ಪ್ರವೀಣ್ ನೆಟ್ಟಾರು ಮನೆಗೆ ಸಂಸದ, ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಭೇಟಿ ನೀಡಿ ಸಾಂತ್ವನ
ಯುವ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಗೆ ಆಕ್ರೋಶ ವ್ಯಕ್ತವಾಗುತ್ತಲೇ ಇದ್ದು, ಮೃತರ ಮನೆಗೆ ನಿನ್ನೆ ಬಿಜೆಪಿ ಅಧಿಕಾರಿಗಳು, ಹಿಂದೂ ಸಂಘಟಕರು ಭೇಟಿ ನೀಡಿದ್ದಾರೆ. ಇಂದು ಮೃತರ ಮನೆಗೆ ತೇಜಸ್ವಿ ಸೂರ್ಯ ಕೂಡ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.
ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಪ್ರವೀಣ್ ನೆಟ್ಟಾರೆ ಪತ್ನಿ ಹಾಗೂ ಮನೆಯವರೊಂದಿಗೆ ಮಾತನಾಡಿ ಸಮಾಧಾನದ ಮಾತುಗಳನ್ನು ಹೇಳಿದ್ದಾರೆ. ಜೊತೆಗೆ ಧನ ಸಹಾಯವನ್ನು ನೀಡಿದ್ದಾರೆ.
ಬಳಿಕ ಮನೆಯಿಂದ ಹೊರಗೆ ಬಂದು ಮಾಧ್ಯಮಗಳೊಂದಿಗೆ ತೇಜಸ್ವೀ ಸೂರ್ಯ ಮಾತನಾಡಿ ,”ಇವತ್ತು ಪ್ರವೀಣ್ ಕುಟುಂಬದವರನ್ನು ಭೇಟಿ ಮಾಡಿದ್ದೇನೆ. ಯುವ ಮೋರ್ಚಾ ಕಡೆಯಿಂದ ರೂ. 15 ಲಕ್ಷ ಧನ ಸಹಾಯ ಮಾಡಿದ್ದೇವೆ. ಪ್ರವೀಣ್ ಅವರ ಕುಟುಂಬಕ್ಕೆ ಮನೆ ಕಟ್ಟಿಕೊಡಬೇಕೆಂಬ ಆಸೆ ಇತ್ತು. ಆ ಕಾರಣಕ್ಕೋಸ್ಕರ, ರೂ. 25 ಲಕ್ಷ ಹಣ ಈಗಾಗಲೇ ರಾಜ್ಯಾಧ್ಯಕ್ಷರು ನೀಡಿದ್ದಾರೆ,” ಎಂದರು.
ಪ್ರವೀಣ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದವನ ಮಗ ಕೃತ್ಯಕ್ಕೆ ನೆರವು ನಡೆದಿರುವುದು ದಿಗ್ಭ್ರಮೆ ಮೂಡಿಸಿದೆ. ಪ್ರವೀಣ್ ಸಾವಿನಿಂದ ಬಿಜೆಪಿಗೆ ತುಂಬಲಾರದ ನಷ್ಟವಾಗಿದೆ. ಸಮಸ್ತ ಹಿಂದೂಗಳಿಗೆ ವಿಶ್ವಾಸದ ಒಂದು ಮಾತು ಹೇಳ್ತೇನೆ. ಇಸ್ಲಾಮಿ ಜಿಹಾದ್ ತೊಡೆದುಹಾಕಲು ಪ್ರತಿಜ್ಞೆ ಮಾಡಿದ್ದೇವೆ. ಪ್ರವೀಣನ ಸಾವು ರಾಜ್ಯ, ದೇಶವನ್ನು ಎಬ್ಬಿಸಿದೆ. ಇದು ಜಿಹಾದಿ ಮನಸ್ಥಿತಿ ದೇಶಕ್ಕೆ ಕಂಟಕ ಎಂದಿದ್ದಾರೆ.
ನಮ್ಮ ಕಾರ್ಯಕರ್ತರು ಯಾವುದೇ ವಿಚಲಿತರಾಗುವುದು ಬೇಡ. ಸ್ವಾಮಿ ವಿವೇಕಾನಂದ, ಛತ್ರಪತಿ ಶಿವಾಜಿ, ನಾರಾಯಣಗುರುವಲ್ಲಿ ಹರಿತಾ ಇದ್ದಂತಹ ರಕ್ತವೇ ನಮ್ಮಲ್ಲಿ ಹರಿತಾ ಇರೋದು. ಈ ಯುದ್ಧ ಇಂದು ನಾಳೆಗೆ ಮುಗಿಯೋದಲ್ಲ. ನಾವು ಸಂಘಟಿತರಾಗಿದ್ರೆ ಈ ಯುದ್ಧದಲ್ಲಿ ಗೆಲ್ತೇವೆ. ನಮ್ಮಲ್ಲಿ ಒಡಕು ಮೂಡಿದ್ರೆ ಅವರು ಗೆಲ್ತಾರೆ. ನಾವು ಜೀವವನ್ನಾದ್ರೂ ಬಿಡ್ತೇವೆ. ಆದ್ರೆ ನಮ್ಮ ಸಿದ್ಧಾಂತ ಬಿಡಲ್ಲ. ಪ್ರವೀಣ್ ಕುಟುಂಬದ ಜೊತೆ ಪಕ್ಷ ಇದೆ, ಸರ್ಕಾರ ಇದೆ,” ಎಂದು ಅವರು ಹೇಳಿದರು.