ಮಂಗಳೂರು: ಪಠ್ಯ ಸರಿದೂಗಿಸಲು ಸಾರ್ವತ್ರಿಕ ರಜೆಗೆ ಕತ್ತರಿ | ಮಳೆಯ ಕಾರಣ’ವಾರಪೂರ್ತಿ ರಜೆ’ ಹಿನ್ನಲೆ-ಡಿಸಿ ಸೂಚನೆ,
ಮಂಗಳೂರು : ಕರಾವಳಿಯಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕಳೆದ ನಾಲೈದು ದಿನಗಳಿಂದ ಶಾಲಾ ಕಾಲೇಜುಗಳಿಗೆ ನೀಡಲಾಗಿತ್ತು. ರಜೆ ಅವಧಿಯಲ್ಲಿ ನಿರ್ವಹಿಸಬೇಕಾದ ಪಠ್ಯಗಳನ್ನು ಇತರ ಸಾರ್ವತ್ರಿಕ ರಜಾದಿನಗಳಂದು ಸರಿದೂಗಿಸಬೇಕು ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಶಿಕ್ಷಣ ಸಂಸ್ಥೆಗಳಿಗೆ ಸೂಚನೆ ನೀಡಿದ್ದಾರೆ.
ಜಿಲ್ಲೆಯಲ್ಲಿ ವಿಪರೀತ ಮಳೆ ಸುರಿಯುತ್ತಿದ್ದು, ಜಿಲ್ಲೆಯಾದ್ಯಂತ ನಿರಂತರವಾಗಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಕಳೆದ ನಾಲ್ಕು ದಿನಗಳಿಂದ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರ ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ, ಪದವಿ ಕಾಲೇಜು, ಸ್ನಾತಕೋತ್ತರ ಪದವಿ, ಡಿಪ್ಲೊಮಾ, ಐಟಿಐ ಸೇರಿದಂತೆ ಸರ್ಕಾರಿ, ಅನುದಾನಿತ, ಖಾಸಗಿ ವಿದ್ಯಾಸಂಸ್ಥೆಗಳಿಗೆ ರಜೆ ಸಾರಲಾಗಿದ್ದು, ಶನಿವಾರವೂ ರಜೆ ಮುಂದುವರಿಯಲಿದೆ.
ಆದ್ರ್ರಾ ಮಳೆಯ ಅಬ್ಬರ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯನ್ನು ಹೈರಾಣಾಗಿಸಿದೆ. ಹೀಗಾಗಿ ಎರಡೂ ಜಿಲ್ಲೆಗಳಲ್ಲಿ ಕಳೆದ ನಾಲ್ಕು ದಿನಗಳಿಂದ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಸಾಕಷ್ಟು ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ. ಸೋಮವಾರ ಹೊರತುಪಡಿಸಿದರೆ ಈ ವಾರದ ಉಳಿದ ಎಲ್ಲಾ ದಿನಗಳಂದು ಶಾಲೆ ಕಾಲೇಜುಗಳಿಗೆ ರಜೆ ಸಾರಲಾಗಿತ್ತು. ಇನ್ನು ಮುಂದಿನ ಸೋಮವಾರದಿಂದ ಪುನಃ ತರಗತಿಗಳು ಆರಂಭವಾಗಲಿವೆ. ಉಭಯ ಜಿಲ್ಲೆಗಳಲ್ಲಿ ಮಳೆಗಾಗಿ ಒಂದೆರಡು ದಿನ ಶಿಕ್ಷಣ ಸಂಸ್ಥೆಗಳಿಗೆ ರಜೆ ಸಾರಿದ ಉದಾಹರಣೆ ಇದೆ. ಆದರೆ ವಾರಪೂರ್ತಿ ರಜೆ ನೀಡಿರುವುದು ಇದೇ ಮೊದಲು.
ಆದರೆ ಈ ಅವಧಿಯಲ್ಲಿ ನಿರ್ವಹಿಸಬೇಕಾದ ಪಠ್ಯಗಳಿಗೆ ರಜೆಯಿಂದಾಗಿ ಸಮಸ್ಯೆಯಾಗಲಿದ್ದು, ಶೈಕ್ಷಣಿಕ ವರ್ಷದ ಪಠ್ಯಕ್ರಮದ ಮೇಲೂ ಪರಿಣಾಮ ಬೀರಲಿದೆ. ಈ ಅಂಶವನ್ನು ಗಮನದಲ್ಲಿಟ್ಟು ಮಳೆಗಾಗಿ ನೀಡಿದ ರಜೆಯ ಅವಧಿಯಲ್ಲಿ ನಿರ್ವಹಿಸಬೇಕಾದ ಪಠ್ಯಗಳನ್ನು ಇತರ ಸಾರ್ವತ್ರಿಕ ರಜೆಗಳಂದು ಸರಿದೂಗಿಸಬೇಕು ಎಂದು ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಜಿಲ್ಲಾಧಿಕಾರಿಯವರು ಸೂಚನೆ ನೀಡಿದ್ದಾರೆ.