ಸೋರುತಿಹುದು ಶಾಲಾ ಮಹಡಿ | ಶಾಲೆಯ ಒಳಗೆ ಛತ್ರಿ ಹಿಡಿದುಕೊಂಡು ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳ ವೀಡಿಯೋ ವೈರಲ್
ಸರ್ಕಾರಿ ಶಾಲೆಯ ಪರಿಸ್ಥಿತಿ ಯಾವ ಮಟ್ಟಿಗೆ ತಲುಪಿದೆ ಎಂದರೆ ಮಕ್ಕಳು ಶಾಲೆಗೆ ಹೋಗಲು ಹಿಂದೇಟು ಹಾಕುವ ಮಟ್ಟಿಗೆ. ಯಾಕಂದ್ರೆ, ಉತ್ತಮವಾದ ಸೌಲಭ್ಯದ ಕೊರತೆ, ಶಿಕ್ಷಕರ ಕೊರತೆ. ಇದೆಲ್ಲದರ ನಡುವೆ ಇಲ್ಲೊಂದು ಕಡೆ ಶಾಲೆಯ ಮಹಡಿ ಸೋರುತ್ತಿದ್ದು, ಮಕ್ಕಳು ಛತ್ರಿ ಹಿಡಿದುಕೊಂಡು ಕೂರುವ ಪರಿಸ್ಥಿತಿಗೆ ತಲುಪಿದೆ.
ಹೌದು. ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯ ಬುಡಕಟ್ಟು ಪ್ರಾಬಲ್ಯದ ಖೈರಿಕಲಾ ಗ್ರಾಮದ ಪ್ರಾಥಮಿಕ ಸರ್ಕಾರಿ ಶಾಲೆಯೊಂದರಲ್ಲಿ ಇಂತಹ ಪರಿಸ್ಥಿತಿ ಎದುರಾಗಿದ್ದು, ಬುಡಕಟ್ಟು ವಿದ್ಯಾರ್ಥಿಗಳು ಕಟ್ಟಡದ ಸೋರುತ್ತಿರುವ ಛಾವಣಿಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ತರಗತಿ ಕೋಣೆಗಳ ಒಳಗೆ ಛತ್ರಿಗಳನ್ನು ಹಿಡಿದು ಕೂರುವಂತೆ ಆಗಿದೆ.
ಇಂತಹ ಕಷ್ಟಕರ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು, ವಿದ್ಯಾಭ್ಯಾಸವನ್ನು ಗಮನದಲ್ಲಿಟ್ಟುಕೊಂಡು ಛಾವಣಿಯಿಂದ ಮಳೆನೀರು ಸೋರುವುದನ್ನು ತಪ್ಪಿಸಲು ಶಾಲೆಯ ಒಳಗೆ ಛತ್ರಿಗಳನ್ನು ಹಿಡಿದುಕೊಂಡು ಅಧ್ಯಯನ ಮಾಡುತ್ತಿದ್ದಾರೆ. ಇದೀಗ ಈ ದೃಶ್ಯ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
“ಶಿವರಾಜ್ ಚೌಹಾಣ್ ತಮ್ಮ ಮಗುವನ್ನು ಅಧ್ಯಯನಕ್ಕಾಗಿ ವಿದೇಶಕ್ಕೆ ಕಳುಹಿಸುತ್ತಾರೆ. ಬಡ ಬುಡಕಟ್ಟು ಮಕ್ಕಳ ಈ ಸ್ಥಿತಿ ನೋಡಿ” ಎಂದು ಟ್ಟಿಟ್ಟರ್‌ನಲ್ಲಿ ವ್ಯಕ್ತಿ ಒಬ್ಬರು ಹಂಚಿಕೊಂಡಿದ್ದಾರೆ. ಸರ್ಕಾರಿ ಶಾಲೆಯ ಪರಿಸ್ಥಿತಿ ಇನ್ನಾದರೂ ಸುಧಾರಿಸಬಹುದೆಂಬ ಹಂಬಲದಲ್ಲೇ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಆಗಿದೆ.