ರಾಷ್ಟ್ರೀಯ ಹೆದ್ದಾರಿ ಕುಸಿತ ಭೀತಿ ; ಘನ ವಾಹನಗಳ ಸಂಚಾರ ಬಂದ್
ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಅನೇಕ ಪ್ರಾಣಹಾನಿ, ಮನೆ ಹಾನಿ ಸಂಭವಿಸುತ್ತಲೇ ಇದೆ.ಇದರ ನಡುವೆ ಹೆದ್ದಾರಿಗಳಲ್ಲೂ ಅಪಾಯ ಕಾಣುತ್ತಿದ್ದು, ಪ್ರಯಾಣ ಮಾಡಲು ಭಯಪಡುವಂತಾಗಿದೆ. ಇದೀಗ ದೇವರಕೊಲ್ಲಿ, ಕೊಯನಾಡಿನಲ್ಲಿ ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಕುಸಿತದ ಭೀತಿ ಎದುರಾಗಿದ್ದು, ಈ ಭಾಗದಲ್ಲಿ ಘನ ವಾಹನಗಳ ಸಂಚಾರವನ್ನು ಕೊಡಗು ಜಿಲ್ಲಾಡಳಿತ ಸಂಪೂರ್ಣವಾಗಿ ತಡೆ ಹಿಡಿದಿದೆ.
ರಾಷ್ಟೀಯ ಹೆದ್ದಾರಿಯಲ್ಲಿ ಕುಸಿತ ಭೀತಿಯ ಹಿನ್ನೆಲೆಯಲ್ಲಿ ಸಂಪಾಜೆ ಗೇಟ್ ನಲ್ಲಿ ಕಿ.ಮೀ ಗಟ್ಟಲೆ ಲಾರಿಗಳು ನಿಂತಿವೆ. ತಡರಾತ್ರಿಯಿಂದಲೇ ವಾಹನಗಳನ್ನು ತಡೆ ಹಿಡಿಯಲಾಗಿದೆ ಎಂದು ತಿಳಿದು ಬಂದಿದೆ.
ಕೊಡಗಿನ ಕೊಯನಾಡಿನ ಇತಿಹಾಸ ಪ್ರಸಿದ್ಧ ಗಣಪತಿ ದೇವಸ್ಥಾನದ ಬಳಿಯ ಸೇತುವೆಯ ಸಮೀಪ ರಸ್ತೆ ಕುಸಿಯುತ್ತಿದೆ. ರಾಷ್ಟ್ರೀಯ ಹೆದ್ದಾರಿಯ ರಸ್ತೆಗೆ ಅಳವಡಿಸಿದ ಡಾಮರು ಸ್ವಲ್ಪ ಸ್ವಲ್ಪವೇ ಜರಿದು ಪಯಸ್ವಿನಿ ನದಿಯನ್ನು ಸೇರುತ್ತಿದೆ. ಇದರಿಂದ ಆತಂಕದ ಸ್ಥಿತಿ ನಿರ್ಮಾಣವಾಗಿದೆ.
ಘನ ವಾಹನ ಸಂಚರಿಸಿದಲ್ಲಿ ಇದು ಕುಸಿಯುವ ಭೀತಿ ಇರುವುದರಿಂದ ಪ್ರವೇಶ ನಿಷೇಧಿಸಲಾಗಿದೆ. ಕೊಯನಾಡಿನ ಡಿಪೋ ಹಾಗೂ ದೇವರಕೊಲ್ಲಿ ಬಳಿ ರಸ್ತೆಗಳು ಬಿರುಕು ಬಿಟ್ಟುಕೊಂಡಿವೆ. ಹೀಗಾಗಿ ಈ ಭಾಗದ ರಸ್ತೆಗಳಲ್ಲಿ ದೈತ್ಯ ವಾಹನಗಳ ಓಡಾಟಕ್ಕೆ ಬ್ರೇಕ್ ಹಾಕಲಾಗಿದೆ. ರಸ್ತೆಯಲ್ಲಿ ಓಡಾಟ ಪ್ರಾಣಕ್ಕೆ ಹಾನಿ ಎಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲಾಗಿದೆ.