Beauty tips: ನಿಮ್ಮ ತುಟಿಯ ಅಂದ ಹೆಚ್ಚಿಸಲು ಈ ಸಲಹೆಗಳು ಉತ್ತಮ..!
ಹೆಣ್ಮಕ್ಕಳು ಸೌಂದರ್ಯ ಪ್ರಿಯರು. ಹಾಗೆನೇ ನಮ್ಮ ಮುಖದಲ್ಲಿ ತುಟಿಗಳ ಪಾತ್ರ ದೊಡ್ಡದು. ತುಟಿಯು ನಮ್ಮ ಮುಖದ ಅತ್ಯಂತ ಸೂಕ್ಷ್ಮ ಭಾಗವಾಗಿದೆ. ಅಲ್ಲದೇ ತುಟಿಗಳು ನಿಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಅದರ ಆರೈಕೆ ಮಾಡುವುದು ಅಗತ್ಯ.
ಲಿಪ್ ಸ್ಟಿಕ್ ಹಚ್ಚುವುದರಿಂದ ತುಟಿಗಳು ಕಪ್ಪಾಗುತ್ತದೆ. ಸುಂದರವಾಗಿ ಕಾಣುವುದಿಲ್ಲ. ಲಿಪ್ ಸ್ಟಿಕ್ ಅತಿಯಾಗಿ ಬಳಸಿದರೆ ತುಟಿಗಳ ಬಣ್ಣ ಕಪ್ಪಾಗುತ್ತದೆ. ಇದರ ಜೊತೆಗೆ ನಮ್ಮ ಜೀವನಶೈಲಿಯ ಕೆಲ ಅಭ್ಯಾಸಗಳು, ಅಷ್ಟು ಮಾತ್ರವಲ್ಲದೇ ಧೂಮಪಾನ, ಔಷಧಿಗಳ ಅಡ್ಡಪರಿಣಾಮಗಳು, ಅಲರ್ಜಿಗಳು, ಶೀತ, ವಿಟಮಿನ್ ಕೊರತೆ, ಕಡಿಮೆ ರಕ್ತದಲ್ಲಿನ ಸಕ್ಕರೆ ಮಟ್ಟ ಇತ್ಯಾದಿಗಳಂತಹ ಇತರ ಕಾರಣಗಳಿಂದ ಈ ಸಮಸ್ಯೆ ಉದ್ಭವಿಸಬಹುದು.
ನೈಸರ್ಗಿಕವಾಗಿ ಕೆಂಪು ತುಟಿಗಳನ್ನು ಪಡೆಯಲು ಏನು ಮಾಡಬೇಕು ಎನ್ನುವ ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ.
ಮಲಗುವ ಮುನ್ನ ತುಟಿಗಳಿಗೆ ಕೆನೆ ಹಚ್ಚುವುದರಿಂದ ತುಟಿಗಳ ಬಣ್ಣದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ ಎನ್ನುತ್ತಾರೆ ಬ್ಯೂಟಿಷಿಯನ್ ಗಳು. ಇವು ತುಟಿಗಳನ್ನು ಗುಲಾಬಿ ಮತ್ತು ಮೃದುವಾಗಿಸುತ್ತದೆ
ದೇಹ ಮತ್ತು ಚರ್ಮಕ್ಕೆ ಪೋಷಣೆಯ ಅಗತ್ಯವಿರುವಂತೆ ತುಟಿಗಳಿಗೂ ಪೋಷಣೆಯ ಅಗತ್ಯವಿದೆ. ಇದಕ್ಕಾಗಿ ರಾತ್ರಿ ಮಲಗುವ ಮುನ್ನ ಅಲೋವೆರಾ ಜೆಲ್‌ನ್ನು ತುಟಿಗಳಿಗೆ ಹಚ್ಚಿ ಮಸಾಜ್ ಮಾಡಿ. ನಂತರ ಉತ್ತಮ ಗುಣಮಟ್ಟದ ಮಾಯಿಶ್ಚರೈಸಿಂಗ್ ಕ್ರೀಮ್ ಅನ್ನು ಅನ್ವಯಿಸಿ ಇದನ್ನು ನಿಯಮಿತವಾಗಿ ಮಾಡುವುದರಿಂದ ತುಟಿಗಳು ಆರೋಗ್ಯಕರವಾಗಿರುತ್ತವೆ.
ಕಪ್ಪಗಿರುವ ತುಟಿ ಕೆಂಪಾಗಲು ಬೀಟ್‌ರೂಟ್ ರಸವನ್ನು ದಿನದಲ್ಲಿ 4-5 ಬಾರಿ ನಿಮ್ಮ ತುಟಿಗಳಿಗೆ ಹಚ್ಚಬೇಕು ಹೀಗೆ ಮಾಡಿದರೆ ಕ್ರಮೇಣ ತುಟಿಯ ಬಣ್ಣ ಬದಲಾಗುತ್ತದೆ.
ನೀರಿನ ಸೇವನೆ: ಪ್ರತಿದಿನ ಕನಿಷ್ಠ 8 ರಿಂದ 10 ಲೋಟ ನೀರು ಕುಡಿಯಬೇಕು. ಇದರಿಂದ ತುಟಿಗಳಿಗೆ ಉತ್ತಮ ಆರೈಕೆ ದೊರೆಯುತ್ತದೆ. ಅಲ್ಲದೇ ತುಟಿಯ ಬಣ್ಣ ಕೆಂಪಾಗಿ ತುಟಿಯ ಅಂದವನ್ನು ಹೆಚ್ಚಿಸುತ್ತದೆ.
ಲಿಪ್ ಸ್ಕ್ರಬ್: ಜೇನುತುಪ್ಪ ಮತ್ತು ಬಾದಾಮಿ ಎಣ್ಣೆಯನ್ನು ಸಮಪ್ರಮಾಣದಲ್ಲಿ ಬೆರೆಸಿ ಅದಕ್ಕೆ ಸ್ವಲ್ಪ ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, ಈ ಮಿಶ್ರಣವನ್ನು ತುಟಿಗಳಿಗೆ ಹಚ್ಚಿ ನಿಧಾನವಾಗಿ ಸ್ಕ್ರಬ್ ಮಾಡಿ. ಹೀಗೆ ಮಾಡುವುದರಿಂದ ತುಟಿಗಳು ಮೃದುವಾಗುತ್ತವೆ ಮತ್ತು ಕ್ರಮೇಣ ತಿಳಿ ಗುಲಾಬಿ ಬಣ್ಣಕ್ಕೆ ತಿರುಗುತ್ತವೆ. ಇವು ತುಟಿಗಳ ಮೇಲಿನ ಸತ್ತ ಚರ್ಮವನ್ನು ತೆಗೆದುಹಾಕಲು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
ಕೊಬ್ಬರಿ ಎಣ್ಣೆ: ಕೊಬ್ಬರಿ ಎಣ್ಣೆಯು ತುಟಿಯು ಶುಷ್ಕವಾಗದಂತೆ ಮತ್ತು ಕಪ್ಪು ಬಣ್ಣಕ್ಕೆ ತಿರುಗದಂತೆ ತಡೆಯುತ್ತದೆ. ಸ್ವಲ್ಪ ಕೊಬ್ಬರಿ ಎಣ್ಣೆ ನಿಮ್ಮ ತುಟಿಗಳಿಗೆ ಹಚ್ಚಿ, ಒಣಗಲು ಬಿಡಿ. ಪ್ರತಿದಿನ 1-2 ಬಾರಿ ಹೀಗೆ ಮಾಡಬಹುದು.
ಅಲೋವೆರಾದಲ್ಲಿ ಅಲೋಯಿನ್ ಇದೆ. ಅಲೋವೆರಾ ಜೆಲ್ ಅನ್ನು ಅರ್ಧ ಟೀ ಚಮಚ ತೆಗೆದುಕೊಂಡು ನಿಮ್ಮ ತುಟಿಗಳಿಗೆ ಹಚ್ಚಿ, ನೀರಿನಿಂದ ತೊಳೆಯಿರಿ. ಇದನ್ನು ಪ್ರತಿದಿನ 1-2 ಬಾರಿ ಮಾಡಬಹುದು.
ಅರಿಶಿನ: ಅರಿಶಿನದಲ್ಲಿರುವ ಕರ್ಕ್ಯುಮಿನ್ ಕಪ್ಪು ಬಣ್ಣದ ತುಟಿಯನ್ನು ಕೆಂಬಣ್ಣಕ್ಕೆ ತಿರುಗಿಸುತ್ತದೆ. ಒಂದು ಟೀ ಚಮಚ ಅರಿಶಿನ ಪುಡಿಯನ್ನು ಸ್ವಲ್ಪ ನೀರಿನಲ್ಲಿ ಬೆರೆಸಿ ದಪ್ಪ ಪೇಸ್ಟ್ ತಯಾರಿಸಿ. ಈ ಪೇಸ್ಟ್ ಅನ್ನು ನಿಮ್ಮ ತುಟಿಗಳಿಗೆ ಹಚ್ಚಿ ಒಣಗಲು ಬಿಡಿ. ನೀರಿನಿಂದ ತೊಳೆಯಿರಿ. ಪ್ರತಿದಿನ ಒಮ್ಮೆ ಹೀಗೆ ಮಾಡಿ.