ಹೊಳೆಯಲ್ಲಿ ರಭಸವಾಗಿ ಹರಿಯುವ ನೀರು ಏಕಾಏಕಿ ಮಾಯ, ಪ್ರಾಕೃತಿಕ ವಿಸ್ಮಯಕ್ಕೆ ಬೆರಗಾದ ಜನ
ತೋಡಿನಲ್ಲಿ ಅತಿ ರಭಸವಾಗಿ ಹರಿಯುವ ನೀರು ಇದ್ದಕ್ಕಿದ್ದಂತೆ ಭೂಮಿಯೊಳಗೆ ಇಂಗಿ ಮಾಯವಾಗುವ ಅದ್ಬುತ ಘಟನೆ ವರದಿಯಾಗಿದೆ. ಆ ನೀರು ಮತ್ತೆಲ್ಲೋ ಕಿಲೋಮೀಟರ್ ಗಳ ದೂರದಲ್ಲಿ ಭೂಮಿಯಿಂದ ದಿಗಲ್ಲನೆ ಚಿಮ್ಮಿ ಬಿಡುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಕಾಸರಗೋಡು ಜಿಲ್ಲೆಯ ಕೋಡೋಂ ಬೇಳೂರು ಪಂಚಾಯಿತಿಯ ಒಡೆಯಂ ಚಾಲ್ ಸಮೀಪ ಈ ಅಚ್ಚರಿಯ ಘಟನೆ ಕಂಡು ಬಂದಿದೆ. ಕಾಞಂಗಾಡು-ಪಾಣತ್ತೂರು ರಸ್ತೆಯ ಒಡಯಂಚಾಲ್ ಸಮೀಪದ ತೋಡಿನಲ್ಲಿ ರಭಸವಾಗಿ ಹರಿಯುವ ನೀರು ಏಕಾಏಕಿ ಭೂಗರ್ಭದೊಳಗೆ ಮಾಯವಾಗುತ್ತದೆ. ಏಕಾಏಕಿ ತೋಡಿನ ಆಕಡೆ ನೀರಿಲ್ಲದೆ ಬಿಕೋ ಎನ್ನುತ್ತಿದೆ. ಎಲ್ಲಾ ನೀರು ದಿಢೀರ್ ಅಂತರ್ಮುಖಿಯಾಗುತ್ತಿದೆ.
ಆಮೇಲೆ ಸುಮಾರು 1 ಕಿಲೋಮೀಟರ್ ಗಳ ದೂರದಲ್ಲಿ ನೀರು ಚಿಮ್ಮಿಬಿಡುತ್ತದೆ. ದುರದೃಷ್ಟವೆಂದರೆ ಈ ನೀರು ಅಲ್ಲಿನ ಅಡಿಕೆ ತೋಟ ಒಂದರ ನಡುವಿನಿಂದ ಧಿಡೀರಣೆ ಎದ್ದು ಬಂದು ಸುತ್ತಮುತ್ತ ಐವತ್ತು ಎಕರೆಗಳಷ್ಟು ಕೃಷಿ ಭೂಮಿಯನ್ನು ಆವರಿಸಿಕೊಂಡು ಬಿಡುತ್ತದೆ. ಇದು ಸೃಷ್ಟಿಯ ಒಂದು ವೈಚಿತ್ರ್ಯ ವಲ್ಲದೆ ಬೇರೇನಲ್ಲ. ತಜ್ಞರ ಪ್ರಕಾರ, ಇದು ಭೂಕುಸಿತದ ಪರಿಣಾಮ. ಆಂತರಿಕ ಭೂಕುಸಿತದ ಪರಿಣಾಮ ತೋಡಿನ ( ಸಣ್ಣ ಪ್ರವಾಹ) ನೀರು, ಭೂಮಿಯ ಕವಲುಗಳಲ್ಲಿ ನುಗ್ಗಿ ಹರಿದು, ನಂತರ ಸಿಕ್ಕ ಯಾವುದಾದರೂ ತೆರೆದ ಜಾಗದ ಮೂಲಕ ಮತ್ತೆ ಭೂಮಿಯ ಮೇಲ್ಭಾಗಕ್ಕೆ ಚಿಮ್ಮುತ್ತಿದೆ.
ಲಾಟರೈಟ್ ಮಣ್ಣಿನ ಕಾರಣದಿಂದ ಈ ಚಿಮ್ಮುವಿಕೆ ನಡೆಯುತ್ತಿದೆ ಎನ್ನಲಾಗಿದೆ.
ಸದರಿ ಜಾಗದಲ್ಲಿ ಪಂಚಾಯಿತಿಯವರು ಈ ತರಹ ಚಿಮ್ಮುವ ನೀರನ್ನು ಹರಿಸಲು ಕಾಲುವೆಗಳನ್ನು ಮಾಡಿಕೊಟ್ಟಿದ್ದರು ನೀರಿನ ಪ್ರವಾಹದ ವೇಗ ಜಾಸ್ತಿಯಾಗಿದ್ದು ಸುತ್ತಮುತ್ತಲ 50 ಎಕರೆ ಕೃಷಿ ಭೂಮಿಯಲ್ಲಿ ನೀರು ನಿಂತು, ಚೌಳು ಮಣ್ಣು ಆವರಿಸಿ ಕೃಷಿಕರಿಗೆ ತೊಂದರೆ ಉಂಟುಮಾಡಿದೆ.