ಮಂಗಳೂರು : ಏರ್ ಪೋರ್ಟ್ ಪ್ರಯಾಣಿಕರೇ ಗಮನಿಸಿ, ಹೆಚ್ಚುವರಿ ಶುಲ್ಕದ ಬರೆ ಬೀಳುವ ಸಾಧ್ಯತೆ!!!
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಅಭಿವೃದ್ಧಿ ಚಟುವಟಿಕೆಗಳ ವಿಷಯವನ್ನು ಕೈಗೊಂಡಿದೆ. ಹಾಗಾಗಿ ಅದಾನಿ ಏರ್‌ಪೋರ್ಟ್ಸ್ ಒಡೆತನದ ಕೈಗೊಳ್ಳುವ ಸಲುವಾಗಿ ದೇಶೀಯ ಪ್ರಯಾಣಿಕರ ಮೇಲಿನ ಬಳಕೆದಾರ ಅಭಿವೃದ್ಧಿ ಶುಲ್ಕವನ್ನು (ಯುಡಿಎಫ್) ತಕ್ಷಣವೇ 100 ರೂ. ಹೆಚ್ಚಿಸುವಂತೆ ಹೇಳಿದೆ. ಈ ಶುಲ್ಕ ಮಂಗಳೂರು ವಿಮಾನ ನಿಲ್ದಾಣಕ್ಕೆ ಬರುವ ಮತ್ತು ನಿಲ್ದಾಣದಿಂದ ಹೊರಡುವ ಎಲ್ಲಾ ಪ್ರಯಾಣಿಕರಿಗೆ ಅನ್ವಯಿಸಲು ಕೋರಿದೆ.
ಸುಂಕ ನಿರ್ಧರಿಸುವ ಭಾರತೀಯ ವಿಮಾನ ನಿಲ್ದಾಣಗಳ ಆರ್ಥಿಕ ನಿಯಂತ್ರಣ ಪ್ರಾಧಿಕಾರ (ಎಇಆರ್‌ಎ) ಮಂಗಳೂರು ವಿಮಾನ ನಿಲ್ದಾಣಕ್ಕೆ ಏಪ್ರಿಲ್ 1, 2021ರಿಂದ ಮಾರ್ಚ್ 31, 2026ರ ಅವಧಿಗೆ ಸುಂಕವನ್ನು ನಿಗದಿಪಡಿಸುವ ಪ್ರಕ್ರಿಯೆಯಲ್ಲಿದೆ. ಈ ವೇಳೆ ಅದಾನಿ ಈ ಬೇಡಿಕೆ ಇಟ್ಟಿದೆ.
ಅದಾನಿ ಏರ್ ಪೋರ್ಟ್ಸ್ ಅಂತರರಾಷ್ಟ್ರೀಯ ಪ್ರಯಾಣಿಕರಿಗೆ 525 ರೂ. ಶುಲ್ಕ ವಿಧಿಸಿ ಅದನ್ನು ಮಾರ್ಚ್ 2026ರೊಳಗೆ 1,200 ರೂ.ಗೆ ಹೆಚ್ಚಿಸಲು ಪ್ರಯತ್ನ ಮಾಡುತ್ತಿದೆ.
ಈ ಅಕ್ಟೋಬರ್‌ನಿಂದ ದೇಶೀಯ ಪ್ರಯಾಣಿಕರ ಮೇಲೆ 250 ರೂ.ನಷ್ಟು ಯುಡಿಎಫ್ ಅನ್ನು ವಿಧಿಸಲು ಅನುಮತಿ ಕೇಳಿದೆ. ಮತ್ತು ಮಾರ್ಚ್ 31, 2026ರ ವೇಳೆಗೆ ಇದನ್ನು ಕ್ರಮೇಣ 725 ರೂ.ಗೆ ಹೆಚ್ಚಿಸಲು ವಿಮಾನ ನಿಲ್ದಾಣವು ತನ್ನ ಇತ್ತೀಚಿನ ಸುಂಕ ವಿವರಗಳ ಸಲ್ಲಿಕೆಯಲ್ಲಿ ಕೋರಿದೆ.
ಎಇಆರ್ ಒಪ್ಪಿದಲ್ಲಿ ಮಂಗಳೂರು ವಿಮಾನ ನಿಲ್ದಾಣದಿಂದ ನಿರ್ಗಮಿಸುವ ಹಾಗೂ ಆಗಮಿಸುವ ಎಲ್ಲಾ ಪ್ರಯಾಣಿಕರ ಮೇಲೆ ಈ ಯುಡಿಎಫ್ ಶುಲ್ಕವನ್ನು ವಿಧಿಸಲಾಗುತ್ತದೆ. ಪ್ರಸ್ತುತ ದೇಶೀಯ ಪ್ರಯಾಣಿಕರಿಗೆ 150 ರೂ. ಯುಡಿಎಫ್ ಹಾಗೂ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ 825 ರೂ. ಶುಲ್ಕವಿದೆ. ಆದರೆ ಸದ್ಯಕ್ಕೆ ವಿಮಾನ ನಿಲ್ದಾಣದಿಂದ ನಿರ್ಗಮಿಸುವ ಪ್ರಯಾಣಿಕರಿಗೆ ಮಾತ್ರ ಶುಲ್ಕವಿದೆ. ಆಗಮಿಸುವ ಪ್ರಯಾಣಿಕರಿಗೆ ಈ ಶುಲ್ಕ ಇಲ್ಲ.
ಇದಿಷ್ಟೇ ಅಲ್ಲದೆ ವಿಮಾನಯಾನ ಸಂಸ್ಥೆಗಳ ವಿಮಾನಗಳ ಲ್ಯಾಂಡಿಂಗ್ ಮತ್ತು ಪಾರ್ಕಿಂಗ್ ಶುಲ್ಕವನ್ನೂ ಹೆಚ್ಚಿಸುವಂತೆ ವಿಮಾನ ನಿಲ್ದಾಣವು ಮನವಿ ಸಲ್ಲಿಸಿದೆ.
ಏರ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾ (ಎಎಐ) ಒಡೆತನದ ಹಲವು ವಿಮಾನ ನಿಲ್ದಾಣಗಳು ಹಾಗೂ ಖಾಸಗಿ ವಿಮಾನ ನಿಲ್ದಾಣಗಳು ತಾವು ಕೈಗೊಂಡಿರುವ ವಿಸ್ತರಣೆ ಕಾರ್ಯಗಳಿಗಾಗಿ ಸುಂಕವನ್ನು ಹೆಚ್ಚಿಸುವಂತೆ ಕೋರಿವೆ.
ಕೋವಿಡ್ ನಂತರ ಈಗಷ್ಟೇ ವಿಮಾನಯಾನ ವಲಯ ಚೇತರಿಸಿಕೊಳ್ಳುತ್ತಿದ್ದು, ಬಳಕೆದಾರರ ಹಾಗೂ ಲ್ಯಾಂಡಿಂಗ್ ಮತ್ತು ಪಾರ್ಕಿಂಗ್ ಶುಲ್ಕಗಳಲ್ಲಿ ಯಾವುದೇ ಗಮನಾರ್ಹ ಹೆಚ್ಚಳವನ್ನು ಮಾಡಬಾರದು ಎಂದು ವಿಮಾನಯಾನ ಸಂಸ್ಥೆಗಳು ಆಗ್ರಹಿಸಿವೆ.