ಬಂಟ್ವಾಳ: ಅಪಾಯದ ಮುನ್ಸೂಚನೆ ಅರಿತರೂ ಆಕೆಯ ನಿರ್ಲಕ್ಷ್ಯಕ್ಕೆ ಬಲಿಯಾಯಿತು ಮೂರು ಅಮಾಯಕ ಜೀವ!! | ಗುಡ್ಡ ಕುಸಿದು ಕಾರ್ಮಿಕರ ಸಾವು ಪ್ರಕರಣಕ್ಕೆ ತಿರುವು
ಬಂಟ್ವಾಳ:ಕಾರ್ಮಿಕರು ತಂಗಿದ್ದ ಶೆಡ್ ಒಂದರ ಮೇಲೆ ಭಾರೀ ಮಳೆಗೆ ಗುಡ್ಡ ಕುಸಿದು, ಮೂವರು ಸ್ಥಳದಲ್ಲೇ ಮೃತಪಟ್ಟು ಓರ್ವ ಗಂಭೀರ ಗಾಯಗೊಂಡ ಘಟನೆಯು ತಾಲೂಕಿನ ಪಂಜಿಕಲ್ಲು ಎಂಬಲ್ಲಿ ನಡೆದಿದೆ. ಈ ಘಟನೆಗೆ ಮನೆಯ ಮಾಲಕಿಯ ನಿರ್ಲಕ್ಷವೇ ಕಾರಣವೆಂದು ಸಾರ್ವಜನಿಕರ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜುಲೈ 5 ರಂದು ಸಂಜೆ ಗುಡ್ಡ ಕುಸಿತದ ಪ್ರದೇಶಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ, ಹಳೆಮನೆ ಕಟ್ಟಡದಲ್ಲಿ ವಾಸವಿದ್ದ ಕಾರ್ಮಿಕರನ್ನು ತೆರವುಗೊಳಿಸುವಂತೆ, ಜಾಗ್ರತೆವಹಿಸಲು ಸೂಚನೆಗಳನ್ನು ನೀಡಲಾಗಿತ್ತು. ಆದರೂ ಕೂಡ ಮನೆ ಮಾಲಕಿ ಬೆನಾಡಿಕ್ವಾ ಕರ್ಲೊ ರವರು ಯಾವುದೇ ಮುಂಜಾಗ್ರತೆ ಕ್ರಮವನ್ನು ವಹಿಸದೆ, ನಿರ್ಲಕ್ಷದಿಂದ ಈ ಘಟನೆಗೆ ಕಾರಣವಾಗಿದ್ದಾರೆ.
ನಿನ್ನೆ ಸುಮಾರು 6.45 ಗಂಟೆಗೆ ಅದೇ ಗುಡ್ಡ ಪುನಃ ಕುಸಿತಗೊಂಡು, ಮಣ್ಣು ಹಳೆಯ ಮನೆಯ ಛಾವಣಿಯ ಮೇಲೆ ಬಿದ್ದಿದೆ. ಇದರಿಂದ ಒಳಗೆ ಇದ್ದ ನಾಲ್ವರು ಕಾರ್ಮಿಕರಲ್ಲಿ ಮೂವರು ಮೃತ ಪಟ್ಟಿದ್ದಾರೆ, ಹಾಗೂ ಒಬ್ಬನಿಗೆ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮೂವರು ಕಾರ್ಮಿಕರು ಮೃತಪಡಲು ಮನೆ ಮಾಲಕಿ ಬೆನಾಡಿಕ್ವಾ ಕರ್ಲೊರವರು ಅವರ ನಿರ್ಲಕ್ಷ ಕಾರಣವಾಗಿರುತ್ತದೆ ಎಂದು ಗ್ರಾಮಕರಣಿ ಸಂತೋಷ್ ಅವರ ದೂರಿಂನಂತೆ 304A ಪ್ರಕರಣ ದಾಖಲೆಯಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೃಷಿಕೇಶ್ ಸೋನಾವಣೆ ಮಾಹಿತಿ ನೀಡಿದ್ದಾರೆ.
ಆದರೆ ಮನೆ ಮಾಲಾಕಿ ಹೇಳುವಂತೆ ಜುಲೈ 5 ರಂದು ಗುಡ್ಡ ಕುಸಿತದ ಬಗ್ಗೆ ಮಾಹಿತಿ ನೀಡಿದ್ದು, ಗ್ರಾಮಕರಣಿಕರು ಇದರ ಬಗ್ಗೆ ಯಾವುದೇ ಮುನ್ನೆಚ್ಚರಿಕೆವಹಿಸಲಿಲ್ಲ. ಕಾರ್ಮಿಕರು ವಾಸ್ತವ್ಯ ಇರುವ ಬಳಿ ಗುಡ್ಡ ಕುಸಿಯುವ ಯಾವ ಪರಿಕಲ್ಪನೆ ಕೂಡ ಇರಲಿಲ್ಲ. ಈ ಘಟನೆ ನಡೆಯುವವರೆಗೂ ಮನೆ ಖಾಲಿ ಮಾಡಿ ಎಂದು ಹೇಳಿಲ್ಲ. ವಿ ವಿ ಸುಳ್ಳು ಹೇಳುತ್ತಿದ್ದು, ನನ್ನ ವಿರುದ್ಧವೇ ಸುಳ್ಳು ದೂರು ನೀಡಿದ್ದಾರೆಂದು ಬೆನಾಡಿಕ್ವಾ ಕರ್ಲೊ ಹೇಳಿದ್ದಾರೆ.
ಇನ್ನು ಈ ಘಟನೆಯಲ್ಲಿ ಮೃತ ಪಟ್ಟವರನ್ನು ಕೇರಳ ಮೂಲದ ಬಿಜು,ಸಂತೋಷ್, ಬಾಬು ಎಂದು ಗುರುತಿಸಲಾಗಿದ್ದು, ಗಾಯಗೊಂಡ ವ್ಯಕ್ತಿಯನ್ನು ಜಾನ್ ಎಂದು ಗುರುತಿಸಲಾಗಿದೆ. ರಬ್ಬರ್ ಟ್ಯಾಪಿಂಗ್ ಕೆಲಸ ಮಾಡಲು ಬಂಟ್ವಾಳದ ಪಂಜಿಕಲ್ಲು ಎಂಬಲ್ಲಿನ ರಬ್ಬರ್ ತೋಟವೊಂದಕ್ಕೆ ಬಂದಿದ್ದರು. ರಾತ್ರಿ ಸುರಿದ ಭಾರೀ ಮಳೆಗೆ ಇವರು ತಂಗಿದ್ದ ಶೆಡ್ ಮೇಲೆ ಬೃಹತ್ ಆಕಾರದ ಬಂಡೆಯ ಜೊತೆಗೆ ಗುಡ್ಡ ಕುಸಿದು ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.