ಸೈಕ್ಲೋನ್ ಎಫೆಕ್ಟ್ : ಕರಾವಳಿಯಲ್ಲಿ ಆ.22 ರಿಂದ ಮೂರು ದಿನ ಭಾರೀ ಮಳೆ, ಯಲ್ಲೋ ಅಲರ್ಟ್ ಘೋಷಣೆ!
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಕಾರಣದಿಂದಾಗಿ, ರಾಜ್ಯದ ಹಲವೆಡೆ ಭಾರೀ ಮಳೆಯಾಗುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದಲ್ಲಿ ಇಂದಿನಿಂದ ಒಂದು ವಾರ ಕಾಲ ಮತ್ತೆ ಮಳೆ ಆರಂಭವಾಗಲಿದೆ. ಕಳೆದ ಒಂದು ವಾರದಿಂದ ಬಿಡುವು ಕೊಟ್ಟಿದ್ದ ಮಳೆ ಮತ್ತೆ ಶುರುವಾಗಲಿದೆ.
ಆ.22 ರಿಂದ ಮೂರು ದಿನ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಭಾರೀ ಮಳೆಯಾಗುವ ಸೂಚನೆ ಇದೆ. ಚಿಕ್ಕಮಗಳೂರು, ಕೊಡಗು, ಮೈಸೂರು, ಚಾಮರಾಜನಗರ ಮತ್ತು ಕೋಲಾರದಲ್ಲಿ ಆ. 24ರಂದು ಭಾರಿ ಮಳೆಯಾಗಲಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ನೀಡಿದೆ. ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನ ಚದುರಿದಂತೆ ಮಳೆಯಾಗಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಒಂದು ವಾರದಿಂದ ಮಳೆ ಕಡಿಮೆ ಇತ್ತು. ಹಾಗಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಉಷ್ಣಾಂಶ ದಿಢೀರ್ ಏರಿಕೆ ಕಂಡಿತ್ತು. ಬೆಂಗಳೂರು,ಮಂಡ್ಯ, ಮೈಸೂರು, ಮಂಗಳೂರು, ಕಲಬುರಗಿ, ಬೀದರ್, ಗದಗ, ರಾಯಚೂರು ಮತ್ತು ವಿಜಯಪುರದಲ್ಲಿ ಗರಿಷ್ಠ ತಾಪಮಾನದಲ್ಲಿ ಆಗಸ್ಟ್ 2ನೇ ವಾರದಲ್ಲಿದ್ದ 22-24 ಡಿಗ್ರಿ ಸೆಲ್ಸಿಯಸ್‌ನಿಂದ 30-32 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಿತ್ತು. ಆದರೆ ಇದೀಗ ವಾತಾವರಣದಲ್ಲಿ ದಿಢೀರ್ ಬದಲಾವಣೆಯಾದ ಹಿನ್ನೆಲೆಯಲ್ಲಿ ಮಳೆಯಾಗುತ್ತಿದೆ. ಭಾನುವಾರ ಬೆಂಗಳೂರು, ಬೆಂ. ಗ್ರಾಮಾಂತರ, ಹಾಸನ, ಮಂಡ್ಯ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಬಿದ್ದಿದೆ.