ವಿಟ್ಲ : ಭಾರೀ ಮಳೆಯ ಕಾರಣ ಗುಡ್ಡ ಕುಸಿತ, ಸಂಪರ್ಕ ಕಡಿತ
ಅತಿಯಾದ ಮಳೆಯಿಂದಾಗಿ ವಿಟ್ಲ ಸಮೀಪ ಸಾರಡ್ಕದಲ್ಲಿ ಗುಡ್ಡ ಜರಿದು ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ.
ಕಲ್ಲಡ್ಕ-ಕಾಂಞಂಗಾಡ್ ಅಂತಾರಾಜ್ಯ ಹೆದ್ದಾರಿಯ ಸಾರಡ್ಕದಲ್ಲಿ ಗುಡ್ಡ ಕುಸಿದಿದ್ದು, ಪರಿಣಾಮವಾಗಿ ಕೇರಳ ಕರ್ನಾಟಕ ನಡುವಿನ ಸಂಪರ್ಕ ಬಂದ್ ಆಗಿದೆ. ರಸ್ತೆಯಲ್ಲಿ ಕಲ್ಲುಮಣ್ಣು ಗಿಡಮರಗಳು ತುಂಬಿದ್ದು, ಬದಿಯಡ್ಕ, ಪೆರ್ಲ, ಕಾಸರಗೋಡು ಮತ್ತಿತರೆಡೆಗೆ ಹೋಗುವವರು ಸುತ್ತುಬಳಕೆಯ ಮಾರ್ಗವನ್ನು ಅವಲಂಬಿಸಬೇಕಾಗಿದೆ.
ನಿನ್ನೆಯಿಂದ ಸುರಿಯುತ್ತಿರುವ ಭಾರಿ ಮಳೆಗೆ ಕರಾವಳಿ ಜನ ತತ್ತರಿಸಿ ಹೋಗಿದ್ದಾರೆ. ಶಾಲಾ ಕಾಲೇಜುಗಳಿಗೆ ರಜೆ ಕೂಡಾ ಘೋಷಣೆ ಮಾಡಲಾಗಿದೆ. ಅಷ್ಟು ಮಾತ್ರವಲ್ಲದೇ ಮುಂದಿನ ಎರಡು ದಿನ ಭಾರೀ ಮಳೆ ಸುರಿಯುವ ಸಂಭವವಿದ್ದು, ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಜಿಲ್ಲೆಯಾದ್ಯಂತ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.