ಸಿ. ಎಂ ಬೊಮ್ಮಾಯಿ ಸರ್ಕಾರದಿಂದ ಹೊಸ ಯೋಜನೆಗಳ ಘೋಷಣೆ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ನೇತೃತ್ವದಲ್ಲಿ ಕರ್ನಾಟಕ ಸರ್ಕಾರದ ಒಂದು ವರ್ಷದ ಅಧಿಕಾರಾವಧಿ ಪೂರ್ಣಗೊಳಿಸಿದ ಸಂದರ್ಭದಲ್ಲಿ ಹಲವು ನೂತನ ಯೋಜನೆಗಳನ್ನು ಗುರುವಾರ ಘೋಷಣೆ ಮಾಡಿದ್ದಾರೆ.

 

ಈ ಕುರಿತು ಮಾತನಾಡಿದ ಸಿಎಂ ಬೊಮ್ಮಾಯಿ, ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಏರ್ಪಡಿಸಿದ್ದ ಒಂದು ವರ್ಷದ ಸಾಧನೆಯ ಮಾಹಿತಿ ನೀಡುವ ಸಮಾರಂಭವನ್ನು ಪ್ರವೀಣ್ ಹತ್ಯೆ ಕಾರಣದಿಂದ ರದ್ದುಪಡಿಸಲಾಗಿದೆ. ಆದರೆ ಸಾರ್ವಜನಿಕರಿಗೆ ಈ ವರೆಗೆ ಕೈಗೊಂಡ ಅಭಿವೃದ್ಧಿ ಯೋಜನೆಗಳ ಮಾಹಿತಿ ನೀಡುವುದು ಹಾಗೂ ಮುಂದೆ ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ಯೋಜನೆಗಳ ಮಾಹಿತಿ ನೀಡುವ ಉದ್ದೇಶದಿಂದ ಸುದ್ಧಿಗೋಷ್ಠಿ ನಡೆಸುತ್ತಿರುವುದಾಗಿ ತಿಳಿಸಿದರು.

ಸಿ. ಎಂ ಬೊಮ್ಮಾಯಿ ಘೋಷಿಸಿದ ಹಲವು ಯೋಜನೆಗಳು ಇಂತಿವೆ:

ಎಸ್ ಸಿ /ಎಸ್ ಟಿ ಸಮುದಾಯಗಳಿಗೆ 75 ಯೂನಿಟ್ ಉಚಿತ ವಿದ್ಯುತ್:
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಬಡ ಕುಟುಂಬಗಳಿಗೆ ಉಚಿತವಾಗಿ 75 ಯುನಿಟ್ ವರೆಗೆ ಉಚಿತ ವಿದ್ಯುತ್ ನೀಡುವ ಯೋಜನೆಯಡಿ ಡಿಬಿಟಿ ವರ್ಗಾವಣೆ ಇಂದಿನಿಂದ ಪ್ರಾರಂಭವಾಗಲಿದೆ. ಸುಮಾರು 25 ಲಕ್ಷ ಫಲಾನುಭವಿಗಳಿಗೆ ಅನುಕೂಲವಾಗಲಿದೆ. ಇದಕ್ಕಾಗಿ 700 ಕೋಟಿ ರೂ. ಒದಗಿಸಲಾಗಿದೆ.

ಸ್ವಯಂ ಉದ್ಯೋಗ ಯೋಜನೆ :
ಬಾಬು ಜಗಜೀವನ್ ರಾಂ ಅವರ ಹೆಸರಿನಲ್ಲಿ ಸ್ವಯಂ ಉದ್ಯೋಗ ಯೋಜನೆ : ಪ್ರತಿಯೊಂದು ಕ್ಷೇತ್ರದಲ್ಲಿ 100 ಪರಿಶಿಷ್ಟ ಜಾತಿ/ ಪಂಗಡದ ಯುವಕರಿಗೆ ಸ್ವಯಂ ಉದ್ಯೋಗ ನೀಡುವ ಯೋಜನೆಗೆ ಚಾಲನೆ.

8000 ಶಾಲಾ ಕೊಠಡಿಗಳ ನಿರ್ಮಾಣ:
ಶಿಕ್ಷಣ ಹಾಗೂ ಅದರ ಮೂಲಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದ್ದು, ‘ವಿವೇಕ’ ಯೋಜನೆಯಡಿ ಮೊದಲ ಬಾರಿಗೆ 8000 ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಚಾಲನೆ.

ಸಮುದಾಯ ಆರೋಗ್ಯ ಕೇಂದ್ರಗಳಾಗಿ ಉನ್ನತೀಕರಣ:
ರಾಜ್ಯದ 100 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳಾಗಿ ಉನ್ನತೀಕರಣಗೊಳಿಸುವ ಯೋಜನೆಗೆ ಚಾಲನೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಸುಮಾರು 71 ಪಿಹೆಚ್ಸಿ ಗಳನ್ನು ರಾಜ್ಯದ ಸರಾಸರಿಗಿಂತ ಕಡಿಮೆ ಸೂಚ್ಯಂಕ ಇರುವ ಪ್ರದೇಶಗಳಲ್ಲಿ ಸ್ಥಾಪಿಸಲಾಗುವುದು.

‘ಸ್ತ್ರೀ ಸಾಮರ್ಥ್ಯ’ ಯೋಜನೆ:
ಸ್ತ್ರೀಶಕ್ತಿ ಸಂಘಗಳು ಸ್ವಯಂ ಉದ್ಯೋಗ ಕೈಗೊಳ್ಳಲು ಉತ್ತೇಜನ ನೀಡುವ ನಿಟ್ಟಿನಲ್ಲಿ 1.50 ಲಕ್ಷ ರೂ. ನೀಡುವ ಜೊತೆಗೆ ಸುಲಭವಾಗಿ ಸಾಲ ಸೌಲಭ್ಯ ಒದಗಿಸಲು ಆಂಕರ್ ಬ್ಯಾಂಕ್ ಜೋಡಣೆ, ತರಬೇತಿ, ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ ನೀಡುವ ‘ಸ್ತ್ರೀ ಸಾಮರ್ಥ್ಯ ಯೋಜನೆ’ ಗೆ ಚಾಲನೆ ನೀಡಲಾಗಿದೆ. ಸುಮಾರು 5 ಲಕ್ಷ ಮಹಿಳೆಯರ ಸ್ವಾವಲಂಬನೆಗೆ ಎಂಡ್ ಟು ಎಂಡ್‍ ನೆರವು ನೀಡಲಾಗುತ್ತಿದೆ.

ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆ:
ರಾಜ್ಯದ ಸುಮಾರು 28 ಸಾವಿರ ಗ್ರಾಮಗಳಲ್ಲಿ ತಲಾ ಒಂದು ವಿವೇಕಾನಂದ ಸ್ವಸಹಾಯ ಸಂಘಗಳನ್ನು ರಚಿಸಿ, ಯುವಕರಿಗೂ ಆರ್ಥಿಕ ನೆರವು, ಬ್ಯಾಂಕ್ ವ್ಯವಸ್ಥೆ, ತರಬೇತಿ, ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಯೋಜನೆ. ಇದರಿಂದ 5 ಲಕ್ಷ ಯುವಕರು ಸ್ವಯಂ ಉದ್ಯೋಗದಲ್ಲಿ ತೊಡಗುವ ಅವಕಾಶ ಕಲ್ಪಿಸಲಾಗುವುದು.

ಪುಣ್ಯಕೋಟಿ ದತ್ತು ಯೋಜನೆ:
ಗೋವುಗಳ ಸಂರಕ್ಷಣೆಯಲ್ಲಿ ಜನರ ಪಾಲುದಾರಿಕೆಯನ್ನು ಉತ್ತೇಜಿಸಲು ಪುಣ್ಯಕೋಟಿ ದತ್ತು ಯೋಜನೆ ಜಾರಿ. ಈ ಯೋಜನೆಗೆ ಸಂಬಂಧಿಸಿದ ವೆಬ್ಸೈಟ್‍ ನ ಲೋಕಾರ್ಪಣೆ. ಪ್ರತಿಯೊಬ್ಬ ವ್ಯಕ್ತಿಯೂ ವಾರ್ಷಿಕ 11000 ರೂ. ಪಾವತಿಸಿ, ಒಂದು ಗೋವಿನ ಒಂದು ವರ್ಷದ ನಿರ್ವಹಣೆಯನ್ನು ಮಾಡಬಹುದಾಗಿದೆ. ಅವರೇ ಗೋವುಗಳನ್ನು ದತ್ತು ತೆಗೆದುಕೊಳ್ಳಬಹುದು, ಅಥವಾ 11,000 ಮೊತ್ತ ಪಾವತಿಸಿದ್ದಲ್ಲಿ ಸರ್ಕಾರದ ಗೋ ಶಾಲೆಗಳಲ್ಲಿ ಗೋವುಗಳ ರಕ್ಷಣೆಗೆ ಈ ಮೊತ್ತವನ್ನು ಬಳಸಿಕೊಳ್ಳಲಾಗುವುದು.

ನೇಕಾರರ ಮಕ್ಕಳಿಗೆ ವಿದ್ಯಾನಿಧಿ:
ನೇಕಾರರ ಮಕ್ಕಳಿಗೆ ವಿದ್ಯಾನಿಧಿ ಯೋಜನೆಯನ್ನು ಪ್ರಾರಂಭಿಸಲಾಗಿದ್ದು, 10 – 12 ಸಾವಿರ ಮಕ್ಕಳಿಗೆ ಈ ಯೋಜನೆಯ ಲಾಭ ದೊರೆಯಲಿದೆ.

ಟ್ಯಾಕ್ಸಿ ಚಾಲಕರ ಮಕ್ಕಳಿಗೆ ವಿದ್ಯಾನಿಧಿ:
ಟ್ಯಾಕ್ಸಿ ಚಾಲಕರ ಮಕ್ಕಳಿಗೂ ವಿದ್ಯಾನಿಧಿ ಯೋಜನೆಯನ್ನು ವಿಸ್ತರಿಸಲಾಗಿದ್ದು, 50,000 ಟ್ಯಾಕ್ಸಿ ಚಾಲಕ ಮಕ್ಕಳಿಗೆ ಈ ಯೋಜನೆಯ ಲಾಭ ದೊರೆಯಲಿದೆ.

ಮೀನುಗಾರರ ಮಕ್ಕಳಿಗೆ ವಿದ್ಯಾನಿಧಿ:
ಮೀನುಗಾರರ ಮಕ್ಕಳಿಗೆ ವಿದ್ಯಾನಿಧಿ ಯೋಜನೆಯನ್ನು ವಿಸ್ತರಿಸಲಾಗಿದ್ದು, ಈ ಎಲ್ಲ ಕಾರ್ಯಕ್ರಮಗಳಿಗೆ ಸರ್ಕಾರದ ಆದೇಶಗಳನ್ನು ಹೊರಡಿಸಲಾಗಿದ್ದು, ಅನುದಾನದ ವ್ಯವಸ್ಥೆಯನ್ನೂ ಮಾಡಲಾಗಿದೆ. ಈ ಎಲ್ಲ ವಿದ್ಯಾನಿಧಿ ಯೋಜನೆಗಳಿಗೆ  ಚಾಲನೆ ನೀಡಲಾಗಿದೆ ಎಂದು ಸಿಎಂ ತಿಳಿಸಿದರು.

ದೇಶದಲ್ಲಿಯೇ ಮೊದಲ ಬಾರಿಗೆ ಪ್ರಾರಂಭಿಸಿದ ರೈತ ವಿದ್ಯಾನಿಧಿ ಯೋಜನೆಯಡಿ ರೈತ ವಿದ್ಯಾನಿಧಿಯಿಂದ ಕಳೆದ ವರ್ಷ 8.50 ಲಕ್ಷ ಹಾಗೂ ಈ ವರ್ಷ 9.8 ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗಿದೆ ಎಂದು ಬೊಮ್ಮಾಯಿ ಹೇಳಿದರು. ಪ್ರತಿ ದಿನವೂ ಕೂಡ 15-20 ಸಾವಿರ ಮಕ್ಕಳಿಗೆ ಡಿಬಿಟಿ ಮೂಲಕ ಹಣ ತಲುಪಿದೆ. ರೈತರ ಕುಟುಂಬಗಳಲ್ಲಿ ಅವರ ಮಕ್ಕಳ ವಿದ್ಯಾಭ್ಯಾಸ ಮಾಡುತ್ತಿರುವುದಕ್ಕೆ ರೈತರಲ್ಲಿ ಭರವಸೆ ಮೂಡಿದೆ ಎಂದು ಸಿಎಂ ಹೇಳಿದರು.

8.5 ಲಕ್ಷ ಕಳೆದ ವರ್ಷ ರೈತ ವಿದ್ಯಾರ್ಥಿಗಳು ವಿದ್ಯಾನಿಧಿ ಪಡೆದುಕೊಂಡಿದ್ದರು. 9.98 ವಿದ್ಯಾರ್ಥಿಗಳಿಗೆ ರೈತ ವಿದ್ಯಾನಿಧಿ ತಲುಪಿದೆ. ರೈತ ಮಕ್ಕಳಿಗೆ ಇದರಿಂದ ಭರವಸೆ ಮೂಡಿದೆ. ಸಂಧ್ಯಾ ಸುರಕ್ಷಾ ಮಾಸಾಶನ ಎಲ್ಲ ಹೆಚ್ಚು ಮಾಡಿ ಆರ್ಥಿಕ ಆಸರೆ ನೀಡಲಾಗಿದೆ. ಬಡವರಿಗೆ ವಯಸ್ಸಾದವರಿಗೆ ಅಂಗವಿಕಲರಿಗೆ ಕೊಟ್ಟಿದ್ದೇವೆ. ಇತ್ತೀಚೆಗೆ ಎಸ್ಸಿ.ಎಸ್ಟಿ ಸಮುದಾಯಕ್ಕೆ ಯೋಜನಗೆಳನ್ನು ಹೆಚ್ಚಳ ಮಾಡಿದ್ದೇವೆ. 25 ಲಕ್ಷಕ್ಕೂ ಹೆಚ್ಚಿನ ಕುಟುಂಬಗಳಿಗೆ ಉಚಿತ ವಿದ್ಯುತ್ ನೀಡುವ ಕೆಲಸ ಮಾಡಿದ್ದೇವೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.

Leave A Reply

Your email address will not be published.