ರಾಜ್ಯದ ಕಾಲೇಜುಗಳಲ್ಲಿ ಪ್ರಥಮ ಪಿಯುಸಿ ದಾಖಲಾತಿ ಮಿತಿ ಹೆಚ್ಚಳ
ಬೆಂಗಳೂರು : 2022-23ನೇ ಸಾಲಿಗೆ ಮಾತ್ರ ಸೀಮಿತಗೊಳಿಸುವಂತೆ, ರಾಜ್ಯದ ಖಾಸಗಿ ಅನುದಾನಿತ ಮತ್ತು ಅನುದಾನರಹಿತ ಪದವಿ ಪೂರ್ವ ಕಾಲೇಜುಗಳಲ್ಲಿ ಪ್ರಥಮ ಪಿಯುಸಿ ತರಗತಿ ದಾಖಲಾತಿ ಮಿತಿಯನ್ನು ಹೆಚ್ಚಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ.
ಕಾಲೇಜಿನಲ್ಲಿ ಹೆಚ್ಚುವರಿ ಅಗತ್ಯ ಮೂಲಭೂತ ಸೌಕರ್ಯಗಳು ಇರುವುದನ್ನು ಖಚಿತಪಡಿಸಿಕೊಂಡು, ಅಗತ್ಯತೆ ಹಾಗೂ ಬೇಡಿಕೆಯಾನುಸಾರ, ಮಂಜೂರಾತಿ ಪಡೆದು ಪ್ರಸ್ತುತ ಬೋಧಿಸುತ್ತಿರುವ ಅನುದಾನಿತ / ಶಾಶ್ವತ ಅನುದಾನರಹಿತದ ಪ್ರತಿ ಸಂಯೋಜನೆಯ ಒಂದು ವಿಭಾಗಕ್ಕೆ 20 ಹೆಚ್ಚುವರಿ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿಸಲಾಗಿದೆ. ಹೀಗಾಗಿ 80 ರಿಂದ 100ಕ್ಕೆ ಹೆಚ್ಚಳವಾಗಲಿದೆ.
ಇನ್ನು ಪ್ರಸ್ತುತ ಶೈಕ್ಷಣಿಕ ವರ್ಷಕ್ಕೆ ಮಾತ್ರ ಸೀಮಿತಗೊಳಿಸಿ ಪ್ರತಿ ಸಂಯೋಜನೆಯ 2ನೇ ವಿಭಾಗಕ್ಕೂ ಹೆಚ್ಚುವರಿ 20 ವಿದ್ಯಾರ್ಥಿಗಳ ದಾಖಲಾತಿಗೆ ಅನುಮತಿ ನೀಡಲಾಗಿದೆ’ ಎಂದಿದೆ. ಅದರಂತೆ, ಪ್ರತಿ ಸಂಯೋಜನೆಯ ಗರಿಷ್ಠ 2 ವಿಭಾಗಕ್ಕೆ ಮಾತ್ರ ಪ್ರಥಮ ಪಿಯುಸಿಗೆ 20 ಹೆಚ್ಚುವರಿ ವಿದ್ಯಾರ್ಥಿಗಳ ದಾಖಲಾತಿ ಮಾಡಿಕೊಳ್ಳಲು ಅನುಮತಿಸಿದೆ.
ಆದೇಶದನ್ವಯ ಎಲ್ಲಾ ಜಿಲ್ಲಾ ಉಪ ನಿರ್ದೇಶಕರು ತಮ್ಮ ವ್ಯಾಪ್ತಿಯಲ್ಲಿ ಬರುವ ಅನುದಾನಿತ/ ಶಾಶ್ವತ ಅನುದಾರಹಿತ ಪದವಿ ಪೂರ್ವ ಕಾಲೇಜುಗಳಲ್ಲಿ ಸ್ವೀಕೃತಗೊಂಡಿರುವ ಪ್ರಸ್ತಾವನೆಗಳನ್ನು ಪರಿಶೀಲಿಸಿ, ಬೋಧಿಸುತ್ತಿರುವ ಪ್ರತಿ ಸಂಯೋಜನೆಯ ಒಂದು ವಿಭಾಗಕ್ಕೆ 20 ವಿದ್ಯಾರ್ಥಿಗಳ ಹೆಚ್ಚುವರಿ ಪ್ರವೇಶಾತಿಗೆ ಮಾತ್ರ ಅವಕಾಶ ನೀಡಲಾಗಿದೆ. ಪ್ರವೇಶ ಹಂತದಲ್ಲೇ ನಿಯಮಾನುಸಾರ ಪರಿಶೀಲಿಸಿ, ಸರ್ಕಾರ ವಿಧಿಸಿದ ಷರತ್ತುಗಳನ್ವಯ ಅನುಮತಿಯನ್ನು ನೀಡುವುದು. ಅನುಮತಿ ನೀಡಿರುವ ಕ್ರೋಢೀಕೃತ ಪಟ್ಟಿಯನ್ನು ನಿರ್ದೇಶನಾಯಕ್ಕೆ ಸಲ್ಲಿಸಬೇಕು. ಈ ಆದೇಶವು 2022-23ನೇ ಶೈಕ್ಷಣಿಕ ಸಾಲಿಗೆ ಮಾತ್ರ ಸೀಮಿತವಾಗಿರುತ್ತದೆ ಎಂದು ತಿಳಿಸಿದೆ.