ಬೆಳ್ತಂಗಡಿ : ಬಾಲಕಿಗೆ ಲೈಂಗಿಕ ಕಿರುಕುಳದ ಆರೋಪಿಗೆ ಹಲ್ಲೆ ನಡೆಸಿಲ್ಲ-ಸ್ಪಷ್ಟನೆ
ಬೆಳ್ತಂಗಡಿ: ತಾಲೂಕಿನ ಇಂದಬೆಟ್ಟು ಗ್ರಾಮದಲ್ಲಿ ನಡೆದ ಬಾಲಕಿಗೆ ಲೈಂಗಿಕ ಕಿರುಕುಳ ಪ್ರಕರಣ ಹಾಗೂ ಹಲ್ಲೆ, ಕೊಲೆ ಪ್ರಕರಣದ ಕುರಿತು ಕಿರುಕುಳಕ್ಕೊಳಗಾದ ಬಾಲಕಿಯ ತಂದೆ ಪ್ರತಿಕ್ರಿಯೆ ನೀಡಿದ್ದು, ನಾರಾಯಣ ನಾಯ್ಕ ನನ್ನ ಮಗಳಿಗೆ ಕಿರುಕುಳ ನೀಡಿದ್ದು ಹೌದು.
ಜೊತೆಗೆ ಈ ಗಲಾಟೆಯಲ್ಲಿ ಮೃತಪಟ್ಟ ಜಾರಪ್ಪ ನಾಯ್ಕ ಮೇಲೆ ಯಾರೂ ಹಲ್ಲೆ ನಡೆಸಿಲ್ಲ ಬದಲಾಗಿ ಅವರೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎಂಬ ಹೇಳಿಕೆಯೊಂದನ್ನು ವೀಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ
ಅಪ್ರಾಪ್ತ ಬಾಲಕಿಯ ತಂದೆ ನೀಡಿರುವ ಹೇಳಿಕೆಯ ಪ್ರಕಾರ, ನನ್ನ ಮನೆಯ ಸಮೀಪವಿದ್ದ ನಾರಾಯಣ ನಾಯ್ಕ ಗೆಣಸು ಕೊಡುತ್ತೇನೆಂದು ಆಗಾಗ ನನ್ನ ಮಗಳನ್ನು ಮನೆಗೆ ಕರೆಯುತ್ತಿದ್ದ. ಆದರೆ ಒಂದು ದಿನ ಮಗು ಅಳುತ್ತಾ ಮನೆಗೆ ಬಂದು ತನಗಾದ ಲೈಂಗಿಕ ದೌರ್ಜನ್ಯದ ಬಗ್ಗೆ ಹೇಳಿಕೊಂಡಿದೆ. ಈ ಬಗ್ಗೆ ಆತನ ಪತ್ನಿ ಮತ್ತು ಕುಟುಂಬಸ್ಥರಿಗೆ ಹೇಳಿದಾಗ, ಇನ್ನು ಮುಂದೆ ಆ ರೀತಿ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದರು. ಇದೆಲ್ಲಾ ಆದ ನಂತರವೂ ಕಳೆದ ಶುಕ್ರವಾರವೂ ನಾರಾಯಣ ನಾಯ್ಕ ಗೆಣಸು ಕೊಡುತ್ತೇನೆಂದು ಮತ್ತೆ ಬಾಲಕಿಯನ್ನು ಕರೆದಿದ್ದಾನೆ.
ಈ ವಿಚಾರ ಊರಿನವರಿಗೆ ತಿಳಿದು ನನ್ನ ಕೆಲ ಸ್ನೇಹಿತರು ದಾರಿ ಮಧ್ಯೆ ನಿಲ್ಲಿಸಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಿಯಾ ಎಂದು ಕೇಳಿದಾಗ ಹೌದು ಎಂದು ತನ್ನ ತಪ್ಪು ಒಪ್ಪಿಕೊಂಡಿದ್ದನು. ಆಗ ಆತನಿಗೆ ಅಲ್ಲಿ ಸೇರಿದ್ದ ಕೆಲವರು ಥಳಿಸಿದ್ದಾರೆ. ನಂತರ ಕಿರುಕುಳ ನೀಡಿದವನ ವಿರುದ್ಧ ದೂರು ನೀಡಲು ಮುಂದಾದಾಗ ಮಗುವಿನ ಭವಿಷ್ಯದ ದೃಷ್ಟಿಯಿಂದಾಗಿ ದೂರು ನೀಡಲಿಲ್ಲ.
ಈ ಸಂದರ್ಭದಲ್ಲಿ ಹಲ್ಲೆ ವಿಷಯ ತಿಳಿದು ಸ್ಥಳಕ್ಕೆ ಬಂದ ಜಾರಪ್ಪ ನಾಯ್ಕ ಸ್ಥಳಕ್ಕೆ ಬಂದ ಒಂದೇ ನಿಮಿಷದಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಇತ್ತ ಲೈಂಗಿಕ ಕಿರುಕುಳದ ಬಗ್ಗೆ ನಾವು ದೂರು ದಾಖಲಿಸಲು ಠಾಣೆಗೆ ತೆರಳಿದೆವು.
ಸಂಜೆ 6 ಗಂಟೆಯಾದುದರಿಂದ ಪೊಲೀಸರು ದೂರು ಸ್ವೀಕರಿಸಿಲ್ಲ. ಮನೆಗೆ ಬಂದಾಗ ಜಾರಪ್ಪ ನಾಯ್ಕ ಅವರು ಮೃತಪಟ್ಟ ಬಗ್ಗೆ ತಿಳಿಯಿತು. ನಾವು ಅವರಿಗೆ ಹಲ್ಲೆಗೈದ ಕಾರಣ ನಮ್ಮ ಮೇಲೆ ಕೇಸ್ ದಾಖಲಾಯಿತು. ಆದರೆ ವಾಸ್ತವದಲ್ಲಿ ನಾವು ಅವರಿಗೆ ಹಲ್ಲೆಯೇ ಮಾಡಿಲ್ಲ ಎಂಬ ಹೇಳಿಕೆ ನೀಡಿದ್ದಾರೆ. ಇದೇ ವೇಳೆ ನನ್ನ ಮಗಳಿಗೆ ನ್ಯಾಯ ದೊರಕಿಸುವ ಭರವಸೆ ಜೊತೆಗೆ ಅಮಾಯಕರ ಮೇಲೆ ದಾಖಲಿಸಿದ ಕೇಸ್ ಹಿಂಪಡೆಯಬೇಕು ಎಂದು ಒತ್ತಾಯ ಮಾಡಿದರು.