ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ : ಮೊದಲ ಎಸೆತದಲ್ಲೇ ಫೈನಲ್ ತಲುಪಿದ ಭಾರತದ ಚಿನ್ನದ ಪದಕ ವೀರ ನೀರಜ್ ಚೋಪ್ರಾ
ಅಮೆರಿಕದ ಒರೆಗಾನ್‌ನ ಯುಜೀನ್‌ನಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2022 ರಲ್ಲಿ ಟೋಕಿಯೊ ಒಲಿಂಪಿಕ್ಸ್ ನ ಭಾರತದ ಚಿನ್ನದ ಪದಕ ವೀರ ನೀರಜ್ ಚೋಪ್ರಾ ಅವರು ವಿಶ್ವ ಅಥ್ಲೆಟಿಕ್ ಚಾಂಪಿಯನ್ ಶಿಪ್ ನ ಫೈನಲ್ ತಲುಪಿದ್ದಾರೆ.
ಭಾರತದ ನೀರಜ್ ಚೋಪ್ರಾ ಅವರು ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನ ಪುರುಷರ ಜಾವೆಲಿನ್ ಥ್ರೋನಲ್ಲಿ ಫೈನಲ್‌ಗೆ ಪ್ರವೇಶ ಪಡೆದಿದ್ದು, ಅರ್ಹತಾ ಸುತ್ತಿನಲ್ಲಿ 88.39 ಮೀಟರ್ ದೂರದ ಸಾಧನೆ ಗೈದ ಚೋಪ್ರಾ ಮೊದಲ ಎಸೆತದಲ್ಲೇ ಫೈನಲ್ ತಲುಪಿದ ಸಾಧನೆ ಮಾಡಿದ್ದಾರೆ.
ನೀರಜ್ ಚೋಪ್ರಾ ಅವರು ಜಾವೆಲಿನ್ ಅರ್ಹತೆಯನ್ನು ಪಡೆದ ಮೊದಲ ಅಥ್ಲೀಟ್ ಆಗಿದ್ದು, ಫೈನಲ್ ಗೆ ಅರ್ಹತೆ ಪಡೆಯಲು ಚೋಪ್ರಾ 83.5 ಮೀಟರ್ ಗೆ ಜಾವೆಲಿನ್ ಎಸೆಯಬೇಕಿತ್ತು. ಆದರೆ ನೀರಜ್ ಚೋಪ್ರಾ ಅವರು ತಮ್ಮ ಮೊದಲ ಪ್ರಯತ್ನದಲ್ಲೇ 88.39 ಮೀ ದೂರಕ್ಕೆ ಜಾವೆಲಿನ್ ಎಸೆದು ಚೊಚ್ಚಲ ವಿಶ್ವ ಚಾಂಪಿಯನ್‌ಶಿಪ್ ನ ಫೈನಲ್ ಪ್ರವೇಶ ಮಾಡಿದರು.
ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಪಡೆದಿರುವ ನೀರಜ್ ಚೋಪ್ರಾ, ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿಯೂ ಚಿನ್ನದಪದಕದ ನಿರೀಕ್ಷೆ ಹುಟ್ಟಿಸಿದ್ದಾರೆ. ಭಾರತ ಇದುವರೆಗೂ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಪಡೆದಿಲ್ಲ. ಚೋಪ್ರಾ ಪದಕ ಗೆದ್ದರೆ ಅವರು ಅಂಜು ಬಾಬಿ ಜಾರ್ಜ್ ನಂತರ ಪದಕ ಗೆದ್ದ ಎರಡನೇ ಭಾರತೀಯ ಎಂಬ ಗರಿಮೆಗೆ ಪಾತ್ರರಾಗಲಿದ್ದಾರೆ.
9 ವರ್ಷಗಳ ಇತಿಹಾಸ ಹೊಂದಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಪದಕ ಗೆದ್ದಿದ್ದು ಕೇವಲ 1 ಬಾರಿ ಮಾತ್ರ. 2003 ರಲ್ಲಿ ಪ್ಯಾರಿಸ್ನಲ್ಲಿ ನಡೆದ ಕೂಟದಲ್ಲಿ ಲೆಜೆಂಡರಿ ಲಾಂಗ್ ಜಂಪರ್ ಅಂಜು ಬಾಬಿ ಜಾರ್ಜ್ ಅವರು 6.70 ಮೀ ಜಿಗಿತದೊಂದಿಗೆ ಕಂಚಿನ ಪದಕ ಗೆದ್ದುಕೊಂಡಿದ್ದರು. ಇದಾದ ಬಳಿಕ ಯಾವುದೇ ಕ್ರೀಡಾಪಟುವು ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ತಮ್ಮ ಸಾಮರ್ಥ್ಯವನ್ನು ತೆರೆದಿಡಲು ಸಾಧ್ಯವಾಗಿಲ್ಲ. ಇದೀಗ ಸುದೀರ್ಘ ಇತಿಹಾಸದಲ್ಲಿ ದೇಶದ ಮೊಟ್ಟಮೊದಲ ಟ್ರ್ಯಾಕ್ ಮತ್ತು ಫೀಲ್ಡ್ ವಿಶ್ವ ಚಾಂಪಿಯನ್ ಆಗುವ ಗುರಿಯನ್ನು ಹೊಂದಿರುವ ನೀರಜ್ ಚೋಪ್ರಾ ಫೈನಲ್ ಪ್ರವೇಶಿಸಿದ್ದಾರೆ.
ಅರ್ಹತಾ ಸುತ್ತಿನಲ್ಲಿ 32 ಜನರಿದ್ದು, ನೀರಜ್ ಚೋಪ್ರಾ ಸೇರಿದಂತೆ 12 ಮಂದಿ ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ನೀರಜ್ ಚೋಪ್ರಾ ಪದಕ ಗೆದ್ದರೆ ಅದು ಐತಿಹಾಸಿಕ ಸಾಧನೆಯಾಗಲಿದೆ. 39 ವರ್ಷಗಳ ವಿಶ್ವ ಅಥ್ಲೆಟಿಕ್ಸ್ ಇತಿಹಾಸದಲ್ಲಿ ಭಾರತ ಪದಕ ಗೆದ್ದಿರುವುದು ಕೇವಲ ಒಂದು ಬಾರಿ ಮಾತ್ರ. ಹೀಗಾಗಿ ಪದಕ ಗೆದ್ದ ಭಾರತದ ಎರಡನೇ ಪುರುಷ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.