ಕಡಬ: ಬಲ್ಯ ಶಾಲೆ ಸಂಪರ್ಕ ರಸ್ತೆಯ ಬದಿಯಲ್ಲೇ ಊರವರ ವಿರೋಧದ ನಡುವೆ ಸ್ಥಳೀಯ ವ್ಯಕ್ತಿಯಿಂದ ಕಾಂಪೌಂಡ್ ನಿರ್ಮಾಣ!! ಸ್ಥಳಕ್ಕೆ ಅಧಿಕಾರಿಗಳ ಭೇಟಿ-ಸಮಸ್ಯೆ ಬಗೆಹರಿಸುವ ಭರವಸೆ

ಕಡಬ: ತಾಲೂಕಿನ ಬಲ್ಯ ಗ್ರಾಮದ ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ಬಲ್ಯ ಇದರ ಸಂಪರ್ಕ ರಸ್ತೆಯ ಬದಿಯಲ್ಲೇ ಸ್ಥಳೀಯ ವ್ಯಕ್ತಿಯೊಬ್ಬರು ಕಾಂಪೌಂಡ್ ನಿರ್ಮಿಸಲು ಮುಂದಾಗಿದ್ದು, ಪ್ರಸ್ತುತ ಅಗಲ ಕಿರಿದಾಗಿ ಸಂಚಾರಕ್ಕೆ ತೊಡಕು ಉಂಟಾಗಿದೆ ಎನ್ನುವ ಕೂಗೊಂದು ಸ್ಥಳೀಯ ನಿವಾಸಿಗಳಿಂದ ಕೇಳಿ ಬಂದಿದೆ.

ಸುಮಾರು 95 ವರ್ಷಗಳ ಇತಿಹಾಸವಿರುವ ಹಿರಿಯ ಪ್ರಾಥಮಿಕ ಶಾಲೆಯ ಸಂಪರ್ಕ ರಸ್ತೆಯು 1987ನೇ ಇಸವಿಯಲ್ಲಿ ‘ಆಳುಕಾಳು’ ಯೋಜನೆಯಡಿಯಲ್ಲಿ ಕಡಬ ಮಂಡಲ ಪಂಚಾಯತ್ ವತಿಯಿಂದ ಸುಮಾರು 16 ಅಡಿ ರಸ್ತೆ ನಿರ್ಮಿಸಲಾಗಿತ್ತು.ಕಾಲ ಕ್ರಮೇಣ ಒತ್ತುವರಿ ಕಾರಣದಿಂದಾಗಿ ರಸ್ತೆಯ ಅಗಲ ಕಡಿಮೆಯಾಗಿತ್ತು.

ಈ ನಡುವೆ ಸ್ಥಳೀಯ ವ್ಯಕ್ತಿಯೊಬ್ಬರು ರಸ್ತೆಯ ಅಂಚಿನಲ್ಲೇ ಕಾಂಪೌಂಡ್ ನಿರ್ಮಿಸಲು ಮುಂದಾಗಿದ್ದು, ಒಂದು ವೇಳೆ ಕಾಂಪೌಂಡ್ ನಿರ್ಮಿಸಿದಲ್ಲಿ ರಸ್ತೆಯು ಇನ್ನಷ್ಟು ಕಿರಿದಾಗಲಿದೆ. ಸದ್ರಿ ರಸ್ತೆಗೆ ಕಾಂಕ್ರಿಟ್ ಹಾಕಲು ಅನುದಾನವು ಮಂಜೂರಾಗಿದೆ ಎನ್ನುವ ಮಾಹಿತಿಗಳು ಮೂಲಗಳಿಂದ ತಿಳಿದುಬಂದಿದೆ.ಅದಲ್ಲದೇ ಹಲವು ವರ್ಷಗಳಿಂದ ಇದೇ ಶಾಲೆಯಲ್ಲಿ ಮತದಾನ ನಡೆಯುತ್ತಿದ್ದು, ಮತಪೆಟ್ಟಿಗೆ ಹೊತ್ತು ತರುವ ಬಸ್ಸು, ಸ್ಥಳೀಯರ ಮನೆಗೆ ತೆರಳುವ ಘನ ವಾಹನಗಳ ಸಂಚಾರಕ್ಕೆ ಭಾರೀ ತೊಂದರೆಯಾಗುವ ಪರಿಸ್ಥಿತಿ ಎದುರಾಗಿರುವ ವಿಷಾದನೀಯ.

ಈ ಬಗ್ಗೆ ಸ್ಥಳೀಯ ನಿವಾಸಿಗಳು ಕುಟ್ರುಪಾಡಿ ಗ್ರಾಮ ಪಂಚಾಯತ್ ಗೆ ಸಮಸ್ಯೆಯ ಕುರಿತು ಮನವರಿಕೆ ಮಾಡಿದ್ದು,ಸ್ಥಳಕ್ಕಾಗಮಿಸಿದ ಅಧ್ಯಕ್ಷರ ಸಹಿತ ಅಧಿಕಾರಿ ವರ್ಗ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಸೂಚಿಸಿದ್ದರೂ ಕೇರ್ ಅನ್ನದೆ ಕಾಂಪೌಂಡ್ ನಿರ್ಮಾಣ ಕಾರ್ಯ ಮಾಡಿದ್ದ ಎನ್ನುವ ಆರೋಪವೂ ಕೇಳಿಬಂದಿದೆ.ಕೂಡಲೇ ಇಲ್ಲಿನ ಸ್ಥಳೀಯ ನಿವಾಸಿಗಳ ಸಮಸ್ಯೆಯ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆನ್ನುವ ಆಗ್ರಹ ವ್ಯಕ್ತವಾಗಿದೆ.

Leave A Reply

Your email address will not be published.