ವಿದ್ಯಾರ್ಥಿಗಳೇ ನಿಮಗೊಂದು ಸಿಹಿ ಸುದ್ದಿ | ಶಾಲಾ ಪಠ್ಯದ ಭಾಗವಾಗಲಿದೆ ಚಿನ್ನಿದಾಂಡು, ಕುಂಟೆಬಿಲ್ಲೆ ಸೇರಿದಂತೆ 75 ಆಟ
ವಿದ್ಯಾರ್ಥಿಗಳು ಇನ್ನು ಮುಂದೆ ಗ್ರಾಮೀಣ ಕ್ರೀಡೆಗಳನ್ನು ಶಾಲೆಯ ಪಠ್ಯದ ಭಾಗವಾಗಿ ಆಡಬಹುದು. ಹೌದು ನಶಿಸಿ ಹೋಗುತ್ತಿರುವ ಗ್ರಾಮೀಣ ಕ್ರೀಡೆಗಳನ್ನು ಪುನಶ್ಚೇತನ ಗೊಳಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ. ಹೀಗಾಗಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಎರಡು ವರ್ಷ ಪೂರೈಸಿದ ಬೆನ್ನಲ್ಲೇ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ಸಾಂಪ್ರದಾಯಿಕ ದೇಶಿ ಕ್ರೀಡೆಗಳಾದ ಚಿನ್ನಿ ದಾಂಡು, ಕುಂಟೆಬಿಲ್ಲೆ, ಗಾಳಿಪಟ ಹಾರಿಸುವುದು, ಗೋಲಿ ಸೇರಿದಂತೆ 75 ಭಾರತೀಯ ಆಟಗಳನ್ನು ಪಠ್ಯದ ಭಾಗವಾಗಿ ಸೇರಿಸಲು ನಿರ್ಧರಿಸಲಾಗಿದೆ. ಮಕ್ಕಳಿಗೆ ಇದೊಂದು ಖುಷಿಯ ವಿಚಾರವೆಂದೇ ಹೇಳಬಹುದು.
ಈ ಕ್ರೀಡೆಗಳು ಬಹುತೇಕ ಗ್ರಾಮೀಣ ಪ್ರದೇಶದ ಭಾಗವಾಗಿತ್ತು, ನಂತರ ಇತರೆ ಕ್ರೀಡೆಗಳಿಗೆ ಹೆಚ್ಚಿನ ಆದ್ಯತೆ ನೀಡಿದ ಹಿನ್ನೆಲೆಯಲ್ಲಿ ಮರೆಯಾಗಿದ್ದವು. ಅಲ್ಲದೆ ಪ್ರತಿಯೊಂದು ಗ್ರಾಮದಲ್ಲೂ ಮುಂಚೆ ಗರಡಿ ಮನೆಗಳಿದ್ದು, ಕಾಲಕ್ರಮೇಣ ಅವುಗಳು ಮುಚ್ಚಿ ಹೋಗಿದ್ದವು. ಈಗ ಸಾಂಪ್ರದಾಯಿಕ ಗ್ರಾಮೀಣ ಕ್ರೀಡೆಗಳಿಗೆ ಆದ್ಯತೆ ಸಿಗುವ ಹಿನ್ನೆಲೆಯಲ್ಲಿ ಗ್ರಾಮಾಂತರ ಪ್ರದೇಶಗಳಿಂದ ಹೆಚ್ಚಿನ ಸಂಖ್ಯೆಯ ಪ್ರತಿಭಾವಂತ ಕ್ರೀಡಾಪಟುಗಳು ಬೆಳಕಿಗೆ ಬರಲಿದ್ದಾರೆ.