ಸಿದ್ದರಾಮಯ್ಯ ಅವರ ಮೇಲೆ ಮೊಟ್ಟೆ | ಕೈ ಕಾರ್ಯಕರ್ತರಿಂದ ಆ.26 ಕ್ಕೆ ಮಡಿಕೇರಿ ಚಲೋ !

ಮೊನ್ನೆ ಮಡಿಕೇರಿ ಪ್ರವಾಸದ ವೇಳೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣ ನಿಲ್ಲುವ ಲಕ್ಷಣ ತೋರಿಸುತ್ತಿಲ್ಲ. ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದು, ಟ್ವೀಟ್ ಮೇಲೆ ಟ್ವೀಟ್ ಗಳ ಕೈ ಬದಲಾವಣೆ ಆದ ನಂತರ ಈಗ
ಮಡಿಕೇರಿ ಚಲೋಗೆ ಸಿದ್ದು ಬೆಂಬಲಿಗರು ಸೂಚನೆ ನೀಡಿದ್ದಾರೆ.

ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ಚಲೋಗೆ ಕಾಂಗ್ರೆಸ್ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಶಾಸಕಾಂಗ ಪಕ್ಷದ ಕಾರ್ಯದರ್ಶಿ ಈ.ತುಕಾರಾಮ್​ ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದಾರೆ.

ಆಗಸ್ಟ್ 26ರ ಬೆಳಗ್ಗೆ 10:30 ಕ್ಕೆ ಪ್ರತಿಭಟನೆಗೆ ಕಾಂಗ್ರೆಸ್ ಕರೆ ನೀಡಿದೆ. ಮಡಿಕೇರಿಯ ಭಗವತಿ ನಗರದಲ್ಲಿರುವ ಎಸ್ ಪಿ ಕಚೇರಿ ಎದುರು ಪ್ರತಿಭಟನೆಗೆ ಕಾಂಗ್ರೆಸ್ ಕರೆ ಕೊಟ್ಟಿದ್ದು, ಚಲೋದಲ್ಲಿ ಭಾಗಿಯಾಗುವಂತೆ ಎಲ್ಲಾ ಕಾರ್ಯಕರ್ತರಿಗೆ ಮತ್ತು ನಾಯಕರಿಗೆ ಸೂಚನೆ ನೀಡಲಾಗಿದೆ.

ತೀವ್ರ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡುವ ಸಲುವಾಗಿ ಕೊಡಗು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭ ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದು ವಿರಾಜ ಪೇಟೆಯ ಸಂಪತ್ ಎಂಬವರು ಆಕ್ರೋಶ ವ್ಯಕ್ತಪಡಿಸಿದ್ದರು.

ಕೊಡಗು ಜಿಲ್ಲೆಗೆ ಪ್ರತಿಪಕ್ಷ ನಾಯಕರ ಭೇಟಿ ಸಂದರ್ಭ ನಡೆದ ಈ ಅಹಿತಕರ ಘಟನೆಯನ್ನು ಖಂಡಿಸಿ ಇದೀಗ ಕಾಂಗ್ರೆಸ್ ಶಾಸಕಾಂಗ ಪಕ್ಷದ ಮೂಲಕವೇ ಮಡಿಕೇರಿ ಚಲೋ ಕೈಗೊಳ್ಳಲು ತೀರ್ಮಾನಿಸಿ ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು ಆಗಿರುವ ಸಿದ್ದರಾಮಯ್ಯ ಹಾಗೂ ಪಕ್ಷದ ಹಿರಿಯ ನಾಯಕರ ಸೂಚನೆ ಮೇರೆಗೆ ಕಾಂಗ್ರೆಸ್ ‌ಶಾಸಕಾಂಗ ಪಕ್ಷದ ಕಾರ್ಯದರ್ಶಿ ಈ. ತುಕಾರಾಮ್ ಅವರಿಂದ ಅಧಿಕೃತ ಸೂಚನೆ ಹೊರಬಿದ್ದಿದೆ.​

Leave A Reply

Your email address will not be published.