Ration Cards : ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವವರೇ ಇಲಾಖೆಯಿಂದ ನಿಮಗೊಂದು ಮಹತ್ವದ ಮಾಹಿತಿ !
ಇಲಾಖೆಗೆ ತಪ್ಪು ಮಾಹಿತಿ ನೀಡಿ, ಪಡಿತರ ಚೀಟಿ ಪಡೆಯಲು ಅನರ್ಹರಿದ್ದರೂ ಬಡವರಿಗಾಗಿ ಇದ್ದ ಈ ಯೋಜನೆಯ ದುರುಪಯೋಗ ಪಡೆದುಕೊಂಡಿದ್ದವರ ವಿರುದ್ಧ ಇಲಾಖೆ ಕ್ರಮ ಕೈಗೊಂಡಿದೆ. ಬಡವರಿಗಾಗಿ ಮೀಸಲಿರುವ ಬಿಪಿಎಲ್ ಕಾರ್ಡ್‌ಗಳನ್ನು ಆರ್ಥಿಕವಾಗಿ ಸಬಲರಾದವರೂ ಅನಧಿಕೃತವಾಗಿ ಪಡೆದು, ಸರಕಾರಕ್ಕೆ ವಂಚಿಸಿದ್ದಾರೆ. ಹೀಗಾಗಿ 2021ರ ಜನವರಿ 30 ರಿಂದ 2022ರ ಜೂ.30 ರವರೆಗೆ 30,30,024 ರೇಷನ್ ಕಾರ್ಡ್‌ಗಳನ್ನು ರದ್ದುಪಡಿಸಲಾಗಿದೆ. ಇದರಲ್ಲಿ21,679 ಅಂತ್ಯೋದಯ ಮತ್ತು 3,08,345 ಬಿಪಿಎಲ್ ಕಾರ್ಡ್‌ಗಳಿವೆ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ರಾಜ್ಯದಲ್ಲಿ 3.30 ಲಕ್ಷಕ್ಕೂ ಹೆಚ್ಚು ಪಡಿತರ ಚೀಟಿಗಳನ್ನು ರದ್ದುಪಡಿಸಿದ್ದು, 11.91 ಕೋಟಿಗೂ ಅಧಿಕ ದಂಡ ವಸೂಲಿ ಮಾಡಿದೆ.
ಕೆಲ ಕಾರ್ಡ್‌ಗಳನ್ನು ಎಪಿಎಲ್‌ಗೂ ಪರಿವರ್ತಿಸಲಾಗಿದೆ. ಅನಧಿಕೃತ ಕಾರ್ಡ್‌ಗಳನ್ನು ಹಿಂದಿರುಗಿಸುವಂತೆ ನೋಟಿಸ್ ಕೂಡ ನೀಡಲಾಗಿದೆ. ಹಿಂದಿರುಗಿಸದ ಕಾರ್ಡ್‌ದಾರರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಇಲಾಖೆ ಅಧಿಕಾರಿಗಳು ತಿಳಿಸಿದರು.
ಇಲಾಖೆಗೆ ವಂಚಿಸಿ ಉಚಿತವಾಗಿ ಅಕ್ಕಿ, ಗೋಧಿ, ರಾಗಿ, ಸಕ್ಕರೆ ಮತ್ತು ತಾಳೆ ಎಣ್ಣೆ ಸೇರಿ ಇತರೆ ಪದಾರ್ಥ ದುರುಪಯೋಗ ಮಾಡಿಕೊಂಡಿದ್ದಾರೆ. ಇಷ್ಟು ಮಾತ್ರವಲ್ಲದೇ, ಬಿಪಿಎಲ್ ಪಡಿತರದಾರರಿಗೆ ಆಸ್ಪತ್ರೆಗಳಲ್ಲಿ ಉಚಿತವಾಗಿ ಸಿಗುವ ಆರೋಗ್ಯ ಸೇವೆ ಮತ್ತಿತರ ಸಾಕಷ್ಟು ಸೇವೆಗಳ ದುರುಪಯೋಗ ಮಾಡಿದ್ದಾರೆ. ಹೀಗಾಗಿ, ಇಲಾಖೆ ಅಂತಹ ಕಾರ್ಡ್‌ದಾರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ನಿರ್ಧರಿಸಿದೆ.
ಸರಕಾರಿ ನೌಕರರು ಸರಕಾರಿ ಸ್ವಾಮ್ಯದ ಸಂಸ್ಥೆ,
ಮಂಡಳಿ, ನಿಗಮ ಮತ್ತು ಸ್ವಾಯುತ್ತ ಸಂಸ್ಥೆಗಳಲ್ಲಿಕಾರ್ಯನಿರ್ವಹಿಸುವ ಸಿಬ್ಬಂದಿ ಆದಾಯ, ಸೇವಾ ಮತ್ತು ವ್ಯಾಟ್ ತೆರಿಗೆ ಪಾವತಿಸುವ ಕುಟುಂಬಗಳು ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್‌ಗಿಂತ ಹೆಚ್ಚು ಒಣಭೂಮಿ ಅಥವಾ ನೀರಾವರಿ ಭೂಮಿ ಹೊಂದಿರುವವರು ನಗರ ಪ್ರದೇಶಗಳಲ್ಲಿ ಒಂದು ಸಾವಿರ ಚದರ ಅಡಿಗಿಂತ ಹೆಚ್ಚಿನ ವಿಸ್ತೀರ್ಣದ ಸ್ವಂತ ಮನೆ ಹೊಂದಿರುವವರು ವಾರ್ಷಿಕ 1.20 ಲಕ್ಷಕ್ಕಿಂತ ಹೆಚ್ಚು ಆದಾಯ ಹೊಂದಿರುವ ಕುಟುಂಬಗಳು ಜೀವನೋಪಯೋಕ್ಕಾಗಿ ಸ್ವಂತ ವಾಣಿಜ್ಯ ವಾಹನ ಅಂದರೆ ಟ್ರ್ಯಾಕ್ಟರ್, ಮ್ಯಾಕ್ಸಿಕ್ಯಾಬ್, ಟ್ಯಾಕ್ಸಿ ಹೊಂದಿರುವ ಕುಟುಂಬಗಳನ್ನು ಹೊರತುಪಡಿಸಿ ಇತರೆ ಮಾದರಿಯ ನಾಲ್ಕು ಚಕ್ರ ವಾಹನ ಹೊಂದಿರುವ ಕುಟುಂಬಗಳು ಆರ್ಥಿಕವಾಗಿ ಸಬಲರು ಎಂದು ಮಾನದಂಡ ನಿಗದಿಪಡಿಸಿದೆ.
ಅನಧಿಕೃತವಾಗಿ ಬಿಪಿಎಲ್ ಪಡಿತರ ಕಾರ್ಡ್‌ಗಳನ್ನು ಪಡೆದವರು ಸ್ವಯಂಪ್ರೇರಿತವಾಗಿ ವಾಪಸ್ ನೀಡುವಂತೆ,
ಸರಕಾರ ನಿಗದಿಪಡಿಸಿದ್ದ ಮಾನದಂಡಗಳನ್ನು ಉಲ್ಲಂಘಿಸಿದವರಿಗೆ ಇಲಾಖೆ ಎರಡು ವರ್ಷಗಳ ಹಿಂದೆಯೇ ಆದೇಶ ನೀಡಿತ್ತು. ಕರ್ನಾಟಕ ಅಗತ್ಯ ವಸ್ತುಗಳ ಸಾರ್ವಜನಿಕ ವಿತರಣಾ ವ್ಯವಸ್ಥೆ (ನಿಯಂತ್ರಣ)ಆದೇಶದನ್ವಯ ಮೊದಲು ಶಾಸನಬದ್ಧ ಕಾರಣ ಕೇಳಿ ನೋಟಿಸ್ ನೀಡಲಾಗುತ್ತದೆ. ನೋಟಿಸ್ ತಲುಪಿ 7 ದಿನದೊಳಗೆ ಲಿಖಿತ ಸಮಜಾಯಿಷಿ ನೀಡದಿದ್ದರೆ ಇಲಾಖೆ ಶಿಸ್ತು ಕ್ರಮ ತೆಗೆದುಕೊಳ್ಳಲಿದೆ. ಒಂದು ವೇಳೆ ಕಾರ್ಡ್ ವಾಪಸ್ ನೀಡದಿದ್ದಲ್ಲಿಸರಕಾರವೇ ಪತ್ತೆ ಹಚ್ಚಿ ಪಡಿತರ ಪಡೆದುಕೊಳ್ಳುತ್ತಿದ್ದ ದಿನದಿಂದ ಈವರೆಗೆ ಎಷ್ಟು ಆಹಾರ ಪದಾರ್ಥಗಳನ್ನು ಪಡೆದಿದ್ದಾರೆ ಎಂಬುದನ್ನು ಲೆಕ್ಕ ಮಾಡಿ ಕೆಜಿಗೆ 35 ರೂ.ನಂತೆ ವಸೂಲಿ ಜತೆಗೆ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ಇಲಾಖೆ ಆದೇಶದಲ್ಲಿ ತಿಳಿಸಿತ್ತು.