ಓದೋದ್ರಲ್ಲಿ ಮಾತ್ರವಲ್ಲ, ‘ಹೀರೋ’ ದ್ರಲ್ಲೂ ದಕ್ಷಿಣ ಕನ್ನಡ ಅಗ್ರಸ್ಥಾನದಲ್ಲಿ | ದಿನವೊಂದಕ್ಕೆ 1 ಲಕ್ಷ ಲೀಟರ್ ‘ ಬೀರ್’ ಬಲ್ಲರ ಊರೆಂಬ ಹೆಗ್ಗಳಿಕೆ !!
ದಕ್ಷಿಣಕನ್ನಡದ ಹುಡುಗರು ಪಟ್ಟು ಹಿಡಿದು ಓದಿಗೆ ಕೂತರೆ ಔಟ್ ಆಫ್ ಔಟ್ ಮಾರ್ಕು ಬಾಚಿಕೊಂಡು ಬರುವವರು. ಅದಕ್ಕೇ ಅಲ್ವೇ, ಪಿಯುಸಿಯಂತಹ ಮಹತ್ತರ ಘಟ್ಟದಲ್ಲಿ ರಾಜ್ಯಕ್ಕೇ ನಂಬರ್-1 ಆಗಿ ನಿಂತಿರುವುದು ? ಇನ್ನೊಂದೆಡೆ, ಇಳಿಸಂಜೆಯ ಹೊತ್ತಿಗೆ ಒಂದೆರಡು ಪೆಗ್ಗು ಗಂಟಲಲ್ಲಿ ಬಿಟ್ಟುಕೊಂಡರೂ ತಟ್ಟಾಡದೆ, ಔಟಾಗದೆ ಮನೆ ಸೇರುವವರು. ಈಗ ಇಲ್ಲಿನ ಯುವಕರು ಮತ್ತು ಚಿರಯವ್ವನದ ಮದ್ಯ ಪ್ರಿಯರು ಮದ್ಯದ ಪಂದ್ಯದಲ್ಲಿ ಕೂಡಾ ಅಗ್ರಸ್ಥಾನ ಕಾದುಕೊಂಡಿದ್ದಾರೆ. ದಕ್ಷಿಣ ಕನ್ನಡವೊಂದರಲ್ಲೇ ದಿನಕ್ಕೆ ಬರೋಬ್ಬರಿ 1 ಲಕ್ಷ ಲೀಟರುಗಳಷ್ಟು ಮದ್ಯ ಸೀಸೆಯಿಂದ ಗ್ಲಾಸಿಗೆ, ನಂತರ ಗ್ಲಾಸಿನಿಂದ ಮೀಸೆಯ ಮರೆಯಲ್ಲಿ ಕೆಳಕ್ಕೆ ಇಳಿದು ಖಾಲಿಯಾಗಿ ಹೋಗುತ್ತಿದೆ. ಕರಾವಳಿಯ ಮಂದಿ ಕೇವಲ ಓದಿನಲ್ಲಿ ಮುಂದಿದ್ದು ಅಂಕ ಪಡೆಯುವುದರಲ್ಲಿ ಮಾತ್ರ ರಾಜ್ಯಕ್ಕೆ ಪ್ರಥಮ ಅಲ್ಲ. ಪಿಡ್ಕು(ತುಳು ಭಾಷೆಯಲ್ಲಿ ಡ್ರಿಂಕ್ಸ್) ಹಾಕುವುದರಲ್ಲೂ ನಾವೇ ಮುಂದು ಎಂದು ಈಗ ನಿರೂಪಿಸಿದ್ದಾರೆ.
ಸರಾಸರಿ ಅಂದಾಜು 2.2 ಕೋಟಿ ಲೀಟರುಗಳ ವಿಸ್ಕಿ, ಬ್ರಾಂಡಿ ರಮ್ಮು ಮುಂತಾದ ಹಾರ್ಡ್ ಲಿಕ್ಕರ್ ಅನ್ನು ಮಂಗಳೂರಿನ ಮಂದಿ ಖಾಲಿ ಮಾಡುತ್ತಾರಂತೆ. ಅಂದರೆ ದಿನದ ಲೆಕ್ಕದಲ್ಲಿ ನೋಡಿದರೆ, 60,000 ಲೀಟರ್ ಹಾರ್ಡ್ ಲಿಕ್ಕರ್ ಮದ್ಯ ದಕ್ಷಿಣ ಕನ್ನಡ ಒಂದರಲ್ಲೇ ಗಂಟಲು ಸೇರಿ ಆವಿಯಾಗುತ್ತದೆ. ಅದೇ ಬಿಯರು ಸೇವನೆಯ ಲೆಕ್ಕವನ್ನು ಗಮನಿಸಿದರೆ, ತಿಂಗಳಿಗೆ ಬರೋಬ್ಬರಿ 1.4 ಕೋಟಿ ಲೀಟರ್ಗಳ ಬೀರು ನೊರೆ ಸಮೇತ ಕರಾವಳಿ ಪಿಡ್ಕು ಪ್ರಿಯರ ಹೊಟ್ಟೆ ಸೇರುತ್ತದೆ.
ಅಬಕಾರಿ ಇಲಾಖೆಯ ಅಂಕಿಅಂಶಗಳ ಪ್ರಕಾರ, ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಲ್ಲಿ ಸರಾಸರಿ 25 ಲಕ್ಷ ಬಾಕ್ಸ್ ಹಾರ್ಡ್ ಡ್ರಿಂಕ್ಸ್ ಮದ್ಯವನ್ನು ಸೇವಿಸಲಾಗಿದೆ. ವರ್ಷಕ್ಕೆ ಸರಾಸರಿ 18 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗುತ್ತಿದೆ. ಈ ಆರ್ಥಿಕ ವರ್ಷದಲ್ಲಿ ಸುಮಾರು 370 ಕೋಟಿ ರೂಪಾಯಿಯಷ್ಟು ಆದಾಯ ಕೇವಲ ದಕ್ಷಿಣ ಕನ್ನಡ ಜಿಲ್ಲೆಯಿಂದ ಮದ್ಯ ಮಾರಾಟದಿಂದ ಬಂದಿದೆ. ಕರ್ನಾಟಕದಲ್ಲಿ ದಕ್ಷಿಣ ಕನ್ನಡವೂ ಇತರ ಜಿಲ್ಲೆಗಳ ಹೋಲಿಕೆಯಲ್ಲಿ ಅತ್ಯಂತ ಹೆಚ್ಚ ಮದ್ಯದ ಆದಾಯ ನೀಡುವ ಜಿಲ್ಲೆಯಾಗಿದೆ.
ಜಿಲ್ಲೆಯಲ್ಲಿ 180 ಎಂಎಲ್ ಸ್ಯಾಚೆಟ್ ಅಥವಾ ಬಾಟಲಿ ಮದ್ಯಗಳು ಅತಿ ಹೆಚ್ಚು ಮಾರಾಟವಾಗುತ್ತಿವೆ ಎಂಬ ಮಾಹಿತಿ ಲಭ್ಯ ಆಗಿದೆ.
ದಕ್ಷಿಣ ಕನ್ನಡವೂ ಕೇರಳ-ಕರ್ನಾಟಕದ ಗಡಿಭಾಗದ ಪ್ರದೇಶ ಆದುದರಿಂದ, ಕೇರಳದವರು ಕೂಡಾ ಮದ್ಯ ಸೇವನೆ ಮಾಡುವವರು ಜಿಲ್ಲೆಯಿಂದಲೇ ಹೆಚ್ಚಾಗಿ ಮದ್ಯ ಖರೀದಿಸುತ್ತಾರೆ. ಕೋವಿಡ್ ಸಾಂಕ್ರಾಮಿಕ ರೋಗದಿಂದ ಈ ಭಾಗದಲ್ಲಿ ಖರೀದಿ ಕಡಿಮೆಯಾಗಿದ್ದು, ಇಲ್ಲಿನ ವ್ಯಾಪಾರ ಇನ್ನಷ್ಟೇ ಕುದುರಬೇಕಿದೆ ಎಂದು ಅಬಕಾರಿ ಇಲಾಖೆಯ ಉಪ ಆಯುಕ್ತ ಬಿಂದುಶ್ರೀ ಪಿ ಹೇಳಿದ್ದಾರೆಂದು ‘ಟೈಮ್ಸ್ ಆಫ್ ಇಂಡಿಯಾ’ ಹೇಳಿದೆ.
ಕಳೆದ ಐದು ವರ್ಷಗಳಲ್ಲಿ ಮದ್ಯದ ಅಂಗಡಿಗಳ ಸಂಖ್ಯೆ 463 ಇದ್ದದ್ದು ಈಗ 520 ಆಗಿದೆ. 2017-2018ರ ಆರ್ಥಿಕ ವರ್ಷದಿಂದ ಮದ್ಯದ ಮಾರಾಟವು ಸ್ಥಿರವಾಗಿದೆ. 2020-21ರವರಗೆ ವಾರ್ಷಿಕವಾಗಿ ಸರಾಸರಿ 25 ಲಕ್ಷ ಬಾಕ್ಸ್ ಗಳು (ಕೇಸ್) ಮಾರಾಟವಾಗಿವೆ. ಕೋವಿಡ್ ಕಾರಣದಿಂದ ಮದ್ಯದ ಅಂಗಡಿಗಳು ಮುಚ್ಚಿದ್ದು, ಕೇವಲ 22 ಲಕ್ಷಕ್ಕೆ ಪಟ್ಟಣಗಳು ಮಾರಟವಾಗಿದ್ದವು. ಆದರೆ ಈ ಆರ್ಥಿಕ ವರ್ಷದಲ್ಲಿ (2021-2022) 27 ಲಕ್ಷ ಬಾಕ್ಸ್‌ಗಳು ಮಾರಟವಾಗಿವೆ. ಕಳೆದ ಐದು ವರ್ಷಗಳಲ್ಲಿ ಮದ್ಯ ಮಾರಾಟದ ಆದಾಯ 285 ಕೋಟಿಯಿಂದ 370 ಕೋಟಿಗೆ ಏರಿಕೆಯಾಗಿದೆ ಎಂದು ಅಂಕಿ ಅಂಶಗಳು ವಿವರಿಸುತ್ತಿವೆ.
ವಿಶೇಷ ಎಂದರೆ, ಈ ಆದಾಯವು ಅತ್ಯಂತ ಅಗ್ಗದ ದರದ ಮದ್ಯ ಮಾರಾಟದಿಂದ ಬಂದಿದೆ. ದಕ್ಷಿಣ ಕನ್ನಡದಲ್ಲಿ ಅತ್ಯಂತ ಅಗ್ಗದಲ್ಲಿ ಸಾಚಟ್ ಮದ್ಯ ದೊರೆಯುತ್ತಿದ್ದು, ಒಟ್ಟಾರೆ ಮದ್ಯಸೇವನೆಯಲ್ಲಿ ಪ್ರತಿಶತ 85 ಪರ್ಸೆಂಟ್ ಇದೇ ಕೆಟಗರಿಯಿಂದ ಬಂದಿದೆ. ಕೇವಲ ಮೂರು ಪ್ರತಿಶತ ಮದ್ಯವು ಪ್ರೀಮಿಯಂ, ಡೀಲಕ್ಸ್, ಸ್ಕಾಚ್ ಮತ್ತು ಸಿಂಗಲ್ ಮಾಲ್ಟ್ ವಿಭಾಗದಿಂದ ಮಾರಲ್ಪಟ್ಟಿವೆ. ಏಪ್ರಿಲ್ , ಮೇ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ ಅತ್ಯಂತ ಅಧಿಕವಾಗಿ ಇಲ್ಲಿ ಮದ್ಯದ ಮಾರಾಟ ದಕ್ಷಿಣಕನ್ನಡದಲ್ಲಿ ಗರಿ ಗೆದರುತ್ತದೆ. ಭರ್ಜರಿ ಫಿಡ್ಕ್ ಸೇವನೆ ಈ ಮೂರು ತಿಂಗಳುಗಳಲ್ಲಾಗುತ್ತದೆ. ಬಹುಷಃ ತುಳುನಾಡಿನ ಹಬ್ಬಗಳ ಅಂತ್ಯದ ಸಮಯ- ಪತ್ತನಾಜೆ ಗೆ ಮೊದಲು ಭೂತದ ತಂಬಿಲ, ಕೋಲ, ಭೂತಕ್ಕೆ ಬಡಿಸುವ ಕಾರ್ಯಕ್ರಮ, ನಿಶ್ಚಿತಾರ್ಥ, ಮದುವೆ -ಹೀಗೆ ಎಲ್ಲಾ ಹಬ್ಬಗಳಲ್ಲೂ ಮದ್ಯಕ್ಕೆ ನೇರ ಪ್ರವೇಶ ಉಂಟು. ಬ್ರಾಹ್ಮಣ, ಜೈನ ಮತ್ತು ಕೊಂಕಣಿ ಜನರನ್ನು ಹೊರತುಪಡಿಸಿದರೆ ಮದ್ಯವರ್ಜಕ ಸಮುದಾಯವನ್ನು ಹುಡುಕೋದು ಕಷ್ಟ. ಜುಲೈ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳಲ್ಲಿ ಇಲ್ಲಿ ಮದ್ಯದ ವ್ಯಾಪಾರ ಮತ್ತು ಸೇವನೆ ಕಡಿಮೆ.