ಇನ್ನು ಮುಂದೆ ಬೆಂಗಳೂರಿನ ರಸ್ತೆಗಳಲ್ಲಿ ಓಡಾಡಲಿದೆ ವಿದ್ಯುತ್ ಚಾಲಿತ ಬಸ್ ಗಳು
ಭಾರತ ದೇಶ ಇಂದು ಟೆಕ್ನಾಲಜಿಯ ಬಳಕೆಯಿಂದಾಗಿ ಬಹಳ ಮುಂದುವರಿದಿದೆ. ಆಧುನಿಕತೆಯ ಭರಾಟೆಯಲ್ಲಿ ದೇಶದ ಪ್ರಮುಖ ನಗರಗಳು ಬಾನೆತ್ತರಕ್ಕೆ ಬೆಳೆಯುತ್ತಿದೆ. ಜೊತೆಗೆ ಪೆಟ್ರೋಲ್, ಡೀಸೆಲ್ ಗಳ ಮತ್ತೀತರ ವಸ್ತುಗಳ ಬೆಲೆಯು ಗಗನಕ್ಕೇರಿದೆ. ಇದೀಗ ಸ್ಮಾರ್ಟ್ ಸಿಟಿ ಎಂದೇ ಪ್ರಸಿದ್ಧವಾಗಿರುವ ಬೆಂಗಳೂರು ಮಹಾನಗರ ಪಾಲಿಕೆ ಮಹತ್ತರವಾದ ಹೆಜ್ಜೆಯೊಂದನ್ನು ಮುಂದಿಟ್ಟಿದೆ.
ಹೌದು, ಪೆಟ್ರೋಲ್ ಡೀಸೆಲ್ ಬೆಲೆಯ ಏರಿಕೆಯಿಂದಾಗಿ ನಷ್ಟದ ಸುಳಿಯಲ್ಲಿ ಸಿಲುಕಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಹೊಸದೊಂದು ಪ್ರಯೋಗಕ್ಕೆ ಮುಂದಾಗಿದೆ.
ಬೆಂಗಳೂರಿನ ಜೀವ ನಾಡಿ ಬಿಎಂಟಿಸಿ ಕೇಂದ್ರ ಸರ್ಕಾರದ FAME-2 ಯೋಜನೆಗಳ ಅಡಿಯಲ್ಲಿ ಹೆಚ್ಚಿನ ಎಲೆಕ್ಟ್ರಿಕ್ ಬಸ್‌ಗಳನ್ನು ಓಡಿಸಲು ಸಿದ್ಧವಾಗಿದೆ. 300 ಇ-ಬಸ್‌ಗಳಲ್ಲಿ 75 ಬಸ್ಸುಗಳು ಆಗಸ್ಟ್ 14 ರಿಂದ ರಸ್ತೆಗಿಳಿಯಲಿದ್ದು, 40 ಕ್ಕಿಂತ ಹೆಚ್ಚು ಆಸನ ಸಾಮರ್ಥ್ಯದ ನಾನ್-ಎಸಿ 12 ಮೀಟರ್ ಬಸ್ , ವೀಲ್ ಚೇರ್‌ನಲ್ಲಿ ಪ್ರಯಾಣಿಸುವವರಿಗೆ ಅನುಕೂಲವಾಗುವಂತೆ ಲಿಫ್ಟಿಂಗ್ ಸೌಲಭ್ಯದೊಂದಿಗೆ ವೀಲ್‌ಚೇರ್ ರಾಂಪ್ ಅನ್ನು ಈ ಬಸ್ ಹೊಂದಿದೆ. ಬಿಎಂಟಿಸಿ ಈ ಬಸ್ಸುಗಳನ್ನು ನಗರ ವ್ಯಾಪ್ತಿಯ ದೀರ್ಘ ಮಾರ್ಗಗಳಲ್ಲಿ ಓಡಿಸಲು ನಿರ್ಧರಿಸಿದೆ.
ಯಲಹಂಕ ಡಿಪೋದಿಂದ 75 ಬಸ್‌ಗಳು ಸಂಚರಿಸಲಿದ್ದು,
ಇವುಗಳಿಗೆ ಈಗಾಗಲೇ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ ಎಂದು ಬಿಎಂಟಿಸಿ ನಿರ್ದೇಶಕ (ಐಟಿ) ಸೂರ್ಯ ಸೇನ್ ಎ.ವಿ. ತಿಳಿಸಿ, “ನಿಗಮವು ಗಾಲಿಕುರ್ಚಿ ಸೌಲಭ್ಯವಿರುವ ಬಸ್‌ಗಳನ್ನು ಪರಿಚಯಿಸುತ್ತಿರುವುದು ಇದೇ ಮೊದಲು. ಯಲಹಂಕದಿಂದ ಮೆಜೆಸ್ಟಿಕ್, ಯಲಹಂಕದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ಮತ್ತು ಇತರ ಮಾರ್ಗಗಳಿಗೆ ಬಸ್‌ಗಳನ್ನು ಓಡಿಸಲು ನಾವು ಯೋಜಿಸಿದ್ದೇವೆ.
ನಾವು ಈಗಾಗಲೇ 100 ಬಸ್‌ಗಳನ್ನು ಸ್ವೀಕರಿಸಿದ್ದೇವೆ ಮತ್ತು ಉಳಿದವುಗಳನ್ನು ಹಂತಹಂತವಾಗಿ ಪರಿಚಯಿಸಲಾಗುವುದು ಎಂದು ಹೇಳಿದರು.
BMTC ಪ್ರಸ್ತುತ ಸ್ಮಾರ್ಟ್ ಸಿಟಿ ಯೋಜನೆಯಡಿ ಒಂಬತ್ತು ಮೀಟರ್ ಇ-ಬಸ್‌ಗಳನ್ನು ಓಡಿಸುತ್ತಿದೆ. ಮೂರು ಡಿಪೋಗಳಿಂದ ಒಟ್ಟು 90 ಬಸ್‌ಗಳು ಕಾರ್ಯನಿರ್ವಹಿಸುತ್ತಿವೆ. ನೌಕರರ ಕಲ್ಯಾಣ ಕ್ರಮಕ್ಕಾಗಿ ಅಪಘಾತ ಮುಕ್ತ ಚಾಲಕರಿಗೆ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ನೀಡಿ ಗೌರವಿಸಲು ನಿಗಮ ನಿರ್ಧರಿಸಿದೆ. ಒಟ್ಟು 168 ಚಾಲಕರಿಗೆ ಚಿನ್ನದ ಪದಕ ಮತ್ತು 2,968 ಬೆಳ್ಳಿ ಪದಕಗಳನ್ನು ನೀಡಲಾಗುತ್ತದೆ. ಬಿಎಂಟಿಸಿ ಸುದೀರ್ಘ ಅವಧಿಯ ನಂತರ ಪದಕಗಳನ್ನು ನೀಡುತ್ತಿದೆ.