“ಪಡಿತರ ಚೀಟಿ” ವಿತರಣೆಗೆ ಸರಕಾರದಿಂದ ‘ ಹೊಸ ನೋಂದಣಿ ಸೌಲಭ್ಯ’ ಪ್ರಾರಂಭ !!!

ಪಡಿತರ ಚೀಟಿಗಳನ್ನು ವಿತರಿಸಲು ಕೇಂದ್ರ ಸರ್ಕಾರ ಶುಕ್ರವಾರ ಸಾಮಾನ್ಯ ನೋಂದಣಿ ಸೌಲಭ್ಯವನ್ನು ಪ್ರಾರಂಭ ಮಾಡಿದೆ. 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವಸತಿರಹಿತರು, ನಿರ್ಗತಿಕರು, ವಲಸಿಗರು ಮತ್ತು ಇತರ ಅರ್ಹ ಫಲಾನುಭವಿಗಳಿಗೆ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವುದು ಈ ನೋಂದಣಿಯ ಮುಖ್ಯ ಉದ್ದೇಶವಾಗಿದೆ.

 

‘ಸಾಮಾನ್ಯ ನೋಂದಣಿ ಸೌಲಭ್ಯ’ (ನನ್ನ ಪಡಿತರ-ನನ್ನ ಹಕ್ಕು) ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಅರ್ಹ ಫಲಾನುಭವಿಗಳನ್ನು ಶೀಘ್ರವಾಗಿ ಗುರುತಿಸುವ ಗುರಿಯನ್ನ ಹೊಂದಿದೆ. ಎನ್ಎಎಫ್‌ಎಸ್ಎ ಅಡಿಯಲ್ಲಿ ಅರ್ಹತೆಯ ಪ್ರಯೋಜನಗಳನ್ನು ಪಡೆಯಲು ಪಡಿತರ ಚೀಟಿಗಳನ್ನು ವಿತರಿಸಲು ಅಂತಹ ಜನರಿಗೆ ಸಹಾಯ ಮಾಡುವುದಾಗಿದೆ. ಆರಂಭದಲ್ಲಿ ಹೊಸ ವೆಬ್ ಆಧಾರಿತ ಸೌಲಭ್ಯವು ಪ್ರಾಯೋಗಿಕವಾಗಿ 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಭ್ಯವಿರುತ್ತದೆ ಎಂದು ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ ಹೇಳಿದ್ದಾರೆ.

ಈ ತಿಂಗಳ ಅಂತ್ಯದ ವೇಳೆಗೆ, ಎಲ್ಲಾ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕಾರ್ಯಾರಂಭ ಮಾಡಲಿವೆ. ಈ 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಸ್ಸಾಂ, ಗೋವಾ, ಲಕ್ಷದ್ವೀಪ, ಮಹಾರಾಷ್ಟ್ರ, ಮೇಘಾಲಯ, ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್, ತ್ರಿಪುರಾ, ಪಂಜಾಬ್ ಮತ್ತು ಉತ್ತರಾಖಂಡ್ ಸೇರಿವೆ.

‘ಒಂದು ರಾಷ್ಟ್ರ-ಒಂದು ಪಡಿತರ ಚೀಟಿ’ ಯೋಜನೆಯ ಯಶಸ್ಸಿನ ನಂತರ, ನನ್ನ ಪಡಿತರ-ನನ್ನ ಹಕ್ಕನ್ನು ಪ್ರಾರಂಭಿಸಲಾಗಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (NFSA) ಅಡಿಯಲ್ಲಿ, ದೇಶದ ಜನಸಂಖ್ಯೆಯ ಶೇಕಡಾ 67ರಷ್ಟು ಜನರಿಗೆ ರಿಯಾಯಿತಿ ದರದಲ್ಲಿ ಆಹಾರ ಧಾನ್ಯಗಳನ್ನ ಒದಗಿಸಲಾಗುತ್ತದೆ.

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (NFSA) ಸುಮಾರು 81.35 ಕೋಟಿ ಜನರಿಗೆ ಗರಿಷ್ಠ ವ್ಯಾಪ್ತಿಯನ್ನು ಒದಗಿಸುತ್ತದೆ. ಪ್ರಸ್ತುತ, ಈ ಕಾಯ್ದೆಯಡಿ ಸುಮಾರು 79.77 ಕೋಟಿ ಜನರಿಗೆ ಹೆಚ್ಚಿನ ಸಬ್ಸಿಡಿ ಆಧಾರದ ಮೇಲೆ ಆಹಾರ ಧಾನ್ಯಗಳನ್ನ ನೀಡಲಾಗುತ್ತಿದೆ. ಇದರ ಪ್ರಕಾರ, 1.58 ಕೋಟಿ ಹೆಚ್ಚು ಫಲಾನುಭವಿಗಳನ್ನು ಸೇರಿಸಬಹುದು.

Leave A Reply

Your email address will not be published.