ಪ್ರವೀಣ್ ನೆಟ್ಟಾರು ಹತ್ಯೆ : ಶಂಕಿತರು ಪೊಲೀಸ್ ವಶಕ್ಕೆ ,ತೀವ್ರ ವಿಚಾರಣೆ
ಪುತ್ತೂರು: ಬಿಜೆಪಿ ಯುವನಾಯಕ ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಶಂಕಿತ ವ್ಯಕ್ತಿಗಳನ್ನು ವಶಕ್ಕೆ ಪಡೆದು ಪಡೆದು ತೀವ್ರ ವಿಚಾರಣೆ ನಡೆಸುತ್ತಿರುವುದಾಗಿ ಮಾಹಿತಿ ಲಭ್ಯವಾಗಿದೆ.
ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 63/2022ರಂತೆ 302 ಜೊತೆಗೆ 34 ಐಪಿಸಿ ಅನ್ವಯ ಕೇಸು ದಾಖಲಿಸಿಕೊಳ್ಳಲಾಗಿದ್ದು ಇದೀಗ ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.
ದಿನಾಂಕ 26.07.2022ರಂದು ರಾತ್ರಿ 8.30ಕ್ಕೆ ಸುಳ್ಯ ತಾಲೂಕು ಬೆಳ್ಳಾರೆ ಗ್ರಾಮದ ಮಾಸ್ತಿಕಟ್ಟೆ ಅಕ್ಷಯ ಪ್ರೆಶ್ ಚಿಕನ್ ಫಾರ್ಮ್ ಬಳಿ ಕೊಲೆ ಕೃತ್ಯ ನಡೆದಿದೆ ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು ಹಂತಕರಿಗೆ ಬಲೆ ಬೀಸಲಾಗಿದೆ. ಕೆಯ್ಯೂರು ಮಾಡಾವು ಸಂತೋಷ್ ನಗರದ ಮಧು ಕುಮಾರ್ (34ವ) ನೀಡಿದ ದೂರಿನಂತೆ ಮೂರು ಜನ ಆ ಪರಿಚಿತ ದುಷ್ಕರ್ಮಿಗಳ ವಿರುದ್ಧ ಕೇಸು ದಾಖಲಾಗಿದೆ.
ಸುಳ್ಯ ತಾಲೂಕು ಬೆಳ್ಳಾರೆ ಗ್ರಾಮದ ಬೆಳ್ಳಾರೆಯ ಮಾಸ್ತಿಕಟ್ಟೆಯಲ್ಲಿರುವ ಅಕ್ಷಯ ಪ್ರೆಶ್ ಚಿಕನ್ ಫಾರ್ಮ್ ನಲ್ಲಿ ಕ್ಲೀನಿಂಗ್ ಕೆಲಸ ಮಾಡುತ್ತಿದ್ದ ಮಧುಕುಮಾರ್ ಅವರು ನೀಡಿದ ದೂರಿನಲ್ಲಿ ‘ಚಿಕನ್ ಸೆಂಟರ್ ಮಾಲಕ ಪ್ರವೀಣ್ ನೆಟ್ಟಾರು ಅವರು ದಿನಾಂಕ 26, 07, 2022ರಂದು ರಾತ್ರಿ 8.30ಕ್ಕೆ ವ್ಯಾಪಾರ ಮುಗಿಸಿ ಅಂಗಡಿ ಬಾಗಿಲು ಹಾಕಿ ತನ್ನ ಮನೆಯ ಕಡೆಗೆ ಹೋಗಲು ಸ್ಕೂಟರಿನಲ್ಲಿ ಕುಳಿತು ಹೊರಡಲು ಸಿದ್ಧತೆಯಲ್ಲಿದ್ದಾಗ ತಾನು ಅಂಗಡಿಯ ಒಳಗೆ ರೈನ್ ಕೋರ್ಟ್ ತರಲೆಂದು ಹೋದ ಸಮಯ ಅಂಗಡಿಯ ಹೊರಗೆ ಜೋರಾಗಿ ಬೊಬ್ಬೆ ಕೇಳಿ ಹೊರಗಡೆ ಬಂದು ನೋಡುವಷ್ಟರಲ್ಲಿ ಪ್ರವೀಣ್ ನೆಟ್ಟಾರುರವರು ಸ್ಕೂಟರ್ ನಿಂತಿದ್ದ ಸ್ಥಳದಿಂದ ಸುಮಾರು 50 ಅಡಿ ದೂರದಲ್ಲಿ ಕವಚಿ ಬಿದ್ದಿದ್ದು ಆಗ ಅಲ್ಲಿಂದ ಮೂರು ಜನ ಅಪರಿಚಿತ ವ್ಯಕ್ತಿಗಳು ಕೈಯಲ್ಲಿ ಹತ್ಯಾರುಗಳನ್ನು ಹಿಡಿದುಕೊಂಡು ಮೋಟಾರು ಸೈಕಲ್ಲಿನಲ್ಲಿ ಪುತ್ತೂರು ಕಡೆಗೆ ಪರಾರಿಯಾಗಿದ್ದಾರೆ.