ಮರದ ದಿಮ್ಮಿ ಬೈಕ್ ಮೇಲೆ ಬಿದ್ದು ನವವಿವಾಹಿತ ದಾರುಣ ಸಾವು| ಶಾಕ್ ನಲ್ಲಿ ಗರ್ಭಿಣಿ ಪತ್ನಿ

ರಸ್ತೆಯಲ್ಲಿ ಹೋಗುತ್ತಿದ್ದಾಗ ಬೈಕ್ ಮೇಲೆ ಮರದ ದಿಮ್ಮಿ ಬಿದ್ದು, ನವವಿವಾಹಿತನೋರ್ವ ಮೃತಪಟ್ಟ ದಾರುಣ ಘಟನೆಯೊಂದು ನಡೆದಿದೆ. ಈ ಘಟನೆ ಶುಕ್ರವಾರ ಬೆಳಗ್ಗೆ ನಾಗರಬಾವಿಯಲ್ಲಿ ಸಂಭವಿಸಿದೆ.

 

ಮುಕೇಶ್ (28) ಎಂಬಾತನೇ ಮೃತ ದುರ್ದೈವಿ. ಈತನಿಗೆ 7 ತಿಂಗಳ ಹಿಂದಷ್ಟೇ ಮದುವೆ ಆಗಿತ್ತು. ಈತನ ಪತ್ನಿ 5 ತಿಂಗಳ ಗರ್ಭಿಣಿ‌. ಇಡೀ ಕುಟುಂಬ ಕಂದನ ಸ್ವಾಗತಿಸೋಕೆ ರೆಡಿಯಾಗಿತ್ತು. ಆದರೆ ವಿಧಿ ಈತನ ಬಾಳಲ್ಲಿ ಚಿಕ್ಕ ಪ್ರಾಯದಲ್ಲೇ ಸಾವನ್ನು ನೀಡಿತ್ತು. ನವದಂಪತಿ ಬಾಳಲ್ಲಿ ಇದೊಂದು ಘೋರ ದುರಂತ ಎಂದೇ ಹೇಳಬಹುದು.

ಮುಕೇಶ್ ತಮಿಳುನಾಡಿನ ತಿರುವಣ್ಣಾಮಲೈ ಮೂಲದರು. ಬೆಂಗಳೂರಿನ ನಂದಿನಿ ಲೇಔಟ್‌ನಲ್ಲಿ ವಾಸ. ತಿರುವಣ್ಣಾಮಲೈನಲ್ಲಿರುವ ತಾಯಿ ಮತ್ತು ಅಜ್ಜಿಯನ್ನು ನೋಡಲು ಮುಕೇಶ್ ಹೋಗಿದ್ದ. ವಾಪಸ್ ಬೆಂಗಳೂರಿಗೆ ಶುಕ್ರವಾರ ಬೆಳಗ್ಗೆ ಆಗಮಿಸಿದ ಮುಕೇಶ್‌ನನ್ನು ಮನೆಗೆ ಕರೆದೊಯ್ಯಲು ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಡೇವಿಡ್ ಎಂಬಾತ ಬೈಕ್ ತಂದಿದ್ದ. ಡೇವಿಡ್ ಬೈಕ್ ಚಲಾಯಿಸುತ್ತಿದ್ದ. ಬೈಕ್‌ನ ಹಿಂಬದಿಯಲ್ಲಿ ಮುಕೇಶ್ ಕುಳಿತ್ತಿದ್ದ.

ಬೃಹತ್ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ರಸ್ತೆಯಲ್ಲಿ ಪಲ್ಟಿಯಾಗಿದ್ದು, ದಿಮ್ಮಿಗಳು ಎರಡು ಬೈಕ್‌ಗಳ ಮೇಲೆ ಬಿದ್ದಿವೆ. ಹಾಗಾಗಿ ಬೈಕ್‌ನಲ್ಲಿದ್ದ ಮುಕೇಶ್ ಗಂಭೀರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಡೇವಿಡ್ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಮತ್ತೊಂದು ಬೈಕ್ ಸವಾರ ಶಿವು(26) ಎಂಬಾತನಿಗೂ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕಾಮಾಕ್ಷಿಪಾಳ್ಯ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮುಕೇಶ್ ಸಾವಿನ ಸುದ್ದಿ ಆತನ ಕುಟುಂಬಸ್ಥರನ್ನು ದಿಗ್ಭ್ರಮೆಗೊಳಪಡಿಸಿದೆ.

Leave A Reply

Your email address will not be published.