ಮಸಾಜ್ ಆಂಟಿಯ ಕಮಾಲ್ | ಉಂಡೂ ಹೋದ, ಕೊಂಡೂ ಹೋದ, ವೃದ್ಧರೇ ಈಕೆಯ ಟಾಪ್ ಟಾರ್ಗೆಟ್
ಮನೆಗೆಲಸ ಮಾಡುವವರು ಎಂಬ ಸೋಗಿನಲ್ಲಿ ವಯೋವೃದ್ಧರಿಗೆ ಮಸಾಜ್ ಮಾಡುವುದಾಗಿ ಹೇಳಿ, ನಂತರ ಚಿನ್ನಾಭರಣ ದೋಚುತ್ತಿದ್ದ ಚಾಲಾಕಿ ಮಹಿಳೆಯೊಬ್ಬಳನ್ನು ಮಾರತ್‌ಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶ ರಾಜ್ಯದ ಕದ್ರಿ ತಾಲೂಕಿನ ಅಕ್ಕಿಂಮಣಿ ಅಲಿಯಾಸ್ ಲಕ್ಷ್ಮಿ ಬಂಧಿತ ಆರೋಪಿ. ಈಕೆಯಿಂದ 13 ಲಕ್ಷ ಮೌಲ್ಯದ 271 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ.
ಕೆಲ ದಿನಗಳ ಹಿಂದೆ ಮುನೇನಕೊಳಲು ಸಮೀಪದ ಇಸ್ರೋ ಲೇಔಟ್‌ನಲ್ಲಿ ವೃದ್ಧರೊಬ್ಬರ ಮನೆಗೆ ಕೆಲಸಕ್ಕೆ ಸೇರಿದ ಆರೋಪಿ, ಬಳಿಕ ಮಸಾಜ್ ನೆಪದಲ್ಲಿ ವೃದ್ಧರನ್ನು ಗಮನ ಬೇರೆಡೆ ಸೆಳೆದು ಚಿನ್ನಾಭರಣ ದೋಚಿದ್ದಳು ಎಂದು ಪೊಲೀಸರು ಹೇಳಿದ್ದಾರೆ.
ಲಕ್ಷ್ಮೀ ವೃತ್ತಿಪರ ಕ್ರಿಮಿನಲ್ ಆಗಿದ್ದು, ಆಕೆಯ ವಿರುದ್ಧ 4 ಪ್ರಕರಣಗಳು ದಾಖಲಾಗಿವೆ. ಈಕೆ ವಸತಿ ಪ್ರದೇಶಗಳಲ್ಲಿ ಸುತ್ತಾಡಿ ವಯಸ್ಸಾದವರಿರುವ ಮನೆಗಳಿಗೆ ಕೆಲಸಕ್ಕೆ ಸ್ಕೆಚ್ ಹಾಕಿ ಮನೆಕೆಲಸಕ್ಕೆ ಸೇರುತ್ತಿದ್ದಳು. ಒಂದೆರಡು ದಿನಗಳು ಚೆನ್ನಾಗಿ ಕೆಲಸ ಮಾಡಿ, ಮನೆ ಮಾಲಿಕರ ವಿಶ್ವಾಸ ಸಂಪಾದಿಸುತ್ತಿದ್ದಳು. ಅನಂತರ ತನ್ನ ಕೈ ಚಳಕ ತೋರಿಸುತ್ತಿದ್ದಳು. ಹೀಗೆ ಮೈ ನೋವಿನಿಂದ ಬಳಲುತ್ತಿದ್ದ ಮನೆ ಮಾಲಿಕರ ತಾಯಿಗೆ ಬಾಡಿ ಮಸಾಜ್ ಮಾಡುತ್ತೇನೆ ಎಂದು ನಂಬಿಸಿ ಅವರ ಕತ್ತಿನಲ್ಲಿದ್ದ 75 ಗ್ರಾಂ ಚಿನ್ನದ ಸರವನ್ನು ಬಿಚ್ಚಿಸಿ ಮಸಾಜ್ ಮಾಡಿದ್ದಳು.
ಆನಂತರ ಸ್ನಾನ ಮಾಡುವಂತೆ ಕಳುಹಿಸಿ ಅವರು ಸ್ನಾನಗೃಹದಿಂದ ಹೊರ ಬರುವ ವೇಳೆ ಇನ್ನುಳಿದ ಆಭರಣ ಕದ್ದು ಕಾಲ್ಕೀಳುತ್ತಿದ್ದಳು. ವೃದ್ಧರು ಹೊರಬರುವಷ್ಟರಲ್ಲಿ ಚಿನ್ನದ ಸರ ಕದ್ದು ಪರಾರಿ ಆಗಿದ್ದಳು. ಕದ್ದ ಚಿನ್ನಾಭರಣವನ್ನು ಮಾರಾಟ ಮಾಡಿ ಬಂದ ಹಣದಲ್ಲಿ ತನ್ನ ಜಮೀನಿನಲ್ಲಿ ಬೋರ್‌ವೆಲ್ ಕೊರಿಸಿ ತೋಟ ಮಾಡಿದ್ದಳು. ಹೀಗೆ ಹಣದ ಅವಶ್ಯಕತೆ ಇದ್ದಾಗ ಬೆಂಗಳೂರಿಗೆ ಬಂದು ಕಳ್ಳತನ ಕೃತ್ಯ ಎಸಗಿ ಪರಾರಿಯಾಗುತ್ತಿದ್ದಳು. ಈಕೆ ಕೆ.ಆರ್.ಪುರ, ಮಾರತ್ತಹಳ್ಳಿ ಹಾಗೂ ರಾಜಾಜಿನಗರ ಸೇರಿದಂತೆ ನಾಲ್ಕು ಕಡೆ ಮನೆಕಳವು ಮಾಡಿದ್ದಳು ಎಂದು ಪೊಲೀಸರು ಹೇಳಿದ್ದಾರೆ.