ಮಂಗಳೂರು: ಯುವಕ-ಯುವತಿಯ ಮೊಬೈಲ್ ಚಾಟಿಂಗ್ | ಟೇಕಾಫ್ಗೆ ಸಿದ್ದವಾಗಿದ್ದ ವಿಮಾನ ಸಂಚಾರ ಮೊಟಕುಗೊಳಿಸಿ ತಪಾಸಣೆ
ಮಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಯುವಕ-ಯುವತಿ ಚಾಟಿಂಗ್ ನಿಂದಾಗಿ ರನ್ ವೇನಲ್ಲಿ ಟೇಕಾಫ್ಗೆ ಸಿದ್ದವಾಗಿದ್ದ ವಿಮಾನ ಸಂಚಾರವನ್ನು ಮೊಟಕುಗೊಳಿಸಿ ಪ್ರಯಾಣಿಕರನ್ನು ಇಳಿಸಿ ವಿಮಾನವನ್ನು ತೀವ್ರ ತಪಾಸಣೆಗೆ ಒಳಪಡಿಸಿದ ಘಟನೆ ಭಾನುವಾರ ಮಧ್ಯಾಹ್ನ ವರದಿಯಾಗಿದೆ.
ಹೌದು. ಮಂಗಳೂರು ಏರ್ ಪೋರ್ಟ್ನಲ್ಲಿ ಯುವಕ-ಯುವತಿ ಭದ್ರತೆ ಬಗ್ಗೆ ಆತಂಕ ಹುಟ್ಟಿಸುವ ರೀತಿಯಲ್ಲಿ ವಾಟ್ಸಾಪ್ ಚಾಟ್ ಮಾಡಿದ್ದಕ್ಕೆ ಟೇಕಾಫ್ಗೆ ಸಿದ್ದವಾಗಿದ್ದ ವಿಮಾನ ಸಂಚಾರ ಸ್ಥಗಿತಗೊಂಡಿದೆ.
ಯುವತಿ ಮಂಗಳೂರು ಏರ್ ಪೋರ್ಟ್ ಮೂಲಕ ಬೆಂಗಳೂರಿಗೆ ತೆರಳಲು ಬಂದಿದ್ದಳು. ಯುವಕ ಮಂಗಳೂರು ಏರ್ ಪೋರ್ಟ್ ಮೂಲಕ ಮುಂಬೈಗೆ ತೆರಳಲು ಬಂದಿದ್ದನು. ಇಬ್ಬರೂ ಪರಿಚಯಸ್ಥರೇ ಆಗಿದ್ದು, ಬೇರೆ ಬೇರೆ ವಿಮಾನದಲ್ಲಿ ಪ್ರಯಾಣಕ್ಕೆ ಸಿದ್ದತೆ ಮಾಡಿಕೊಂಡಿದ್ದರು. ಯುವಕ ಕೂತಿದ್ದ ಮುಂಬೈ ವಿಮಾನ ರನ್ ವೇಯಲ್ಲಿ ಟೇಕಾಫ್ಗೆ ಸಿದ್ದವಾಗಿದ್ದವಾಗಿತ್ತು. ಈ ವೇಳೆ ಬೆಂಗಳೂರಿಗೆ ತೆರಳಲು ಏರ್ ಪೋರ್ಟ್ ನಲ್ಲಿ ಕೂತಿದ್ದ ಯುವತಿ ಜೊತೆ ಚಾಟಿಂಗ್ ಮಾಡುತ್ತಿದ್ದನು.
ಈ ವೇಳೆ ಯುವಕ ಯುವತಿ ಮೊಬೈಲ್ ನಲ್ಲಿ ಚಾಟ್ ಮಾಡುತ್ತಿದ್ದುದನ್ನು ಗಮನಿಸಿದ ಓರ್ವ ಪ್ರಯಾಣಿಕ ಸಂಶಯಗೊಂಡು ವಿಮಾನ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಈ ಕುರಿತು ಮುಂಬೈ ವಿಮಾನ ಸಂಚಾರವನ್ನು ಮೊಟಕುಗೊಳಿಸಿ ಪ್ರಯಾಣಿಕರನ್ನು ಇಳಿಸಿ ವಿಮಾನವನ್ನು ತೀವ್ರ ತಪಾಸಣೆಗೆ ಒಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಚಾಟಿಂಗ್ನಲ್ಲಿ ಭದ್ರತೆಗೆ ಅಪಾಯವೊಡ್ಡುವ ವಿಚಾರಗಳ ಉಲ್ಲೇಖ ಮಾಡಲಾಗಿದೆ. ಭದ್ರತಾ ಸಿಬ್ಬಂದಿ ಸದ್ಯ ಯುವಕ ಮತ್ತು ಯುವತಿ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದು, ವಿಚಾರಣೆ ವೇಳೆ ತಮಾಷೆಗಾಗಿ ಮಾಡಿದ್ದಾಗಿ ಜೋಡಿ ಹೇಳಿಕೆ ನೀಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.