“ಹಿಂದೂ ಕಾರ್ಯಕರ್ತರು ಕೈಗೆ ಬಳೆ ತೊಟ್ಟಿಲ್ಲ, ಎದೆಯೊಡ್ಡಿ ನಿಲ್ಲುವ ಶಕ್ತಿ ನಮಗಿದೆ” – ಬಿ ವೈ ರಾಘವೇಂದ್ರ
“ಹಿಂದೂ ಕಾರ್ಯಕರ್ತರು ಕೈಗೆ ಬಳೆ ತೊಟ್ಟಿಲ್ಲ. ಜಿಹಾದಿಗಳಿಗೆ ಬೆನ್ನು ತೋರಿಸಿಲ್ಲ. ಎದೆಯೊಡ್ಡಿ ನಿಲ್ಲುವ ಶಕ್ತಿ ನಮಗಿದೆ” ಎಂದು ಶಿವಮೊಗ್ಗದ ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.
ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಶಿವಮೊಗ್ಗದ ಗೋಪಿ ವೃತ್ತದದಲ್ಲಿ ಇಂದು ವಿಶ್ವ ಹಿಂದು ಪರಿಷದ್ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ರಾಘವೇಂದ್ರ ಅವರು, ” ಇನ್ಮುಂದೆ ಇನ್ನೊಬ್ಬ ಹಿಂದು ಕಾರ್ಯಕರ್ತನ ನೆತ್ತರು ಮತ್ತೆ ಹರಿಯದಂತೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು. ಅನೇಕ ಹಿಂದುಗಳ ತ್ಯಾಗ ಬಲಿದಾನ ಆಗುತ್ತಿರುವುದು ನಮ್ಮ ದೌರ್ಭಾಗ್ಯವಾಗಿದೆ. ಇನ್ನೆಷ್ಟು ಹಿಂದು ಕಾರ್ಯಕರ್ತರ ಬಲಿ ಆಗಬೇಕಿದೆ” ಎಂದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದರೂ ಹಿಂದುಗಳಿಗೆ ರಕ್ಷಣೆ ಸಿಗುತ್ತಿಲ್ಲ ಎಂದು ಎಲ್ಲರೂ ಪ್ರಶ್ನೆ ಮಾಡುತ್ತಿದ್ದಾರೆ. ಒಂದೇ ಬಾರಿಗೆ ಇವನ್ನೆಲ್ಲ ನಿರ್ಮೂಲನೆ ಮಾಡುವುದಕ್ಕೆ ಸಾಧ್ಯವಿಲ್ಲ. ಹಂತ ಹಂತವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ ಎಂದರು.
ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳು ರಾಜೀನಾಮೆ ನೀಡುತ್ತಿರುವುದು ದೊಡ್ಡ ಬೆಳವಣಿಗೆ .ಇದು ಮುಂಬರುವ 2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆ ಎದುರಾಗಬಹುದೇನೋ ಎಂಬ ಸಂಶಯ ಈಗಲೇ ಕಾಡುತ್ತಿದೆ. ಇಷ್ಟು ಮಾತ್ರವಲ್ಲದೇ, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ನಡೆದ ಪ್ರವೀಣ್ ನೆಟ್ಟಾರು ಹತ್ಯೆಯ ನಂತರ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ನಾಯಕತ್ವದ ವಿರುದ್ಧ ಜನಾಕ್ರೋಶ ಹೆಚ್ಚಾಗಿದೆ.