ಕೇರಳದಲ್ಲಿ ಇನ್ನೋರ್ವ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ದೃಢ!
ತಿರುವನಂತಪುರ: ಕೇರಳದಲ್ಲಿ ಮಂಗಳವಾರ ಇನ್ನೊಂದು ಮಂಕಿಪಾಕ್ಸ್ ಪ್ರಕರಣ ದೃಢಪಟ್ಟಿದ್ದು, ಇದರೊಂದಿಗೆ ರಾಜ್ಯದಲ್ಲಿ ಐದನೇ ಪ್ರಕರಣ ವರದಿಯಾದಂತಾಗಿದೆ.
30 ವರ್ಷ ವಯಸ್ಸಿನ ಸೋಂಕಿತ ವ್ಯಕ್ತಿ ಮಲಪ್ಪುರಂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು ಜುಲೈ 27ರಂದು ಯುಎಇಯಿಂದ ಕೋಜಿಕ್ಕೋಡ್ ವಿಮಾನ ನಿಲ್ದಾಣದ ಮೂಲಕ ಬಂದಿದ್ದರು ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಮಾಹಿತಿ ನೀಡಿದ್ದಾರೆ.
ಜುಲೈ 30ರಂದು ಮೃತಪಟ್ಟ ಕೇರಳದ 20 ವರ್ಷದ ಯುವಕನಿಗೆ ಮಂಕಿ ಪಾಕ್ಸ್ ಸೋಂಕು ತಗುಲಿರುವುದು ಮಾದರಿ ಪರೀಕ್ಷೆಯಲ್ಲಿ ದೃಢಪಟ್ಟಿದೆ ಎಂದು ಮೂಲಗಳು ಸೋಮವಾರ ಹೇಳಿದ್ದವು. ಈ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದು ವೀಣಾ ಜಾರ್ಜ್ ಹೇಳಿದ್ದರು. ಈ ಮಧ್ಯೆ, ದೆಹಲಿಯಲ್ಲಿ ನೆಲೆಸಿರುವ ನೈಜಿರಿಯಾದ ಪ್ರಜೆಗೆ ಮಂಕಿಪಾಕ್ಸ್ ಸೋಂಕು ಇರುವುದು ಪರೀಕ್ಷೆಯಲ್ಲಿ ದೃಢಪಟ್ಟಿತ್ತು.
ದೇಶದಲ್ಲಿ ಮಂಕಿಪಾಕ್ಸ್ ಪ್ರಕರಣಗಳ ಹರಡುವಿಕೆ ಹೆಚ್ಚುತ್ತಿರುವ ಕಾರಣ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲು ಮತ್ತು ರೋಗ ಹರಡುವಿಕೆ ನಿಭಾಯಿಸಲು ಕೇಂದ್ರ ಸರ್ಕಾರ ಕಾರ್ಯಪಡೆ ರಚಿಸಿದೆ ಎಂದು ಅಧಿಕೃತ ಮೂಲಗಳು ಸೋಮವಾರ ತಿಳಿಸಿದ್ದವು.
ವಿಶ್ವ ಆರೋಗ್ಯ ಸಂಸ್ಥೆ ಒಟ್ಟು 75 ದೇಶಗಳಿಂದ ಈವರೆಗೆ 75 ಸಾವಿರ ಮಂಕಿಪಾಕ್ಸ್ ಪ್ರಕರಣಗಳು ಪತ್ತೆಯಾಗಿವೆ ಎಂದು ಮಾಹಿತಿ ನೀಡಿದೆ. ಭಾರರತದಲ್ಲೂ ಮಂಕಿಪಾಕ್ಸ್ ಬಗ್ಗೆ ಮುಂಜಾಗೃತಾಕ್ರಮವಾಗಿ ಅಗತ್ಯ ಗೈಡ್ಲೈನ್ಸ್ ಹೊರಡಿಸಲಾಗಿದೆ.