ವೈದ್ಯಕೀಯ ಇಂಜಿನಿಯರಿಂಗ್ ಪ್ರವೇಶಾತಿಗೆ ಒಂದೇ ಪರೀಕ್ಷೆ!

ನವದೆಹಲಿ: ವೈದ್ಯಕೀಯ ಶಿಕ್ಷಣಕ್ಕೆ ನೀಟ್​ ಮತ್ತು ಇಂಜಿನಿಯರಿಂಗ್​ಗೆ ಸೇರಲು ನಡೆಸಲಾಗುವ ಜೆಇಇ ಮೇನ್​ ಪರೀಕ್ಷೆ ಗಳನ್ನು ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ (ಸಿಯುಇಟಿ) ಜತೆ ವಿಲೀನಗೊಳಿಸುವ ಪ್ರಸ್ತಾಪದ ಬಗ್ಗೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಪರಿಶೀಲನೆ ನಡೆಸುತ್ತಿದೆ.

 

ಈ ಮೂಲಕ ವಿವಿಧ ಪದವಿ ಕೋರ್ಸ್​ಗಳಿಗೆ ಒಂದೇ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸುವ ಉದ್ದೇಶ ಹೊಂದಿದೆ ಎಂದು ಯುಜಿಸಿ ಅಧ್ಯಕ್ಷ ಎಂ. ಜಗದೀಶ ಕುಮಾರ್​ ತಿಳಿಸಿದ್ದಾರೆ.

ಈ ವರ್ಷ ಪ್ರಾರಂಭಿಸಲಾಗಿರುವ ಸಿಯುಇಟಿಗೆ 10 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ವಿದ್ಯಾರ್ಥಿಗಳಿಗೆ ಒತ್ತಡ ಕಡಿಮೆ ಮಾಡುವ ದೃಷ್ಟಿಯಿಂದ ಈ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಸಾಮಾನ್ಯವಾಗಿ ಪದವಿಗಾಗಿ ವಿದ್ಯಾರ್ಥಿಗಳು ಮೂರಲ್ಲದಿದ್ದರೂ ಸರಾಸರಿ ಎರಡು ಪ್ರವೇಶ ಪರೀಕ್ಷೆ ಗಳಿಗೆ ಹಾಜರಾಗುತ್ತಿದ್ದಾರೆ. ಮೂರು ವಿಭಿನ್ನ ಪ್ರವೇಶ ಪರೀಕ್ಷೆ ಗಳಲ್ಲಿ ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯಗಳಿರುತ್ತವೆ. ನೀಟ್​ ಹಾಗೂ ಜೆಇಇಯಲ್ಲಿ ಕನಿಷ್ಠ ಎರಡು ವಿಷಯಗಳ ಪ್ರಶ್ನೆಗೆ ಸಾಮಾನ್ಯವಾಗಿ ಉತ್ತರಿಸುತ್ತಾರೆ. ಹೀಗಾಗಿ ಈ ನಾಲ್ಕು ವಿಷಯಗಳನ್ನು ಒಂದೇ ಪ್ರವೇಶ ಪರೀಕ್ಷೆ ಯಲ್ಲಿ ಅಳವಡಿಸಿದರೆ ಒಂದೇ ಪ್ರವೇಶ ಪರೀಕ್ಷೆ ಸಾಕಾಗುತ್ತದೆ ಎನ್ನುವುದು ಇದರ ಹಿಂದಿನ ಚಿಂತನೆಯಾಗಿದೆ ಎಂದು ಜಗದೀಶ್​ ಕುಮಾರ್​ ಹೇಳಿದ್ದಾರೆ. ಈ ಮೂರು ಪರೀಕ್ಷೆ ಗಳನ್ನು ನ್ಯಾಷನಲ್​ ಟೆಸ್ಟಿಂಗ್​ ಏಜೆನ್ಸಿ (ಎನ್​ಟಿಎ) ಮೂಲಕವೇ ನಡೆಸಲಾಗುತ್ತದೆ.

ಪ್ರಸ್ತುತ ವಿದ್ಯಾರ್ಥಿಗಳು ವೈದ್ಯಕಿಯ ಮತ್ತು ದಂತ ಶಿಕ್ಷಣಕ್ಕಾಗಿ ನೀಟ್​, ಇಂಜಿನಿಯರಿಂಗ್​ ಕೋರ್ಸ್​ಗಳ ಪ್ರವೇಶಕ್ಕೆ ಜೆಇಇ ಮತ್ತು ವಿವಿಧ ವಿಶ್ವವಿದ್ಯಾಲಯಗಳಲ್ಲಿ ವಿಜ್ಞಾನ, ಮಾನವಿಕ ಮತ್ತು ವಾಣಿಜ್ಯ ಪದವಿ ಕೋರ್ಸ್​ಗಳ ಪ್ರವೇಶಕ್ಕೆ ಸಿಯುಇಟಿಗೆ ಹಾಜರಾಗಬೇಕಿದೆ. ಒಂದು ವೇಳೆ ಮೂರೂ ಪ್ರವೇಶ ಪರೀಕ್ಷೆ ಗಳನ್ನು ವಿಲೀನಗೊಳಿಸಿದರೆ ವಿದ್ಯಾರ್ಥಿಗಳು ಒಂದೇ ಪರೀಕ್ಷೆ ಗೆ ಹಾಜರಾಗಬೇಕಾಗುತ್ತದೆ. ಈ ರಾಷ್ಟ್ರೀಯ ಮಟ್ಟದ ಪರೀಕ್ಷೆ ಯಲ್ಲಿ ವಿದ್ಯಾರ್ಥಿಗಳು ಗಳಿಸಿದ ಅಂಕಗಳ ಆಧಾರದ ಮೇಲೆ ಕೋರ್ಸ್​ಗಳ ಹಂಚಿಕೆ ಮಾಡಬಹುದಾಗಿದೆ. ಅಂದರೆ ಇಂಜಿನಿಯರಿಂಗ್​ಗೆ ಹೋಗಬಯಸುವ ವಿದ್ಯಾರ್ಥಿಗಳಿಗೆ ಗಣಿತ, ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರದಲ್ಲಿ ಪಡೆದ ಅಂಕಗಳನ್ನು ಪರಿಗಣಿಸಿ ರ್ಯಾಂಕಿಂಗ್​ ನೀಡಬಹುದು. ಇನ್ನೆರಡು ವಿಷಯದೊಂದಿಗೆ ಜೀವಶಾಸ್ತ್ರದ ಅಂಕ ಆಧರಿಸಿ ವೈದ್ಯಕಿಯ ಶಿಕ್ಷಣ ಪ್ರವೇಶಕ್ಕೆ ಶ್ರೇಯಾಂಕ ನಿಗದಿಪಡಿಸಬಹುದು ಎಂದು ಜಗದೀಶ್​ ತಿಳಿಸಿದ್ದಾರೆ.

ಈ ಪ್ರಸ್ತಾವನೆಗೆ ಒಮ್ಮತ ಏರ್ಪಟ್ಟರೆ ಆನ್​ಲೈನ್​ ಮೂಲಕ ಕಂಪ್ಯೂಟರ್​ ಆಧಾರಿತ ಪರೀಕ್ಷೆ (ಸಿಬಿಟಿ) ಸ್ವರೂಪದಲ್ಲಿ ವಿದ್ಯಾರ್ಥಿಗಳು ಮೇ&ಜೂನ್​ನಲ್ಲಿ ಒಂದು ಬಾರಿ ಹಾಗೂ ಡಿಸೆಂಬರ್​ನಲ್ಲಿ ಇನ್ನೊಂದು ಬಾರಿ ಪರೀಕ್ಷೆ ಬರೆಯಬಹುದಾಗಿದೆ.

Leave A Reply

Your email address will not be published.