ಪ್ರವೀಣ್ ನೆಟ್ಟಾರು ಮನೆಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಭೇಟಿ | 5 ಲಕ್ಷ ಚೆಕ್ ಹಸ್ತಾಂತರ
ಸುಳ್ಯ: ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರ ನಿವಾಸಕ್ಕೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಇಂದು ಭೇಟಿ ನೀಡಿದರು. ಈ ವೇಳೆ ಪ್ರವೀಣ್ ಕುಟುಂಬಕ್ಕೆ ಸಾಂತ್ವನ ಹೇಳಿದ ಮಾಜಿ ಸಿಎಂ ಕುಮಾರಸ್ವಾಮಿ 5 ಲಕ್ಷ ರೂಪಾಯಿಗಳ ಚೆಕ್ ಕುಟುಂಬಸ್ಥರಿಗೆ ಹಸ್ತಾಂತರಿಸಿದರು. ಪ್ರವೀಣ್ ಪತ್ನಿ ಮತ್ತು ಅವರ ತಾಯಿ ಹೆಸರಲ್ಲಿ 5 ಲಕ್ಷ ಚೆಕ್ ನೀಡಿದ್ದಾರೆ.
ಮೃತ ಮಸೂದ್ ಕುಟುಂಬಕ್ಕೂ ಶಾಂತಿ ಸಿಗಬೇಕು.ಆರೋಪಿಗಳನ್ನು ಎನ್ ಕೌಂಟರ್ ಮಾಡಬೇಕು. ಆಗ ನಮಗೆ ನ್ಯಾಯ ಸಿಗುತ್ತದೆ ಎಂದು ಕುಮಾರಸ್ವಾಮಿ ಬಳಿ ಪ್ರವೀಣ್ ಪತ್ನಿ ನೂತನ ನೋವು ತೋಡಿಕೊಂಡರು.
ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ವಿಧಾನ ಪರಿಷತ್ ಸದಸ್ಯರಾದ ಬಿ.ಎಂ.ಫಾರೂಕ್, ಭೋಜೆಗೌಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಜೆಡಿಎಸ್ ಮುಖಂಡರು ಮಾಜಿ ಮುಖ್ಯಮಂತ್ರಿಗಳ ಜತೆಯಲ್ಲಿದ್ದರು.
ಅನಂತರ ಮಾಧ್ಯಮದವರನ್ನುದ್ದೇಶಿಸಿ ಮಾತಾಡುತ್ತಾ, ಹೆಚ್ ಡಿ ಕುಮಾರಸ್ವಾಮಿ ಅವರು “ಹತ್ಯೆಗೊಳಗಾದ ಪ್ರವೀಣ್ ಅವರ ತಂದೆ ತಾಯಿ ಮತ್ತು ಅವರ ಧರ್ಮಪತ್ನಿ ಹಾಗೂ ಅವರ ಸಹೋದರಿ ಜೊತೆ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದ್ದೇನೆ. ಮುಖ್ಯವಾಗಿ ಪ್ರವೀಣ್ ಅವರ ಧರ್ಮಪತ್ನಿ ಅವರು ತನ್ನ ಗಂಡನ ಹತ್ಯೆ ಮಾಡಿದವರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಹಿಸಿದ್ದಾರೆ. ಅದಕ್ಕೆ ಸರಕಾರದ ಗಮನ ಸೆಳೆಯಬೇಕು, ಹೋರಾಟ ಮಾಡಬೇಕು. ನಾನು ಸರಕಾರಕ್ಕೆ ಹೇಳುವುದು, ಈ ತನಿಖೆಗಳನ್ನು ಕಾಟಾಚಾರದ ತನಿಖೆಯಾಗಿ ತಗೊಳ್ಳಬೇಡಿ, ಯಾರು ಇದರ ಹಿಂದೆ ಇದ್ದಾರೆ? ಇದರ ಸತ್ಯಾಂಶ ಏನು? ಎಂತಾ ದೊಡ್ಡ ಶಕ್ತಿನೇ ಇರಲಿ. ಅದರ ಬಗ್ಗೆ ಕಠಿಣವಾದ ಕ್ರಮವನ್ನು ತಗೋಬೇಕು. ಈ ರೀತಿ ಹತ್ಯೆಗೊಳಗಾದಂತಹ ಎರಡು ಕುಟುಂಬ, ಇವತ್ತು ನಾವು ನೋಡಿದ್ದೇವೆ. ಅನುಕಂಪದ ಮಾತನ್ನು ಆಡುವುದು ಬೇಡ. ಹಾಗಾಗಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು. ಹಾಗೂ ಪ್ರವೀಣ್ ಕುಟುಂಬದವರ ಪರಿಸ್ಥಿತಿಯನ್ನು ಕೇಳಿದ್ದೇನೆ. ನಮ್ಮ ಕೈಲಾದಷ್ಟು ಪಕ್ಷದ ಮೂಲಕ ಸಹಾಯ ಮಾಡಿದ್ದೇವೆ. ಸುಮಾರು 5 ಲಕ್ಷ ರೂ.ಚೆಕ್ ನೀಡಿದ್ದೇವೆ. ಇಲ್ಲಿ ದುಡ್ಡಿಗಿಂತ ನ್ಯಾಯ ಮುಖ್ಯ ಎಂದು ಕುಮಾರಸ್ವಾಮಿ ಹೇಳಿದ್ದಾರೆ.