ಮುಸ್ಲಿಂರಿಗೆ ಹಂದಿ ತಿನ್ನಬಾರದು ಎಂದು ಸಿದ್ದರಾಮಯ್ಯ ಹೇಳಿದ್ದಾರಾ, ಕೇಳಲು ನಿಮಗೆ ತೊಡೆ ಅದುರುತ್ತಾ ? – ಪ್ರತಾಪ್ ಸಿಂಹ ಪ್ರಶ್ನೆ

Share the Article

ದೇವರು ಇಂತಹ ಆಹಾರವನ್ನೇ ತಿನ್ನಿ ಎಂದು ಹೇಳಿದ್ದಾನಾ ಎಂದು ಹಿಂದೂಗಳಿಗೆ ಹೇಳುವ ಸಿದ್ದರಾಮಯ್ಯ ಅದನ್ನು ಮುಸ್ಲಿಂರಿಗೂ ಕೇಳಲಿ. ಯಾಕೆ ಅದನ್ನು ಕೇಳಲು ಅವರಿಗೆ ತೊಡೆ ನಡುಗುತ್ತಾ ಎಂದು ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.

ಮಾಂಸಾಹಾರ ತಿಂದು ದೇವಸ್ಥಾನ ಪ್ರವೇಶ ಮಾಡಬಾರದು ಎಂದು ದೇವರು ಹೇಳಿದ್ದಾನಾ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು ಮಾಧ್ಯಮಗಳ ಮೂಲಕ ಈ ಮಟ್ಟಿಗಿನ ಖಾರವಾದ ಪ್ರಶ್ನೆ ಹಾಕಿದ್ದಾರೆ.

” ಸಿದ್ದು ಸಾರ್. ದೇವರು ಇಂತಹ ಆಹಾರ ತಿಂದು ಬನ್ನಿ ಎಂದು ಹೇಳಿದ್ದಾನಾ ಎಂದು ಮುಸ್ಲಿಂರನ್ನು ಕೇಳಿ. ಮುಸ್ಲಿಂರಿಗೆ ಹಂದಿ ತಿನ್ನಬಾರದು ಎಂದು ಹೇಳಿದ್ದಾರಾ? ದನನೇ ತಿನ್ನಿ ಅಂತಾ ಹೇಳಿದ್ದಾರಾ? ಸಿದ್ದರಾಮಯ್ಯ ಅವರೇ ಅದನ್ನು ಕೇಳಲು ನಿಮಗೆ ತೊಡೆ ಅದುರುತ್ತಾ? ಅದನ್ನು ಕೇಳಲು ನಿಮಗೆ ಆಗಲ್ವಾ ? ” ಎಂದು ಅವರು ಪ್ರಶ್ನಿಸಿದರು.

ಸಿದ್ದರಾಮಯ್ಯ ಅವರು ಮನೆಯಲ್ಲಿ ಕೋಳಿ, ಮೀನು, ಹಂದಿ ಮಾಂಸ ಸೇರಿದಂತೆ ಏನು ಬೇಕಾದರೂ ತಿನ್ನಬಹುದು. ನಮ್ಮಲ್ಲಿ ಆಸ್ತಿಕರು ಹಾಗೂ ನಾಸ್ತಿಕರು ಎಲ್ಲಾ ಇದ್ದಾರೆ. ಸಾರ್ವಜನಿಕವಾಗಿ ಗುಡಿಗೆ ಹೋಗಬೇಕಾದರೆ ಶಿಷ್ಟಾಚಾರ ಇರುತ್ತದೆ. ಆ ಶಿಷ್ಟಾಚಾರ ಪಾಲನೆ ಮಾಡಿ ಎಂದರು. ನಿಮ್ಮ ಮನೆಯಲ್ಲಿ ಯಾವ ಆಹಾರವನ್ನಾದರೂ ತಿನ್ನಿ. ಆದರೆ ದೇವಸ್ಥಾನ ಎನ್ನುವುದು ಪವಿತ್ರ ಸ್ಥಳ. ದೇವಸ್ಥಾನದಲ್ಲಿ ಪ್ರಾಣ ಪ್ರತಿಷ್ಠಾಪನೆ ಮಾಡಿರುತ್ತಾರೆ. ಅಲ್ಲಿಗೆ ಹೋಗಬೇಕಾದರೆ ಮಡಿಯಿಂದ ಹೋಗುತ್ತಾರೆ. ಚಾಮುಂಡಿ ಹಬ್ಬವನ್ನು ಮೈಸೂರಿನ ಹಳ್ಳಿ ಹಳ್ಳಿಯಲ್ಲಿ ಮಾಡುತ್ತಾರೆ. ಬಹಳ ಮಡಿಯಿಂದ ಮೊಸರನ್ನವನ್ನು ನೈವೇದ್ಯ ಅರ್ಪಿಸುತ್ತಾರೆ. ನಂತರ ಮರಿ ಹೊಡೆದುಕೊಂಡು ತಿನ್ನುತ್ತಾರೆ ಎಂದರು.

ಮರಿ ಹೊಡೆದು ತಿನ್ನುವ ಮೈಸೂರಿಗರೇ, ಚಾಮುಂಡಿ ಬೆಟ್ಟಕ್ಕೆ ಹೋಗುವಾಗ ಮಡಿಯಿಂದ ಹೋಗುತ್ತಾರೆ. ನೀವು ಯಾವ ಆಹಾರವನ್ನು ಬೇಕಾದರೂ ತಿನ್ನಿ. ನಾನು ಕೂಡ ಎಲ್ಲಾ ಆಹಾರವನ್ನು ತಿನ್ನುತ್ತೇನೆ. ಆದರೆ ಮಾಂಸ ತಿಂದು ದೇವಸ್ಥಾನಕ್ಕೆ ಹೋಗಬಾರದು ಅಷ್ಟೆ ಎಂದು ಅಭಿಪ್ರಾಯಪಟ್ಟರು.

ಸಿದ್ದರಾಮಯ್ಯ ಈ ಹಿಂದೆ ವೀರಶೈವ ಹಾಗೂ ಲಿಂಗಾಯಿತ ಧರ್ಮ ಒಡೆಯಲು ಹೋದರು. ಅವರು ಪೂಜಿಸುವ ಬಸವೇಶ್ವರ ದೇವಸ್ಥಾನಕ್ಕೆ ಮಾಂಸ ತಿಂದು ಹೋಗಿದ್ದಾರೆ ಎಂದು ಸಿದ್ದರಾಮಯ್ಯ ಅವರ ಕಿಡಿಕಾರಿದರು.

Leave A Reply

Your email address will not be published.