ಸಹಾಯಕ ಪ್ರಾಧ್ಯಾಪಕರ ಹುದ್ದೆಯ ನಿರೀಕ್ಷೆಯಲ್ಲಿದ್ದವರಿಗೆ ಉನ್ನತ ಶಿಕ್ಷಣ ಸಚಿವರಿಂದ ಗುಡ್ ನ್ಯೂಸ್!
ಬೆಂಗಳೂರು:ಸಹಾಯಕ ಪ್ರಾಧ್ಯಾಪಕರ ಹುದ್ದೆಯ ನಿರೀಕ್ಷೆಯಲ್ಲಿದ್ದವರಿಗೆ ಶಿಕ್ಷಣ ಸಚಿವರು ಗುಡ್ ನ್ಯೂಸ್ ನೀಡಿದ್ದು, ಶೀಘ್ರವೇ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ ಎಂಬುದಾಗಿ ಉನ್ನತ ಶಿಕ್ಷಣ ಸಚಿವ ಡಾ.ಸಿಎನ್ ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ 1,242 ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ನೇರ ನೇಮಕಾತಿ ಮೂಲಕ ಭರ್ತಿಗೆ ಅರ್ಜಿ ಆಹ್ವಾನಿಸಿ, ಸ್ಪರ್ಧಾತ್ಮಕ ಪರೀಕ್ಷೆ ಕೂಡ ನಡೆಸಿತ್ತು. ಈ ಬಳಿಕ ಅಂತಿಮ ಕೀ ಉತ್ತರ, ತಾತ್ಕಾಲಿಕ ಅಂಕಪಟ್ಟಿಯನ್ನು ಪ್ರಕಟಿಸಲಾಗಿತ್ತು.ಶೀಘ್ರವೇ ಆಯ್ಕೆ ಪಟ್ಟಿಯನ್ನು ಬಿಡುಗಡೆ ಮಾಡುವುದಾಗಿಯೂ ಹೇಳಿದ್ದಾರೆ.
ಈ ಕುರಿತಂತೆ ಸಹಾಯಕ ಪ್ರಾಧ್ಯಾಪಕರ ಹುದ್ದೆಯ ನಿರೀಕ್ಷೆಯಲ್ಲಿದ್ದಂತ ವಿವಿಧ ಅಭ್ಯರ್ಥಿಗಳು ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಅವರನ್ನು ಭೇಟಿ ಮಾಡಿ, ಮನವಿ ಮಾಡಿದ್ದರು. ಈ ವೇಳೆಯಲ್ಲಿ ಮಾರ್ಚ್ ತಿಂಗಳಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ರಾಜ್ಯದ ಪ್ರಥಮ ದರ್ಜೆ ಕಾಲೇಜುಗಳ 1242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ನೇಮಕಾತಿ ನಡೆಸುವ ಸಲುವಾಗಿ ರಾಜ್ಯದ ವಿವಿಧ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಿತ್ತು. ಈ ಪರೀಕ್ಷೆಯ ಅಂತಿಮ ಕೀ ಉತ್ತರಗಳು ಮತ್ತು ತಾತ್ಕಾಲಿಕ ಅಂಕ ಪಟ್ಟಿಯನ್ನು ಕೆಇಎ ಕಳೆದ ಜುಲೈ 8 ರಂದು ಬಿಡುಗಡೆ ಮಾಡಿತ್ತು. ಇದಾಗಿ ಒಂದು ತಿಂಗಳು ಕಳೆದರೂ ದಾಖಲೆ ಪರಿಶೀಲನೆಗಾಗಿ ಆಯ್ಕೆ ಪಟ್ಟಿ ಬಿಡುಗಡೆ ಮಾಡದೇ ಇರುವುದರಿಂದ ಆತಂಕದಲ್ಲಿದ್ದೇವೆ ಎಂಬುದಾಗಿ ತಮ್ಮ ಅಳಲನ್ನು ತೋಡಿಕೊಂಡಿದ್ದರು.
ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ವರ್ಷಾಚರಣೆಯ ಸುಸಂದರ್ಭದಲ್ಲೇ ನೇಮಕಾತಿ ಪ್ರಕ್ರಿಯೆಯನ್ನು ಪೂರೈಸಿ ನೂತನ ಶಿಕ್ಷಣ ನೀತಿಯ ಯಶಸ್ಸಿಗೆ ಶಕ್ತಿ ತುಂಬಬೇಕು ಎಂದು ವಿನಂತಿಸಿಕೊಂಡರು. ಇದಕ್ಕೆ ಪೂರಕವಾಗಿ ಸ್ಪಂದಿಸಿದ ಉನ್ನತ ಶಿಕ್ಷಣ ಸಚಿವರು, ಸಹಾಯಕ ಪ್ರಾಧ್ಯಾಪಕರ ಹುದ್ದೆಯ ನಿರೀಕ್ಷೆಯಲ್ಲಿದ್ದವರಿಗೆ ಶೀಘ್ರವೇ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ ಎಂಬುದಾಗಿ ಭರವಸೆ ನೀಡಿದ್ದಾರೆ.
ಪರೀಕ್ಷಾ ಕ್ರಮದ ಬಗ್ಗೆ ತನಿಖೆ ನಡೆಸಿರುವ ಸಿಸಿಬಿ ಸಂಸ್ಥೆಯು ಭೂಗೋಳಶಾಸ್ತ್ರದ 4 ಅಭ್ಯರ್ಥಿಗಳ ಹೊರತಾಗಿ ಬೇರೆ ಯಾವುದೇ ಅಭ್ಯರ್ಥಿಗಳು ಅಕ್ರಮದಲ್ಲಿ ಭಾಗಿಯಾಗಿರುವ ಸಾಕ್ಷ್ಯ ಇಲ್ಲ ಎಂದು ಚಾರ್ಜ್ ಶೀಟ್ ಸಲ್ಲಿಸಿರುವುದು ಕೆಇಎಯ ದಕ್ಷತೆ ಮತ್ತು ಪಾರದರ್ಶಕತೆಗೆ ಸಾಕ್ಷಿಯಾಗಿದೆ ಎಂದು ಅಭ್ಯರ್ಥಿಗಳು ಅಭಿಪ್ರಾಯಪಟ್ಟರು.