ನಾಲ್ಕು ಚಕ್ರದ ವಾಹನ ಹೊಂದಿರುವ ಬಿಪಿಎಲ್ ಕಾರ್ಡ್ ದಾರರರಿಗೆ ಶಾಕಿಂಗ್ ನ್ಯೂಸ್
ಬಡವರಿಗೋಸ್ಕರ ಇರುವ ಬಿಪಿಎಲ್ ಕಾರ್ಡ್ ಅನ್ನು ಯಾರೂ ದುರ್ಬಳಕೆ ಮಾಡಿಕೊಳ್ಳಬಾರದು ಎಂಬ ಉದ್ದೇಶದಿಂದ, ಈಗಾಗಲೇ ಹಲವಾರು ಸರ್ಕಾರಿ ನೌಕರರು ಬಿಪಿಎಲ್ ಕಾರ್ಡ್ ಪಡೆದಿದ್ದು ಸರಿಯಾಗಿ ಪರಿಶೀಲಿಸಿದ ನಂತರ ಆ ಕಾರ್ಡ್ ಗಳನ್ನು ರದ್ದುಪಡಿಸಲಾಗುತ್ತಿದೆ. ಆದರೆ, ಇದರ ವಿರುದ್ಧ ಕಾನೂನು ಕ್ರಮ ಕೈಗೊಂಡರೂ, ಅಕ್ರಮ ನಿಲ್ಲುತ್ತಿಲ್ಲ. ಇದೀಗ ಸರ್ಕಾರ ಮತ್ತೇ ಹಲವು ಕ್ರಮಗಳನ್ನು ಕೈಗೊಂಡಿದೆ.
ಇದೀಗ ನಾಲ್ಕು ಚಕ್ರ ವಾಹನಗಳನ್ನು ಹೊಂದಿರುವಂತ ಬಿಪಿಎಲ್ ಪಡಿತರ ಚೀಟಿದಾರರ ಮಾಹಿತಿಯನ್ನು ಕಲೆ ಹಾಕುತ್ತಿದ್ದು, ಅಂತಹ ವ್ಯಕ್ತಿಗಳಿಗೆ ದಂಡವನ್ನು ಹಾಕೋದಕ್ಕಾಗಿ ಪಟ್ಟಿಯನ್ನು ತಯಾರಿಸುತ್ತಿದೆ. ಈ ಮೂಲಕ ನಾಲ್ಕು ಚಕ್ರಗಳ ವಾಹನ ಹೊಂದಿರುವ ಬಿಪಿಎಲ್ ಆಹಾರ ಪಡಿತರ ಕಾರ್ಡ್ ಹೊಂದಿರೋರಿಗೆ ಶಾಕ್ ನೀಡೋದಕ್ಕೆ ಮುಂದಾಗಿದೆ.
ನಾಲ್ಕು ಚಕ್ರ ಹೊಂದಿರುವಂತ ರಾಜ್ಯದ 12,584 ಪಡಿತರ ಚೀಟಿದಾರರಿಗೆ ಸರ್ಕಾರ ದಂಡ ಪಾವತಿಸುವಂತೆ ನೋಟಿಸ್ ಜಾರಿ ಮಾಡಲಾಗಿದೆ. ಈ ಹಿಂದೆ ರಾಜ್ಯ ಸರ್ಕಾರವು ಸೆಪ್ಟೆಂಬರ್ 3, 2019ರೊಳಗೆ ನಾಲ್ಕು ಚಕ್ರದ ವಾಹನ ಹೊಂದಿದ್ದಂತ ಈ ಪಡಿತರಚೀಟಿದಾರರಿಗೆ ಹಲವು ಬಾರಿ ಎಚ್ಚರಿಕೆ ನೀಡಿದ್ದರೂ, ಹಿಂದಿರುಗಿಸದ ಕಾರಣ, ಇದೀಗ ಸರ್ಕಾರ ದಂಡದ ಅಸ್ತ್ರವನ್ನು ಪ್ರಯೋಗಿಸಿದೆ ಎನ್ನಲಾಗುತ್ತಿದೆ.
ನಾಲ್ಕು ಚಕ್ರಗಳ ವಾಹನ ಹೊಂದಿರುವಂತ ಅಂತ್ಯೋದಯ, ಬಿಪಿಎಲ್ ಕಾರ್ಡ್ ದಾರರಿಗೆ ನೋಟಿಸ್ ನೀಡಿದ್ದು, ನೋಟಿಸ್ ತಲುಪಿದ 3 ದಿನಗಳ ಒಳಗೆ ಕಾರ್ಡ್ದಾರರು ತಾಲೂಕು ಕಚೇರಿಯ ಆಹಾರ ವಿಭಾಗಕ್ಕೆ ಹಾಜರಾಗಿ, ದಂಡದ ಮೊತ್ತವನ್ನು ಪಾವತಿಸುವಂತೆ ಸೂಚಿಸಲಾಗಿದೆ. ದಂಡದ ಮೊತ್ತವನ್ನು ಮಾರುಕಟ್ಟೆ ದರಕ್ಕೆ ಅನುಗುಣವಾಗಿ ವಿಧಿಸಲಾಗಿದೆ. ಈ ದಂಡ ಕಟ್ಟಿದ ಬಳಿಕ ಅಂತ್ಯೋದಯ, ಬಿಪಿಎಲ್ ಕಾರ್ಡ್ ಅನ್ನು ಎಪಿಎಲ್ ಆಗಿ ಪರಿವರ್ತಿಸಲಾಗುತ್ತದೆ ಎಂದು ತಿಳಿಸಿದೆ.
ಬಡತನ ರೇಖೆಗಿಂತ ಕೆಳಗಿರುವ ಅರ್ಹ ಫಲಾನುಭವಿಗಳಿಗೆ ಬಿಪಿಎಲ್ ಕಾರ್ಡ್ ನೀಡಲಾಗುತ್ತಿದ್ದು. ಇದನ್ನು ದುರುಪಯೋಗಪಡಿಸಿಕೊಂಡವರ ವಿರುದ್ಧ ರಾಜ್ಯಸರ್ಕಾರ ಸೂಕ್ತ ಕ್ರಮ ಕೈಗೊಂಡಿದೆ.