ಸರ್ಕಾರದ ಸುತ್ತೋಲೆಯಲ್ಲಿ ‘ಕಾ ‘ ಗೆ ಗುಣಿತ ! | ಕೇವಲ 80 ಪದಗಳ ಒಂದು ಪುಟದಲ್ಲಿ 8 ದೋಷಗಳು !

Share the Article

ಕರ್ನಾಟಕ ಸರ್ಕಾರದ ಅಧಿಕಾರಿಗಳ ಮತ್ತು ಕೆಲ ನೌಕರ ವರ್ಗಗಳ ಕನ್ನಡ ಪ್ರೌಢಿಮೆಗೆ ಒಂದು ಹೊಸ ಕೈಗನ್ನಡಿ ದೊರೆತಿದೆ. ಅದು ನಿನ್ನೆ ಸರ್ಕಾರವು ಸರ್ಕಾರಿ ಕಚೇರಿಗಳಲ್ಲಿ ಮೊಬೈಲ್‌ನಲ್ಲಿ ಫೋಟೋ, ವೀಡಿಯೋಗೆ ನಿರ್ಬಂಧ ಆದೇಶವನ್ನು ಸದ್ಯ ರಾಜ್ಯ ಸರ್ಕಾರ ಹಿಂಪಡೆದು ಆದೇಶ ಹೊರಡಿಸಿ ಕಳಿಸಿದ ಸುತ್ತೋಲೆ ! ಅದರಲ್ಲಿ 80 ಪದದ ಪುಟಾಣಿ ಸುತ್ತೋಲೆಯಲ್ಲಿ ಒಟ್ಟು 8 ಕಾಗುಣಿತದ ಕಾಗೆ ಕುಣಿತಗಳು !!

ಸರ್ಕಾರಿ ಕಚೇರಿಗಳಲ್ಲಿ ಮೊಬೈಲ್‌ನಲ್ಲಿ ಫೋಟೋ, ವೀಡಿಯೋಗೆ ನಿರ್ಬಂಧ ಆದೇಶವನ್ನು ಸದ್ಯ ರಾಜ್ಯ ಸರ್ಕಾರ ಹಿಂಪಡೆದುಕೊಂಡಿದೆ. ಈ  ಬೆನ್ನಲ್ಲೇ ಸರ್ಕಾರ ಹೊಸ ಸುತ್ತೋಲೆಯನ್ನು ಹೊರಡಿಸಿದೆ. ಸರ್ಕಾರಿ ಕಚೇರಿಯಲ್ಲಿ ಫೋಟೊ, ವೀಡಿಯೋ ಚಿತ್ರೀಕರಣ ಬಂದ್ ವಿಚಾರಕ್ಕೆ ಸಂಬಂಧಿಸಿ ಆದೇಶ ವಾಪಸ್ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅಧಿಕಾರಿಗಳನ್ನು ತೀವ್ರ ತರಾಟೆಗೆತ್ತಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ರಾತ್ರೋರಾತ್ರಿ ವಿಧಾನಸೌಧಕ್ಕೆ ಬಂದು ನಿದ್ದೆಗಣ್ಣಿನಲ್ಲಿ ಅಧಿಕಾರಿ ಆದೇಶ ವಾಪಸ್ ಸೂಚನೆಯನ್ನು ಟೈಪ್ ಮಾಡಿದ್ರಾ ಅಥವಾ ಅಧಿಕಾರಿಗೆ ಕನ್ನಡ ಟೈಪಿಂಗ್ ಸರಿಯಾಗಿ ಬರುತ್ತಿಲ್ಲವೇ ಎಂದು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಯಾಗುತ್ತಿದೆ.

ಏಕೆಂದರೆ ಚಿತ್ರೀಕರಣ ಬ್ಯಾನ್ ಆದೇಶ ವಾಪಸ್ ಪಡೆದಿರುವ ಪತ್ರದಲ್ಲಿ ಪ್ರತಿಯೊಂದು ಅಕ್ಷರವೂ ತಪ್ಪು ತಪ್ಪಾಗಿ ಟೈಪ್ ಮಾಡಲಾಗಿದೆ. ಆದರೆ ಈ ಆದೇಶ ಪ್ರತಿಯಲ್ಲಿ ಒಂದು ಪುಟದಲ್ಲಿ 8 ಪದಗಳು ಕಾಗುಣಿತ ದೋಷಗಳು ಪತ್ತೆಯಾಗಿದೆ. ಈ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರದ ಆದೇಶದಲ್ಲಿರುವ ದೋಷಭರಿತ ಅಕ್ಷರ ಸಮೂಹಗಳು ಯಾವುವು ಗೊತ್ತಾ ?

ನಡವಳಿಗಳು ( ನಡಾವಳಿಗಳು ), ಪ್ರಸತಾವನೆ (ಪ್ರಸ್ತಾವನೆ), ಮೇಲೇ ( ಮೇಲೆ ), ಬಾಗ – 1 ( ಭಾಗ – 1), ಕರ್ನಾಟಾ ರಾಜ್ಯಪಾಲರ ( ಕರ್ನಾಟಕ ), ಕರ್ನಾಟಾ ಸರ್ಕಾರ ( ಕರ್ನಾಟಕ ಸರ್ಕಾರ ) ಇವು ಬೊಮ್ಮಾಯಿ ಸರ್ಕಾರದಲ್ಲಿರುವ ಕಾಗೆ ಕುಣಿತಗಳು !

ಒಬ್ಬರು, ‘ ನಿಮ ಶರ್ಕಾರಾಕ್ ಮತ್ ನೋವ್ ಖಾರ ವುಂದಕ್ ಮೊದುಳು ಖನಡಾ ಖಲಿಸ ಬೆಕ್ಕು (ನಿಮ್ಮ ಸರ್ಕಾರಕ್ಕೆ ಮತ್ತು ನೌಕರ ವೃಂದಕ್ಕೆ ಮೊದಲು ಕನ್ನಡ ಕಲಿಸಬೇಕು ) ಎಂದು ತಮಾಷೆಯ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.

ಕರ್ನಾಟಕ ಹೆಸರನ್ನು ಸರ್ಕಾರವೇ ತಪ್ಪಾಗಿ ಬರೆದಿದ್ದು, ಆದೇಶದಲ್ಲಿ ಕರ್ನಾಟಕ ಬದಲು ʻ ಕರ್ನಾಟಾʼ ಎಂದು ಪಸ್ತಾವನೆ ಬದಲು ʻ ಪ್ರಸತ್ತಾವನೆ ʼಎಂದು ಉಲ್ಲೇಖವನ್ನು ಮಾಡಿದ್ದಾರೆ. ಇನ್ನೂ ಬಾಗ, ಕತವ, ಮೇಲೇ, ಆಡಳಿತ ಹೀಗೆ ಕಾಗುಣಿತ ತಪ್ಪುಗಳ ಸರಮಾಲೆಗೆ ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಕಗ್ಗೊಲೆ ಮಾಡಲಾಗ್ತಿದೆ ಎಂದು ಕಿರಿಕಾರಿದ್ದಾರೆ. ಸಾಮಾಜಿಕ ಜಾಲತಾಣಗಳು ಸರ್ಕಾರದ ಮೇಲೆ ಮುಗಿ ಬಿದ್ದಿವೆ.

Leave A Reply