Breaking News | ಮೀನು ಪ್ರಿಯರಿಗೆ ರುಚಿಕರ ಸುದ್ದಿ ; ರಾಜ್ಯ ಸರ್ಕಾರದಿಂದ ‘ಮೀನೂಟದ ಮನೆ’ ಭಾಗ್ಯ ಆರಂಭ- ಸಚಿವ ಅಂಗಾರ ಘೋಷಣೆ !
ಮೀನು ಪ್ರಿಯರಿಗೆ ರುಚಿಕರ ಸುದ್ದಿ ಸಿಕ್ಕಿದ್ದು, ರಾಜ್ಯ ಸರ್ಕಾರವು ರಾಜ್ಯಾದ್ಯಂತ ‘ ಮೀನೂಟ ಮನೆ ‘ ಆರಂಭಿಸಲು ನಿರ್ಧರಿಸಿದೆ. ಸಿದ್ದರಾಮ್ಯನವರ ಪರಿಭಾಷೆಯಲ್ಲಿ ಹೇಳೋದಾದರೆ ಇದು ಮೀನೂಟದ ಭಾಗ್ಯ !!
ಇನ್ನು ಕನ್ನಡಿಗರಿಗೆ ಹಬ್ಬ. ಕರಾವಳಿಯ ಬೀದಿಬೀದಿಯಲ್ಲೂ ಕಾಣಸಿಗುವ ಕಮ್ಮಗಿನ ಪರಿಮಳದ ಮೀನು ಖಾದ್ಯಗಳ ವ್ಯಂಜನಗಳ ಘಮ ಇನ್ನು ರಾಜ್ಯವ್ಯಾಪಿ ಹರಡಲಿದೆ. ಅತ್ಯಂತ ರುಚಿಕರ ಮತ್ತು ಅಷ್ಟೇ ಆರೋಗ್ಯಕರ ಆಹಾರ ಇನ್ನು ಕಡಿಮೆ ದರದಲ್ಲಿ ಗ್ರಾಹಕರ ಚಪಲದ ಬಾಯನ್ನು ತಣಿಸಲಿದೆ. ಆ ನಿಟ್ಟಿನಲ್ಲಿ ಕರಾವಳಿಯವರೆ ಆದ ಮೀನುಗಾರಿಕಾ ಸಚಿವ ಎಸ್. ಅಂಗಾರ ಅವರು ರಾಜ್ಯದ ಜನರಿಗೆ ಒಂದೊಳ್ಳೆಯ ಮೀನೂಟ ಮಾಡಿಸಲು ಹೊರಟಿದ್ದಾರೆ.
ಇವತ್ತು ವಿಧಾನಸೌಧದಲ್ಲಿ ಈ ಕುರಿತು ಮಾತನಾಡಿದ ಮೀನುಗಾರಿಕೆ ಮತ್ತು ಬಂದರು ಖಾತೆ ಸಚಿವ ಎಸ್.ಅಂಗಾರ, ಮೀನುಗಾರಿಕಾ ಇಲಾಖೆಯ ವತಿಯಿಂದ ಬೆಂಗಳೂರು ಸೇರಿ ಕೆಲವು ಕಡೆಗಳಲ್ಲಿ ಮೀನು ಊಟದ ಹೋಟೇಲ್‌ಗಳನ್ನ ಹಿಂದೆ ಪ್ರಾರಂಭಿಸಿಲಾಗಿತ್ತು. ಆದರೆ ಅದನ್ನು ವಿಸ್ತರಿಸೋಕೆ ಆಗಿರಲಿಲ್ಲ. ಹಾಗಾಗಿ ಸಧ್ಯ ಖಾಸಗಿ ಸಹಭಾಗಿತ್ವದಡಿ ರಾಜ್ಯದ ಎಲ್ಲೆಡೆ ಮೀನೂಟ ಮನೆ ಪ್ರಾರಂಭಿಸಲಿದೆ ಎಂದಿದ್ದಾರೆ ಸಚಿವ ಆಂಗಾರ.
ಇದಕ್ಕಾಗಿ ಲಿಂಗನಮಕ್ಕಿ, ಭದ್ರಾ ಸೇರಿ ರಾಜ್ಯದ ಪ್ರಮುಖ 12 ಜಲಾಶಯಗಳಲ್ಲಿ ಗರಿಷ್ಠ ಪ್ರಮಾಣದ ಮೀನು ಉತ್ಪಾದನೆ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು. ಹಿನ್ನೀರಿನಲ್ಲಿ ಮೀನು ಬೆಳೆದು, ಜತೆಗೆ ಸಾಗರೋತ್ಪನ್ನ ವನ್ನೂ ಬಳಸಿಕೊಂಡು ಭರ್ಜರಿ ಊಟ ಹಾಕಕ್ಕಿದೆ ಸರ್ಕಾರ. ಸಿದ್ದು ‘ ಭಾಗ್ಯದ ಬಾಗಿಲು ‘ ತೆರೆದಂತೆ ಮಾಡಿದಂತೆ ಉಚಿತ ‘ ಮೀನೂಟದ ‘ ಭಾಗ್ಯ ತೆರೆದಿಟ್ಟರೆ ಜನ ಅಂಗಾರರನ್ನು ಯಾವತ್ತೂ ಮರೆಯಲಿಕ್ಕಿಲ್ಲ ಅನ್ನುವುದು, ಮೀನೂಟದ ರುಚಿ ಬಲ್ಲವರ ಅನಿಸಿಕೆಯಾಗಿದೆ.
ಮೊದಲ ಹಂತದಲ್ಲಿ ಬೆಂಗಳೂರಿನಲ್ಲಿ ಆರು ಕಡೆಗಳಲ್ಲಿ ಬಿಬಿಎಂಪಿ ಹಾಗೂ ಬಿಡಿಎ ಜಾಗದಲ್ಲಿ ಆರಂಭಿಸಲಾಗುತ್ತದೆ. ಇಲಾಖೆಗೆ ಅನುದಾನದ ಕೊರತೆ ಇರುವುದರಿಂದ ಬಿಬಿಎಂಪಿ ಹಾಗೂ ಬಿಡಿಎ ಜತೆಗೆ ಮಾತುಕತೆ ನಡೆಸಿದ್ದು ಒಪ್ಪಿಗೆ ಸಿಕ್ಕಿದೆ ಎಂದು ಅಂಗಾರ ತಿಳಿಸಿದರು.
ರಾಜ್ಯದಲ್ಲಿರುವ ಜಲಾಶಯಗಳಲ್ಲಿ ಮೀನು ಉತ್ಪಾದನೆ ಕುಂಟುತ್ತಾ ಸಾಗುತ್ತಿದ್ದು, ಗರಿಷ್ಠ ಪ್ರಮಾಣದ ಮೀನು ಉತ್ಪಾದನೆ ಮಾಡಲು ಯೋಜನೆ ರೂಪಿಸಲಾಗಿದೆ. ಮೀನು ಮರಿ ಉತ್ಪಾದನೆ ರಾಜ್ಯದಲ್ಲಿ ನಿಂತು ಹೋಗುತ್ತಿದ್ದು, ರಾಜ್ಯಗಳಿಂದ ಆಮದು ಮಾಡಿಕೊಳ್ಳಬೇಕಾದ ಸ್ಥಿತಿ ಇದೆ. ಆದ್ದರಿಂದ ರಾಜ್ಯದಲ್ಲಿಯೇ ಮೀನು ಮರಿ ಉತ್ಪಾದನೆಗೆ ಆದ್ಯತೆ ನೀಡಲಾಗುತ್ತದೆ.
ಒಳನಾಡಿನಲ್ಲಿಯೂ ಮೀನುಗಾರಿಕೆಗೆ ವಿಫುಲ ಅವಕಾಶಗಳಿವೆ. ಆ ನಿಟ್ಟಿನಲ್ಲಿ ಎಲ್ಲೆಲ್ಲಿ ಮೀನು ಉತ್ಪಾದನೆಗೆ ಸಾಧ್ಯವೋ ಅದೆಲ್ಲವನ್ನೂ ಮಾಡಲಾಗುತ್ತದೆ. ಗ್ರಾಹಕರಿಗೆ ಉತ್ತಮ ದರ್ಜೆಯ ಮೀನು ಕರಾವಳಿ ಮಾತ್ರವಲ್ಲದೇ ಒಳನಾಡಿನಲ್ಲಿಯೂ ಸಿಗಬೇಕು ಎಂಬುದು ಸರ್ಕಾರದ ಉದ್ದೇಶವೆಂದು ಸಚಿವ ಅಂಗಾರ ಹೇಳಿದರು.
ಮೀನುಗಾರಿಕೆ ಜತೆಗೆ ಮಾರುಕಟ್ಟೆ ಒದಗಿಸುವುದೂ ಅಷ್ಟೇ ಮುಖ್ಯವಾಗಿದ್ದು, ಸದ್ಯಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೀನು ಹರಾಜು ಮುಗಿದ ಕೂಡಲೇ ಬೆಳಗ್ಗೆ 7 ಗಂಟೆ ಒಳಗೆ ಎಲ್ಲ ತಾಲೂಕುಗಳಿಗೆ ಮೀನು ತಲುಪಿಸಲಾಗುತ್ತದೆ. ಅಲ್ಲಿಂದ ಹಳ್ಳಿಗಳಿಗೆ ಎಂಟು ಗಂಟೆಯೊಳಗೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು. ಅದಕ್ಕಾಗಿ ಸೋಲಾರ್ ಪ್ಯಾನಲ್ ಅಳವಡಿಸಿರುವ ಕೋಲ್ಡ್ ಸ್ಟೋರೇಜ್ ವ್ಯವಸ್ಥೆ ಇರುವ ಮೂರು ಮತ್ತು ನಾಲ್ಕು ಚಕ್ರದ ವಾಹನಗಳನ್ನು ಒದಗಿಸಲಾಗುವುದು. ಅದೇ ಮಾದರಿಯನ್ನು ಉಳಿದ ಕಡೆಗೂ ವಿಸ್ತರಿಸುವ ಉದ್ದೇಶವಿದ್ದು, ಸುಮಾರು 1500 ವಾಹನಗಳ ಅಗತ್ಯವಿದೆ ಎಂದು ಅಂಗಾರ ತಿಳಿಸಿದ್ದಾರೆ.