ಕಾರ್ಕಳದಿಂದ ನಾಪತ್ತೆಯಾಗಿದ್ದ ಅಜ್ಜಿ ಬೆಳ್ತಂಗಡಿಯಲ್ಲಿ ಪತ್ತೆ!
ಬೆಳ್ತಂಗಡಿ : ಭಾನುವಾರದಿಂದ ಮನೆಯಿಂದ ನಾಪತ್ತೆಯಾಗಿದ್ದ ಕಾರ್ಕಳದ ಅಜ್ಜಿ, ಬೆಳ್ತಂಗಡಿ 112 ಪೊಲೀಸರ ಸಹಾಯದಿಂದ ಸೋಮವಾರ ರಾತ್ರಿ ಮರಳಿ ಮನೆ ಸೇರಿದ್ದಾರೆ.
ನಾಪತ್ತೆಯಾಗಿ ಪತ್ತೆಯಾದವರು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನೆಲ್ಲಿಗುಡ್ಡೆಯ ಹಳೆಕಟ್ಟೆ ನಿವಾಸಿಯಾಗಿರುವ ಸಾವಿತ್ರಿ ಭಟ್ (82).
ಇವರಿಗೆ ಮೂವರು ಮಕ್ಕಳಿದ್ದು, ಇಬ್ಬರು ಸತೀಶ್ ಭಟ್ ಮತ್ತು ರಮೇಶ್ ಭಟ್ ಗಂಡು ಮಕ್ಕಳು ಹಾಗೂ ಒಬ್ಬಳು ಮಗಳಾದ ವಿಜಯ ಭಟ್. ಮಗಳನ್ನು ಬೆಳ್ತಂಗಡಿಯ ಕಳಿಯ ಗ್ರಾಮದ ನಾಳಕ್ಕೆ ಮದುವೆ ಮಾಡಿಕೊಡಲಾಗಿದ್ದು. ಸಾವಿತ್ರಿ ಸತೀಶ್ ಜೊತೆ ಹಳೆಕಟ್ಟೆಯಲ್ಲಿ ವಾಸವಾಗಿದ್ದು, ಸತೀಶ್ ಗೆ ಅನಾರೋಗ್ಯ ಇದ್ದು ಮನೆಗೆ ಸರಿಯಾಗಿ ಬರುವುದಿಲ್ಲ ಎಂದು ಭಾನುವಾರ ಏಕಾಏಕಿ ತಾಯಿ ಸಾವಿತ್ರಿ ಮನೆಯಿಂದ ನಾಪತ್ತೆಯಾಗಿದ್ದರು.
ಆದ್ರೆ ಮನೆಯವರು ಇದನ್ನು ತಲೆಕೆಡಿಸಿಕೊಂಡಿರಲ್ಲಿಲ್ಲ. ಸೋಮವಾರ ಸಂಜೆ ಸುಮಾರು 7:30 ರ ವೇಳೆಗೆ ಉಜಿರೆಯ ಅತ್ತಾಜೆ ನಿವಾಸಿ ವಿಜಯ್ ಎಂಬವರು ಲಾಯಿಲ ಬ್ರಿಜ್ ಬಳಿ ಅಜ್ಜಿ ಮಳೆಯಲ್ಲಿ ರಸ್ತೆಯಲ್ಲಿ ಇರುವುದು ಕಂಡಿದೆ. ಇವರನ್ನು ವಿಚಾರಿಸಿದಾಗ ಸರಿಯಾಗಿ ಉತ್ತರ ಸಿಗಲಿಲ್ಲ. ಕೊನೆಗೆ ವಿಡಿಯೋ ಒಂದು ಮಾಡಿ ಸಾಮಾಜಿಕಜಾಲತಾಣದಲ್ಲಿ ಬಿಟ್ಟಿದ್ದರು.
ನಂತರ ಪೊಲೀಸರ ಸಹಾಯವಾಣಿ 112 ಗೆ ಕರೆ ಮಾಡಿ ಮಾಹಿತಿ ಕೊಟ್ಟಿದ್ದರು. ಅದರಲ್ಲಿದ್ದ ಬೆಳ್ತಂಗಡಿ ಹೆಡ್ ಕಾನ್ಟೇಬಲ್ ಸುಂದರ್ ಶೆಟ್ಟಿ ಮತ್ತು ಚಾಲಕ ಶಿವರಾಜ್ ಸ್ಥಳಕ್ಕೆ ಧಾವಿಸಿದ್ದು, ಅವರನ್ನು ಬೆಳ್ತಂಗಡಿ ಪೊಲೀಸ್ ಠಾಣೆಗೆ ಕರೆತರಲಾಗಿತ್ತು.
ಹೆಡ್ ಕಾನ್ ಸ್ಟೇಬಲ್ ಸುಂದರ್ ಶೆಟ್ಟಿ, ಅಜ್ಜಿಯ ಬಳಿ ಇದ್ದ ಪ್ಲಾಸ್ಟಿಕ್ ಬ್ಯಾಗ್ ತೆಗೆದು ಪರಿಶೀಲನೆ ನಡೆಸಿದಾಗ ಸತೀಶ್ ಎಂಬವರ ನೆಲ್ಲಿಗುಡ್ಡೆ ಮುರ್ತೆದಾರರ ಸಂಘದ ಪಾಸ್ ಬುಕ್ ಇತ್ತು. ಇದನ್ನು ಇಂಟರ್ ನೆಟ್ ಮೂಲಕ ಪರಿಶೀಲನೆ ನಡೆಸಿದಾಗ, ಕಾರ್ಕಳ ಬಳಿ ಎಂದು ಗೊತ್ತಾಗಿದೆ. ನಂತರ ಕಾರ್ಕಳ ಗ್ರಾಮಾಂತರ ಪೊಲೀಸರ ಬಳಿ ಮಾಹಿತಿ ಹಂಚಿಕೊಂಡು, ವಿಳಾಸ ಪತ್ತೆಗೆ ವಿನಂತಿಸಿದ್ದರು. ನಂತರ ಬೆಳ್ತಂಗಡಿ ಪೊಲೀಸ್ ಠಾಣೆಗೆ ನಾಳಕ್ಕೆ ಮದುವೆ ಮಾಡಿಕೊಡಲಾಗಿದ್ದ ವಿಜಯ ಮತ್ತು ಅವರ ಗಂಡ ಬಂದು ಅಜ್ಜಿಯನ್ನು ಮನೆಗೆ ಮರಳಿ ಕರೆದುಕೊಂಡು ಹೋಗಿದ್ದಾರೆ . ಇನ್ನೂ ಅಜ್ಜಿ ಕಾರ್ಕಳದಿಂದ ಬೆಳ್ತಂಗಡಿಗೆ ಹೇಗೆ ಬಂದರು ಎಂದು ತಿಳಿದುಬಂದಿಲ್ಲ.
ಅಜ್ಜಿಯ ಪತ್ತೆಗೆ ಸಹಕರಿಸಿದ ವಿಜಯ ಅತ್ತಾಜೆ , ಬೆಳ್ತಂಗಡಿ ಪೊಲೀಸ್ ಠಾಣೆಯ ಹೆಡ್ ಕಾನ್ಟೇಬಲ್ ಸುಂದರ್ ಶೆಟ್ಟಿ ಮತ್ತು 112 ವಾಹನ ಚಾಲಕ ಶಿವರಾಜ್ ಅವರ ಸಹಾಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.