ಪ್ರವೀಣ್ ನೆಟ್ಟಾರು ಹತ್ಯೆ ಹಿನ್ನೆಲೆ, ಪುತ್ತೂರಿನಲ್ಲಿ 144 ಸೆಕ್ಷನ್ ಜಾರಿ
ಪುತ್ತೂರು: ದುಷ್ಕರ್ಮಿಗಳ ದಾಳಿಯಿಂದ ಗಂಭೀರ ಗಾಯಗೊಂಡಿದ್ದ ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪ್ರವೀಣ್ ನೆಟ್ಟಾರು ಸಾವನ್ನಪ್ಪಿದ್ದಾರೆ.
ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಪುತ್ತೂರಿನಲ್ಲಿ ಪ್ರವೀಣ್ ಹತ್ಯೆ ಹಿನ್ನಲೆ ಪರಿಸ್ಥಿತಿ ಬಿಗಡಾಯಿಸಿದ್ದು, ಪುತ್ತೂರಿನಾದ್ಯಂತ 144 ಸೆಕ್ಷನ್ ಜಾರಿ ಮಾಡುವಂತೆ ಸೂಚನೆ ನೀಡಿದ್ದಾಗ ಡಿಜಿ ಐಜಿಪಿ ಪ್ರವೀಣ್ ಸೂದ್ ರಿಂದ ದಕ್ಷಿಣ ಕನ್ನಡ ಜಿಲ್ಲಾ ಎಸ್ ಪಿ ಗೆ ಸೂಚನೆ ನೀಡಲಾಗಿದೆ.
ಯಾವುದೇ ಕಾರಣಕ್ಕೂ ಲಾ ಅಂಡ್ ಆರ್ಡರ್ ಸಮಸ್ಯೆ ಆಗದಂತೆ ಸೂಚನೆ ನೀಡಲಾಗಿದೆ. ಹೆಚ್ಚುವರಿ ಪೊಲೀಸ್ ಸಿಬ್ಬಂದಿ ಬೇಕಾದರೆ ಪಕ್ಕದ ಜಿಲ್ಲೆ ಅಥವಾ ಮಂಗಳೂರು ಸಿಟಿಯಿಂದ ನಿಯೋಜನೆ ಮಾಡುವಂತೆ ಡಿಜಿ ಪ್ರವೀಣ್ ಸೂದ್ ಸೂಚನೆ ನೀಡಿದ್ದಾರೆ.
ಆರೋಪಿಗಳಿಗಾಗಿ ಬಲೆ ಬೀಸಿರುವ ಪೊಲೀಸರು ಕೇರಳ ಗಡಿ ಪ್ರದೇಶ ಹಾಗೂ ಪುತ್ತೂರಿನ ಸುತ್ತಮುತ್ತ ನಾಕಾಬಂದಿ ಹಾಕಿದ್ದಾರೆ. ನಾಕಾಬಂದಿ ಹಾಕಿ ಕೊಲೆ ಆರೋಪಿಗಳಿಗಾಗಿ ತಲಾಶ್ ನಡೆಸುತ್ತಿದ್ದಾರೆ.
ಜಿಲ್ಲಾಧಿಕಾರಿಗಳನ್ನು ರಾತ್ರೋರಾತ್ರಿ ಸ್ಥಳಕ್ಕೆ ಬರಿಸಿಕೊಂಡ ಪ್ರತಿಭಟನಾಕಾರರು
ಪ್ರಗತಿ ಆಸ್ಪತ್ರೆಯ ಎದುರು ಧರಣಿ ಕುಳಿತ ಹಿಂದು ಸಂಘಟನೆ ಹಾಗೂ ಬಿಜೆಪಿ ಕಾರ್ಯಕರ್ತರು ಜಿಲ್ಲಾಧಿಕಾರಿಗಳು ಬರುವಂತೆ ಧರಣಿ ಕುಳಿತರು. ಸ್ಥಳಕ್ಕೆ ಪುತ್ತೂರು ಸಹಾಯಕ ಕಮೀಷನರ್ ಗಿರೀಶ್ ನಂದನ್ ಆಗಮಿಸಿ ಮಾತುಕತೆ ನಡೆಸಿದರು. ಎಸ್ಪಿ ಋಷಿಕೇಶ್ ಸೊನಾವಣೆ ಅವರೂ ಮಾತುಕತೆ ನಡೆಸಿದರು. ಮಾತುಕತೆಯ ಬಳಿಕವೂ ಪಟ್ಟು ಬಿಡದ ಕಾರ್ಯಕರ್ತರು ಜಿಲ್ಲಾಧಿಕಾರಿ ಬರುವಂತೆ ಒತ್ತಾಯಿಸಿದರು. ಬಳಿಕ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಅವರು ಮಂಗಳೂರಿನಿಂದ ಹೊರಟು ರಾತ್ರಿ 1.20 ರ ಸುಮಾರಿಗೆ ಭೇಟಿ ನೀಡಿ ಕಾರ್ಯಕರ್ತರ ಜತೆ ಮಾತನಾಡಿದರು. ಮೃತ ಪ್ರವೀಣ್ ನೆಟ್ಟಾರು ಅವರ ಕುಟುಂಬಕ್ಕೆ ಒಂದು ಕೋಟಿ ಪರಿಹಾರ ನೀಡುವಂತೆ ಒತ್ತಾಯಿಸಿದರು.
ಘಟನೆ ಹಿನ್ನೆಲೆ
ಬೆಳ್ಳಾರೆಯ ಮಾಸ್ತಿಕಟ್ಟೆಯಲ್ಲಿರುವ ಅಕ್ಷಯ ಚಿಕನ್ ಸೆಂಟರ್ ಮಾಲಕ, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾಗಿದ್ದ ಪ್ರವೀಣ್ ನೆಟ್ಟಾರು ಎಂಬವರ ಮೇಲೆ ದುಷ್ಕರ್ಮಿಗಳಿಬ್ಬರು ಕತ್ತಿಯಿಂದ ಕಡಿದ ಪರಿಣಾಮ ತೀವ್ರ ಗಾಯಗೊಂಡಿರುವ ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆತರುತ್ತಿದ್ದ ವೇಳೆ ದಾರಿ ಮಧ್ಯೆ ಮೃತಪಟ್ಟಿದ್ದಾರೆ.
ಜು.26ರಂದು ರಾತ್ರಿ 8.20 ರಿಂದ 8.45ರ ನಡುವೆ ಈ ಘಟನೆ ನಡೆದಿದೆ.ಪ್ರವೀಣ್‌ರವರು ತನ್ನ ಅಂಗಡಿಯಲ್ಲಿ ಕುಳಿತುಕೊಂಡಿದ್ದ ವೇಳೆ ಕೆಎಲ್ ನಂಬರಿನ ಬೈಕ್‌ನಲ್ಲಿ ಬಂದಿದ್ದ ಈರ್ವರು ದುಷ್ಕರ್ಮಿಗಳು ಅಲ್ಲಿಗೆ ಬಂದಿದ್ದರು. ಇದನ್ನು ಗಮನಿಸಿದ ಪ್ರವೀಣ್‌ರವರು ತಪ್ಪಿಸಿಕೊಳ್ಳಲೆಂದು ಪಕ್ಕದ ಅಂಗಡಿಗೆ ಹೋಗುತ್ತಿದ್ದ ವೇಳೆಯೇ ಹಿಂದಿನಿಂದ ಬಂದು ಅವರ ತಲೆಗೆ ತಲವಾರಿನಿಂದ ಕಡಿದು ಪರಾರಿಯಾಗಿದ್ದಾರೆ.
ಇದರಿಂದಾಗಿ ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಪ್ರವೀಣ್‌ರವರನ್ನು ಕೂಡಲೇ ಅಲ್ಲಿಂದ ಪುತ್ತೂರಿನ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಗೆಂದು ಕರೆ ತರುತ್ತಿದ್ದ ವೇಳೆ ದಾರಿ ಮಧ್ಯೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.ಈ ಘಟನೆ ಯಾಕಾಗಿ ನಡೆಯಿತು ಎಂಬುದು ನಿಗೂಢವಾಗಿದೆಯಾದರೂ ಕೆಲ ದಿನಗಳ ಹಿಂದೆ ಕಳೆಂಜ ವಿಷ್ಣುನಗರದಲ್ಲಿ ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿ ಈ ಕೃತ್ಯ ಎಸಗಲಾಗಿದೆ ಎಂದು ಸುದ್ದಿ ಹರಡಿದೆ.ಘಟನೆಯಿಂದಾಗಿ ಬೆಳ್ಳಾರೆಯಲ್ಲಿ ತುಸು ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದ್ದು ಈಗಾಗಲೇ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.