ ನ್ಯಾಯಾಲಯವು ಯಾವ ತೀರ್ಮಾನ ಕೈಗೊಳ್ಳುತ್ತದೆ ಅನ್ನೋದು ಕುತೂಹಲ ಕೆರಳಿಸಿದೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಜಸ್ಟೀಸ್ ಹೇಮಂತ್ ಗುಪ್ತಾ ಹಾಗೂ ಜಸ್ಟೀಸ್ ಸುಧಾಂಶು ಧುಲಿಯಾ ಅವರನ್ನು ಒಳಗೊಂಡ ಪೀಠ ಸೋಮವಾರ ಆಗಸ್ಟ್ 29ರಂದು ಪ್ರಕರಣದ ವಿಚಾರಣೆ ಆರಂಭಿಸಲಿದೆ. ಸೋಮವಾರವೇ ಸುಪ್ರೀಂ ಕೋರ್ಟ್‌ನ ನೂತನ ಮುಖ್ಯ ನ್ಯಾಯಮೂರ್ತಿ ಯು. ಯು. ಲಲಿತ್ ಅವರೂ ಕೂಡಾ ಕಾರ್ಯಾರಂಭ ಮಾಡುತ್ತಿರೋದು ವಿಶೇಷ.